ADVERTISEMENT

ರೈತರೇ ಖರ್ಚು ಮಾಡಿ, ಎರಡು ಕಡೆ ಗೆಲ್ಲಿಸಿದರು

ಇ.ಎಸ್.ಸುಧೀಂದ್ರ ಪ್ರಸಾದ್
Published 19 ಫೆಬ್ರುವರಿ 2018, 9:23 IST
Last Updated 19 ಫೆಬ್ರುವರಿ 2018, 9:23 IST
ಬಾಬಾಗೌಡ ಪಾಟೀಲ
ಬಾಬಾಗೌಡ ಪಾಟೀಲ   

ಧಾರವಾಡ: ರೈತರು ತಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಅವರ ಪಕ್ಷಾತೀತ ನಾಯಕರಂತೆ ಕಂಡ ಬಾಬಾಗೌಡ ಪಾಟೀಲ ಅವರು 1989ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ ಕಿತ್ತೂರು ಹಾಗೂ ಧಾರವಾಡ ಕ್ಷೇತ್ರದಿಂದ ಸ್ಪರ್ಧಿಸಿ ಗೆದಿದ್ದರು.

ಈ ಚುನಾವಣೆಯಲ್ಲಿ ಎರಡೂ ಕ್ಷೇತ್ರದಿಂದ ಬಾಬಾಗೌಡ ಅವರು ಖರ್ಚು ಮಾಡಿದ್ದು ಕೇವಲ ₹ 40 ಸಾವಿರ ಎಂದರೆ, ಪ್ರಸ್ತುತ ದಿನಗಳಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ಗೆದ್ದವರಿಗೂ ಊಹಿಸುವುದು ಕಷ್ಟವಾದೀತು.

ಬಾಬಾಗೌಡರು ಕರೆ ಕೊಟ್ಟರೆ ನೂರಾರು ಚಕ್ಕಡಿ ಹಾಗೂ ಟ್ರ್ಯಾಕ್ಟರ್‌ಗಳು ಬೀದಿಗಿಳಿಯುತ್ತಿದ್ದವು. ಹೆದ್ದಾರಿ ದಿನಗಟ್ಟಲೆ ಬಂದ್‌ ಆಗುತ್ತಿತ್ತು. ಯಾವುದೇ ಬೇಡಿಕೆಗಳಿಗೆ ಒಳಗಾಗದೆ ರೈತರು ಸ್ವಯಂ ಪ್ರೇರಿತರಾಗಿ ಬುತ್ತಿ ಕಟ್ಟಿಕೊಂಡು ಹೋರಾಟಕ್ಕೆ ಕೂರುತ್ತಿದ್ದರು. ರೈತರೇ ಇವರನ್ನು ಚುನಾವಣೆಗೆ ನಿಲ್ಲಿಸಿದ್ದು ಮಾತ್ರವಲ್ಲ, ಬಹಳಷ್ಟು ಖರ್ಚುಗಳನ್ನು ಅವರೇ ನೋಡಿಕೊಂಡಿದ್ದನ್ನು ಸ್ವತಃ ಬಾಬಾಗೌಡ ಪಾಟೀಲ ಹಾಗೂ ಅಂದಿನ ಹಲವರು ನೆನಪಿಸಿಕೊಳ್ಳುತ್ತಾರೆ.

ADVERTISEMENT

‘ರೈತರ ಶೋಷಣೆ ತೀವ್ರವಾಗಿತ್ತು. ಲೇವಿ ಕಟ್ಟದಿದ್ದರೆ ಮನೆಯಲ್ಲಿದ್ದ ಕಾಳುಕಡಿ ಹೊತ್ತೊಯ್ಯುತ್ತಿದ್ದರು. ಮನೆಯಲ್ಲಿ ಊಟಕ್ಕೆ ಧಾನ್ಯ ಇಲ್ಲದಿದ್ದರೂ, ಖರೀದಿ ಮಾಡಿ ಸರ್ಕಾರಕ್ಕೆ ಕೊಡಬೇಕಿತ್ತು. ಟ್ರ್ಯಾಕ್ಟರ್‌ಗಳು ಹೊಲಕ್ಕೆ ಇಳಿಯುವಂತಿರಲಿಲ್ಲ. ಸರ್ಕಾರದ ನೀತಿಗಳು ರೈತರ ಸ್ವಾಭಿಮಾನ ಕೆರಳಿಸುವಂತಿತ್ತು. ಇಂಥ ಸಂದರ್ಭದಲ್ಲಿ ಸ್ವಾಭಿಮಾನ ಉಳಿಸಿಕೊಳ್ಳುವ ಹೋರಾಟ ಆರಂಭವಾದಾಗ, ರೈತರು ಸಹಜವಾಗಿ ಬೆಂಬಲ ವ್ಯಕ್ತಪಡಿಸಿದರು. ಹೋರಾಟ ಮಾಡಿ ನಮ್ಮ ಸ್ವಾಭಿಮಾನ ಕಾಪಾಡಿಕೊಳ್ಳುವ ಮನಸ್ಥಿತಿಯಲ್ಲಿದ್ದ ನಾನು, ಕನಸಿನಲ್ಲಿಯೂ ಶಾಸಕನಾಗಬೇಕು ಎಂದುಕೊಂಡಿರಲಿಲ್ಲ’ ಎಂದು ಬಾಬಾಗೌಡ ಪಾಟೀಲ ನೆನಪಿಸಿಕೊಂಡರು.

‘ಜನರೇ ನನ್ನನ್ನು ನಾಯಕ ಎಂದು ಬಿಂಬಿಸಿದರು. ಚುನಾವಣೆಗೆ ಸ್ಪರ್ಧಿಸಬೇಕು ಎಂದೂ ಅವರೇ ಹಠ ಹಿಡಿದರು. ಅದೇ ಸಂದರ್ಭದಲ್ಲಿ ಪ್ರೊ.ನಂಜುಂಡಸ್ವಾಮಿ ಅವರು ಈ ಹೋರಾಟದಲ್ಲಿ ಜತೆಯಾದರೂ. ಕೃಷಿಕರಲ್ಲದಿದ್ದರೂ, ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಜಾಗತಿಕ ವಿಷಯ ಹಾಗೂ ಕಾನೂನು ಬಲ್ಲವರಾಗಿದ್ದರು. ಹೀಗಾಗಿ ಅವರೊಂದಿಗೆ ಸೇರಿಕೊಂಡೆ, ಜನತಾ ಪಕ್ಷದ ಮುಖಂಡರು ತಮ್ಮ ಸ್ವಾರ್ಥಕ್ಕಾಗಿ ನಮಗೆ ಸಾಥ್ ನೀಡಿದರು' ಎಂದರು.

’ಬೆಳಗಾವಿ ಜಿಲ್ಲೆಯವನಾದ್ದರಿಂದ ಕಿತ್ತೂರಿನಲ್ಲಿ ಸ್ಪರ್ಧಿಸಬೇಕು ಎಂಬುದು ರೈತರ ಇರಾದೆಯಾಗಿತ್ತು. ಹೋರಾಟಕ್ಕೆ ಧಾರವಾಡದಿಂದಲೂ ಅಭೂತಪೂರ್ವ ಬೆಂಬಲ ಇದ್ದುದರಿಂದ ಇಲ್ಲಿಂದಲೂ ಸ್ಪರ್ಧಿಸಬೇಕು ಎಂಬುದು ಈ ಭಾಗದವರ ಆಸೆಯಾಗಿತ್ತು. ಹೀಗಾಗಿ ಎರಡೂ ಕಡೆ ಸ್ಪರ್ಧಿಸಿದೆ. ಚುನಾವಣೆಗಾಗಿ ಹೆಚ್ಚು ಖರ್ಚು ಮಾಡಲಿಲ್ಲ. ಪ್ರತಿ ಕ್ಷೇತ್ರಕ್ಕೆ ತಲಾ ₹20 ಸಾವಿರ ಖರ್ಚು ಮಾಡಿದೆ. ಗೋಡೆ ಬರಹ, ಹ್ಯಾಂಡ್‌ಬಿಲ್‌ ಹಾಗೂ ನಾಲ್ಕೈದು ವಾಹನಗಳಿಗಷ್ಟೇ ಖರ್ಚು ಮಾಡಿದ್ದೆ. ಉಳಿದ ಖರ್ಚುಗಳನ್ನು ರೈತರು ಹಾಗೂ ಕಾರ್ಯಕರ್ತರೇ ನೋಡಿಕೊಂಡರು’ ಎಂದು ಬಾಬಾಗೌಡ ಅವರು ನೆನಪಿಸಿಕೊಂಡರು.

‘ರೈತರ ನಿರೀಕ್ಷೆಯಂತೆ ಎರಡೂ ಕ್ಷೇತ್ರಗಳಲ್ಲಿ ಗೆದ್ದುಬಂದೆ. ಕಿತ್ತೂರಿನಲ್ಲಿ ಜನತಾ ಪಕ್ಷದಲ್ಲಿ ಅಂದಿನ ಸಚಿವರಾಗಿದ್ದ ಜಮೀನ್ದಾರ ದಾನಪ್ಪಗೌಡ ಇನಾಮದಾರ ವಿರುದ್ಧ ಸುಮಾರು 14,500 ಮತಗಳ ಅಂತರದಿಂದ ಗೆದ್ದೆ. ಹಾಗೆಯೇ, ಧಾರವಾಡ ಕ್ಷೇತ್ರದಲ್ಲಿ ಜನತಾ ಪಕ್ಷದವರೇ ಆದ ಹಂಗರಕಿ ದೇಸಾಯಿ ಕುಟುಂಬದ ಎ.ಬಿ.ದೇಸಾಯಿ ವಿರುದ್ಧವೂ 14,300 ಮತಗಳ ಅಂತರದಿಂದ ಜಯಗಳಿಸಿದೆ’ ಎಂದರು.

‘ಒಂದು ಕ್ಷೇತ್ರವನ್ನು ಬಿಟ್ಟುಕೊಡಬೇಕಾದ ಸಂದರ್ಭದಲ್ಲಿ ಕಾರ್ಯಕರ್ತರು ಕಿತ್ತೂರು ಇಟ್ಟುಕೊಳ್ಳುವಂತೆ ಸಲಹೆ ನೀಡಿದರು. ಹೀಗಾಗಿ ಧಾರವಾಡ ಕ್ಷೇತ್ರದಲ್ಲಿ ಪ್ರೊ. ನಂಜುಂಡಸ್ವಾಮಿ ಅವರನ್ನು ತಂದು ನಿಲ್ಲಿಸಿದೆವು. ಹಿಂದೆ ತಿರುಗಿ ನೋಡಿದರೆ ಈಗೆನಿಸುತ್ತಿದೆ. ಅಂದು ನಾನು ತೆಗೆದುಕೊಂಡಿದ್ದ ನಿರ್ಧಾರ ತಪ್ಪಾಗಿತ್ತು’ ಎಂದರು.

‘ಉಪ ಚುನಾವಣೆಯ ಸಂದರ್ಭದಲ್ಲಿ ‘ಕಾಂಗ್ರೆಸ್‌ನವರಿಗೆ ಹುಟ್ಟಿದವರು ಕಾಂಗ್ರೆಸ್‌ಗೆ ಮತ ಹಾಕಿ, ಜನತಾ ಪಕ್ಷಕ್ಕೆ ಹುಟ್ಟಿದವರು ಆ ಪಕ್ಷಕ್ಕೆ ಮತ ಹಾಕಿ, ರೈತರಿಗೆ ಹುಟ್ಟಿದವರು ರೈತ ಸಂಘಕ್ಕೆ ಮತ ಹಾಕಿ’ ಎಂಬ ನಂಜುಂಡಸ್ವಾಮಿ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಯಿತು. ಜನರು ನನ್ನ ಬಳಿ ಬಂದು ಎಂಥವರನ್ನು ಕರೆತಂದಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ನಾನೇ ಚುನಾವಣಾ ಪ್ರಚಾರ ನಡೆಸಿದೆ. ಆ ಭಾರಿಯೂ ಗೆಲುವಿನ ಅಂತರದಲ್ಲಿ ಯಾವುದೇ ವ್ಯತ್ಯಾಸವಾಗಲಿಲ್ಲ’ ಎಂದರು.

‘ಮುಂದೆ ನನ್ನ ಮನಸ್ಥಿತಿಗೆ ಹೊಂದುವಂಥ ಪಕ್ಷದ ಜತೆ ಗುರುತಿಸಿಕೊಂಡು, ಚುನಾವಣೆಯಲ್ಲಿ ಸ್ಪರ್ಧಿಸುವ ಹಾಗೂ ರೈತ ಸಮುದಾಯದ ನೈಜ ಸಮಸ್ಯೆಗಳನ್ನೇ ಪ್ರಧಾನವಾಗಿಟ್ಟುಕೊಂಡು ಹೋರಾಟ ಮಾಡಬೇಕು ಎಂಬ ವಿಷಯದಲ್ಲಿನ ಕೆಲ ಭಿನ್ನಾಭಿಪ್ರಾಯದಿಂದಾಗಿ ಅನಿವಾರ್ಯವಾಗಿ ಇತರ ಪಕ್ಷಗಳ ಕಡೆ ಮುಖ ಮಾಡಬೇಕಾಯಿತು. ಹೀಗಾಗಿ ಇಂದು ಕೇಳಿಬರುತ್ತಿರುವ ಪಕ್ಷಾಂತರಿ ಎಂಬ ಟೀಕೆಯನ್ನು ನಮ್ರತೆಯಿಂದ ಒಪ್ಪಿಕೊಳ್ಳುವೆ’ ಎನ್ನುತ್ತಾರೆ ಬಾಬಾಗೌಡ ಪಾಟೀಲ.

ಇಂದಿಗೂ ರೈತಾಪಿ ಬದುಕು

ಬಾಬಾಗೌಡ ಪಾಟೀಲ ಅವರು 1945 ಜನವರಿ 6ರಂದು ಬೆಳಗಾವಿ ಜಿಲ್ಲೆಯ ಚಿಕ್ಕಬಾಗೇವಾಡಿ ಗ್ರಾಮದಲ್ಲಿ ಜನಿಸಿದರು. ಬಿ.ಎಸ್ಸಿ. ಪದವೀಧರರಾಗಿರುವ ಇವರು ರೈತ ಹೋರಾಟಗಾರರಾದರು. ರೈತ ಚಳವಳಿ ಮೂಲಕವೇ ರಾಜಕೀಯ ಪ್ರವೇಶಿಸಿದರು. ಕೇಂದ್ರದಲ್ಲಿ ಸಚಿವರಾಗಿದ್ದ ಇವರು ಇಂದಿಗೂ ರೈತಾಪಿ ಬದುಕು ಸಾಗಿಸುತ್ತಿದ್ದಾರೆ. ಜತೆಗೆ ಮಲಪ್ರಭಾ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ನಿರ್ದೇಶಕರಾಗಿದ್ದಾರೆ.

ಬಾಬಾಗೌಡ ಪಾಟೀಲ ಅವರ ರಾಜಕೀಯ ನಡೆ

* 1989: ಕಿತ್ತೂರು ಹಾಗೂ ಧಾರವಾಡ ವಿಧಾನಸಭಾ ಕ್ಷೇತ್ರದಿಂದ ಕರ್ನಾಟಕ ರೈತ ಸಂಘದಿಂದ ಸ್ಪರ್ಧಿಸಿ ಗೆಲುವು

* 1994: ಕಿತ್ತೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು

* 1994: ಬಿಜೆಪಿ ಸೇರ್ಪಡೆ, ಸಂಸತ್‌ ಚುನಾವಣೆಯಲ್ಲಿ ಬೆಳಗಾವಿಯಿಂದ ಸ್ಪರ್ಧೆ, ಸೋಲು

*1998: ಬಿಜೆಪಿಯಿಂದಲೇ ಬೆಳಗಾವಿ ಲೋಕಸಭಾ ಚುನಾವಣೆಗೆ ಸ್ಪರ್ಧೆ. ಗೆಲುವು

* ವಾಜಪೇಯಿ ಅವರ 13 ತಿಂಗಳ ಸರ್ಕಾರದಲ್ಲಿ ಗ್ರಾಮೀಣ ಅಭಿವೃದ್ಧಿ ಹಾಗೂ ಉದ್ಯೋಗ ಖಾತೆ ಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.