ADVERTISEMENT

6 ಲಕ್ಷ ಮೊತ್ತದ ಚಿನ್ನಾಭರಣ ಕಳವು;ಹೈಕೋರ್ಟ್ ವಸತಿಗೃಹದಲ್ಲಿ ಮಧ್ಯರಾತ್ರಿ ಕಳ್ಳರ ಕರಾಮತ್ತು

​ಪ್ರಜಾವಾಣಿ ವಾರ್ತೆ
Published 16 ಜೂನ್ 2012, 6:00 IST
Last Updated 16 ಜೂನ್ 2012, 6:00 IST

ಧಾರವಾಡ:  ಇಲ್ಲಿಗೆ ಸಮೀಪದ ಹೈಕೋರ್ಟ್ ಸಂಚಾರಿ ಪೀಠದ ಆವರಣದಲ್ಲಿರುವ ಸಿಬ್ಬಂದಿಯ ವಸತಿಗೃಹಗಳಿಗೆ ಗುರುವಾರ ಮಧ್ಯರಾತ್ರಿ ನುಗ್ಗಿದ ಕಳ್ಳರು ಐದು ಮನೆಗಳ ಬಾಗಿಲು ಚಿಲಕ ಮುರಿದು ಸುಮಾರು ಆರು ಲಕ್ಷಕ್ಕೂ ಅಧಿಕ ಮೊತ್ತದ ಚಿನ್ನಾಭರಣ ಹಾಗೂ ನಗದನ್ನು ದೋಚಿದ್ದಾರೆ.

ಆ ಮನೆಗಳಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಕಳ್ಳರು ಅಕ್ಕಪಕ್ಕದ ಮನೆಗಳ ಚಿಲಕವನ್ನು ಭದ್ರಪಡಿಸಿಕೊಂಡು ಮನೆ ಬಾಗಿಲುಗಳ ಸ್ಕ್ರೂಗಳನ್ನು ಮುರಿದು ಚಿನ್ನಾಭರಣ ಹಾಗೂ ನಗದನ್ನು ದೋಚಿದ್ದಾರೆ.
ಈ ಘಟನೆ ರಾತ್ರಿ ಎರಡು ಗಂಟೆ ಸುಮಾರಿಗೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಘಟನೆ ತಿಳಿಯುತ್ತಿದ್ದಂತೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರವಿಕುಮಾರ್ ವೈ.ಎಸ್., ಡಿಎಸ್‌ಪಿ ರಾಜೇಶ ಬನಹಟ್ಟಿ, ಗರಗ ಠಾಣೆಯ ಪಿಎಸ್‌ಐ ಎಂ.ಬಿ. ಗೊರವನಕೊಳ್ಳ, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಒಟ್ಟು 21 ತೊಲಿ ಚಿನ್ನ, ಎರಡು ಕೆ.ಜಿ. ಬೆಳ್ಳಿ ಹಾಗೂ ರೂ 10 ಸಾವಿರ ನಗದು ಲೂಟಿಯಾಗಿದೆ. ಬಿ2 ವಸತಿಗೃಹದ ಮನೆ ಸಂಖ್ಯೆ 14, 24, ಬಿ1ನ 14, ಸಿ2 ಮನೆ ಸಂಖ್ಯೆ 7 ಸೇರಿದಂತೆ ಒಟ್ಟು ಐದು ಮನೆಗಳಲ್ಲಿ ಕಳ್ಳತನ ನಡೆದಿದೆ. ಈ ಮನೆಗಳಲ್ಲಿ ಪ್ರಥಮ (ಎಫ್‌ಡಿಎ) ಹಾಗೂ ದ್ವಿತೀಯ ದರ್ಜೆ (ಎಸ್‌ಡಿಎ) ಹಂತದ ಉದ್ಯೋಗಿಗಳು ವಾಸವಾಗಿದ್ದಾರೆ.

ವಿ.ಎನ್.ಪಾಟೀಲ ಎಂಬುವವರು ತಮ್ಮ ಸಂಬಂಧಿಕರ ಮದುವೆಗೆಂದು ರಾಮದುರ್ಗ ತಾಲ್ಲೂಕಿನ ಕಡಕೋಳಕ್ಕೆ ಹೋಗಿದ್ದರು. ಸುಚಿತ್ರಾ ಎಂಬುವವರು ಹೆರಿಗೆಗೆಂದು ತವರು ಜಿಲ್ಲೆ ವಿಜಾಪುರಕ್ಕೆ ಹೋಗಿದ್ದರೆ, ಉಳಿದ ನಿವಾಸಿಗಳಾದ ಪ್ರೇಮಾ ಜಡಿಮಠ ಹಾಗೂ ಯಶವಂತ ಪ್ರಭು ಅವರೂ ಘಟನೆ ನಡೆದ ಸಂದರ್ಭದಲ್ಲಿ ಮನೆಯಲ್ಲಿ ಇರಲಿಲ್ಲ.

ಇನ್ನೊಬ್ಬರ ಮನೆಯ ಗುರುತು ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಚಿನ್ನ, ಬೆಳ್ಳಿ, ನಗದು ಹಣ ಹೊರತುಪಡಿಸಿದರೆ ಇನ್ನಿತರ ಯಾವುದೇ ಬೆಲೆ ಬಾಳುವ ವಸ್ತುಗಳನ್ನು ಕಳ್ಳರು ಒಯ್ದಿಲ್ಲ. ನಗ-ನಾಣ್ಯ ದೋಚಿದ ಬಳಿಕ ಸೂಟ್‌ಕೇಸ್, ಬೀರುಗಳನ್ನು ಯಥಾಸ್ಥಿತಿಯಲ್ಲಿಯೇ ಬಿಟ್ಟು ಪಲಾಯನ ಮಾಡಿದ್ದಾರೆ.

ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಪಿಎಸ್‌ಐ ಗೊರವನಕೊಳ್ಳ `ಪ್ರಜಾವಾಣಿ~ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.