ADVERTISEMENT

ಅಳ್ನಾವರ: ಸಂಪನ್ನಗೊಂಡ ಡೋರಿ ಗ್ರಾಮದೇವಿಯರ ಜಾತ್ರೆ

​ಪ್ರಜಾವಾಣಿ ವಾರ್ತೆ
Published 24 ಮೇ 2025, 14:36 IST
Last Updated 24 ಮೇ 2025, 14:36 IST
ಅಳ್ನಾವರ ತಾಲ್ಲೂಕಿನ ಡೋರಿ ಗ್ರಾಮದೇವಿಯರ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು
ಅಳ್ನಾವರ ತಾಲ್ಲೂಕಿನ ಡೋರಿ ಗ್ರಾಮದೇವಿಯರ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು   

ಅಳ್ನಾವರ: ತಾಲ್ಲೂಕಿನ ಡೋರಿ ಗ್ರಾಮದಲ್ಲಿ ಪ್ರಥಮ ಬಾರಿ ನಡೆದ ಗ್ರಾಮದೇವಿಯರಾದ ದ್ಯಾಮವ್ವ ಮತ್ತು ದುರ್ಗಾದೇವಿಯರ ಜಾತ್ರೆ ಗುರುವಾರ ಸಂಪನ್ನಗೊಂಡಿದೆ.

ಶುಕ್ರವಾರ ದೇವಿಯರನ್ನು ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾಪನೆ ಮಾಡಿ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಕಳೆದ ಹದಿನೈದು ದಿನಗಳಿಂದ ನಡೆಯುತ್ತಿದ್ದ ಜಾತ್ರಾ ಕಾರ್ಯಕ್ರಮಗಳೆಲ್ಲವೂ ಗ್ರಾಮಸ್ತರ ಸಹಕಾರದಿಂದ ಯಶಸ್ವಿಗೊಂಡಿವೆ. ದಾಖಲೆ ಸ್ವರೂಪದಲ್ಲಿ ನಡೆದು ಜಾತ್ರೆಯ ಸಂಭ್ರಮ, ಸಡಗರ ಜನರ ಮನದಲ್ಲಿ ಕಾಯಂ ಆಗಿ ನೆಲೆಯೂರುವಂತೆ ಮಾಡಿದೆ ಎಂದು ಜಾತ್ರಾ ಸಮಿತಿಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾಜಿ ಸಚಿವ ಡಿ.ಬಿ.ಇನಾಮದಾರ ಅವರ ಪುತ್ರ ಮತ್ತು ಯುವ ಉದ್ದಿಮೆ ವಿಕ್ರಮ ಇನಾಮದಾರ ಅವರು ಜಾತ್ರೆಗೆ ಸಲಹೆ ಸೂಚನೆ ನೀಡುವುದರ ಜೊತೆಗೆ ಅನ್ನ ಪ್ರಸಾದ ಆಯೋಜನೆಗೆ ವಿಶೇಷ ಸಹಾಯ ಸಹಕಾರ ನೀಡಿದ್ದರು. ಅವರ ಮಾಗದರ್ಶನದಲ್ಲಿ ಹೊನ್ನಾಟ, ರಥೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಗಳು ವೈಭವದಿಂದ ಜರುಗಿದವು.

ADVERTISEMENT

ಸುಮಾರು ಮೂರು ನೂರು ವರ್ಷಗಳ ಇತಿಹಾಸವನ್ನು ಹೊಂದಿರುವ ಡೋರಿ ಗ್ರಾಮ ನಿರ್ಮಾಣಗೊಂಡ ನಂತರ ಪ್ರಥಮ ಬಾರಿಗೆ ಜಾತ್ರೆ ನಡೆದಿದ್ದು, ಮುಂದೆ ಹನ್ನೆರಡು ವರ್ಷಗಳಿಗೊಮ್ಮೆ ಜಾತ್ರೆ ಆಯೋಜನೆ ಮಾಡುವ ಉದ್ದೇಶ ಇಟ್ಟುಕೊಳ್ಳಲಾಗಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಉಮೇಶ ಕದಂ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ದೇವಿಯರ ಪುನರ್ ಪ್ರತಿಷ್ಠಾಪನೆಯ ನಂತರ ಗ್ರಾಮಸ್ತರು ದೇವಿಗೆ ಉಡಿ ತುಂಬಿ ಆಶೀರ್ವಾದ ಪಡೆದುಕೊಂಡರು. ಜೋಗತಿಯರು, ಮುತ್ತೈದೆಯರು ಪಾಲ್ಗೊಂಡು ದೇವಿಯರಿಗೆ ಭಕ್ತಿಯ ಸೇವೆ ಸಮರ್ಪಿಸಿದರು. ತುಂತುರು ಮಳೆಯ ಸಿಂಚನದ ಮಧ್ಯೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.