ADVERTISEMENT

‘ಫೋನ್‌ ಇನ್‌’ ಕಾರ್ಯಕ್ರಮ: ವಿವರಣಾತ್ಮಕ ಮಾದರಿಯಲ್ಲೇ ಸೆಮಿಸ್ಟರ್‌ ಪರೀಕ್ಷೆ

ಪದವಿ ವಿದ್ಯಾರ್ಥಿಗಳ ಗೊಂದಲಗಳಿಗೆ ತೆರೆ ಎಳೆದ ಕರ್ನಾಟಕ ವಿ.ವಿ. ಕುಲಪತಿ ಪ್ರೊ.ಕೆ.ಬಿ.ಗುಡಸಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 2:51 IST
Last Updated 27 ಜುಲೈ 2021, 2:51 IST
ಪ್ರಜಾವಾಣಿ’ ಕಚೇರಿಯಲ್ಲಿ ಸೋಮವಾರ ನಡೆದ ‘ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಕರೆಗಳಿಗೆ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಬಿ.ಗುಡಸಿ ಉತ್ತರಿಸಿದರು. ಕುಲಸಚಿವರಾದ ಡಾ.ಎಚ್‌.ನಾಗರಾಜ, ಡಾ.ಹನುಮಂತಪ್ಪ ಕೆ.ಟಿ ಇದ್ದರುಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಪ್ರಜಾವಾಣಿ’ ಕಚೇರಿಯಲ್ಲಿ ಸೋಮವಾರ ನಡೆದ ‘ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಕರೆಗಳಿಗೆ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಬಿ.ಗುಡಸಿ ಉತ್ತರಿಸಿದರು. ಕುಲಸಚಿವರಾದ ಡಾ.ಎಚ್‌.ನಾಗರಾಜ, ಡಾ.ಹನುಮಂತಪ್ಪ ಕೆ.ಟಿ ಇದ್ದರುಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಹುಬ್ಬಳ್ಳಿ: ‘ಕೊಟ್ಟ ಸಮಯದಲ್ಲೇ ಪರೀಕ್ಷೆ ತಯಾರಿ ನಡೆಸಿ. ಮಾನಸಿಕವಾಗಿ ಸಿದ್ಧರಾಗಿ, ಆತಂಕ ಬದಿಗಿಟ್ಟು ಧೈರ್ಯವಾಗಿ ಪರೀಕ್ಷೆ ಬರೆಯಿರಿ’

–ಇದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಬಿ.ಗುಡಸಿ ಅವರು ಪದವಿ ವಿದ್ಯಾರ್ಥಿಗಳಿಗೆ ನೀಡಿದ ಸಲಹೆ. ‘5–6ನೇ ಸೆಮಿಸ್ಟರ್ ಪರೀಕ್ಷೆಗಳ ನಡುವೆ ಈಗ ನೀಡಿರುವ 16 ದಿನಗಳ ಸಮಯ ಸಾಲದು. ದಯವಿಟ್ಟು ಇನ್ನಷ್ಟು ಸಮಯಾವಕಾಶ ನೀಡಿ...’ ಎಂಬ ಪದವಿ ವಿದ್ಯಾರ್ಥಿಗಳ ಭಿನ್ನಹಕ್ಕೆ ಅವರು ಸದ್ಯದ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟರು.

‘ಪ್ರಜಾವಾಣಿ’ ಕಚೇರಿಯಲ್ಲಿ ಸೋಮವಾರ ನಡೆದ ‘ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಗೊಳಪಡುವ ಜಿಲ್ಲೆಗಳಿಂದ ನಿರಂತರವಾಗಿ ಬಂದ ವಿದ್ಯಾರ್ಥಿಗಳ ಕರೆಗಳಿಗೆ ಅಷ್ಟೇ ಸಾವಧಾನವಾಗಿ, ಕಳಕಳಿಯಿಂದ ಉತ್ತರಿಸಿದರು. ಧೈರ್ಯ ತುಂಬುವ ಮಾತನಾಡಿದರು.

ADVERTISEMENT

‘ಯುಜಿಸಿ ಮಾರ್ಗಸೂಚಿ ಹಾಗೂ ರಾಜ್ಯ ಸರ್ಕಾರದ ಆದೇಶದ ಪ್ರಕಾರ 2020–21ನೇ ಸಾಲಿನ ಪದವಿ ತರಗತಿಗಳ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು. ಸಂಭವನೀಯ ಕೋವಿಡ್‌ ಮೂರನೇ ಅಲೆ ಬಂದರೆ ಇನ್ನಷ್ಟು ಕಷ್ಟವಾಗಲಿರುವುದರಿಂದ ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಇರುವ ಸಮಯದಲ್ಲೇ ಪರೀಕ್ಷೆ ತಯಾರಿ ನಡೆಸಿಕೊಳ್ಳಿ. ಜುಲೈ 26ರಿಂದ ಪುನರ್‌ಮನನ ತರಗತಿಗಳು ಆರಂಭವಾಗಿದ್ದು, ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿ ತಮಗಿರುವ ಗೊಂದಲಗಳನ್ನು ಪರಿಹರಿಸಿಕೊಳ್ಳಿ‘ ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರಿಸುವಲ್ಲಿ, ಗೊಂದಲಗಳನ್ನು ನಿವಾರಿಸುವಲ್ಲಿ ಕರ್ನಾಟಕ ವಿ.ವಿ. ಕುಲಸಚಿವ (ಆಡಳಿತ) ಡಾ.ಹನುಮಂತಪ್ಪ ಕೆ.ಟಿ ಹಾಗೂ ಮೌಲ್ಯಮಾಪನ ವಿಭಾಗದ ಕುಲಸಚಿವ ಡಾ.ಎಚ್‌.ನಾಗರಾಜ ಜೊತೆಯಾದರು.

ವಿದ್ಯಾರ್ಥಿಗಳ ಪ್ರಶ್ನೆ, ಗೊಂದಲಗಳಿಗೆ ಕುಲಪತಿಗಳು ನೀಡಿದ ಉತ್ತರ, ಪರಿಹಾರಗಳು ಇಂತಿವೆ.

*ಕಾಲೇಜು ಯಾವಾಗ ಶುರುವಾಗುತ್ತದೆ. ಹಾಸ್ಟೆಲ್ ಸೌಲಭ್ಯ ಇದೆಯಾ?
- ಗೌರೀಶ, ಧಾರವಾಡ,ವಿನೋದ್‌ ಕುಮಾರ್‌, ಹಾನಗಲ್‌

–ಉಪನ್ಯಾಸಕರ ಬೋಧನೆ ಆರಂಭವಾಗಿವೆ. ಕರ್ನಾಟಕ ವಿಶ್ವವಿದ್ಯಾಲಯದ ಕ್ಯಾಂಪಸ್‌ನ ಎಲ್ಲ ಹಾಸ್ಟೆಲ್‌ಗಳಲ್ಲಿ ವಾಸ್ತವ್ಯಕ್ಕೆ ಅವಕಾಶ ನೀಡಲಾಗಿದೆ.

* ಪದವಿ ಮೊದಲ ವರ್ಷದ ಯಾವ ಸೆಮಿಸ್ಟರ್‌ ಪರೀಕ್ಷೆ ನಡೆಯುತ್ತದೆ?
-ವನಿತಾ

–ಮೊದಲ ಸೆಮಿಸ್ಟರ್‌ ಪರೀಕ್ಷೆ ಮಾತ್ರ ನಡೆಯುತ್ತದೆ. 2ನೇ ಸೆಮಿಸ್ಟರ್‌ಗೆ ಆಂತರಿಕ ಮೌಲ್ಯಮಾಪನ(ಐ.ಎ) ನಡೆಸಲಾಗುತ್ತದೆ.

* 3 ಮತ್ತು 4ನೇ ಸೆಮಿಸ್ಟರ್‌ ಪರೀಕ್ಷೆಗಳು ಕಡ್ಡಾಯವೇ?
-ಪೂರ್ಣಿಮಾ, ರಂಗಮ್ಮ, ಕೊಟುಮಚಗಿ

–3ನೇ ಸೆಮಿಸ್ಟರ್‌ ಪರೀಕ್ಷೆ ನಡೆಯುತ್ತದೆ. 4ನೇ ಸೆಮಿಸ್ಟರ್‌ಗೆ ಆಂತರಿಕ ಮೌಲ್ಯಮಾಪನ ನಡೆಯಲಿದೆ. ಆನ್‌ಲೈನ್‌ ಅಥವಾ ಆಫ್‌ಲೈನ್‌ ತರಗತಿ ಬಗ್ಗೆನಿಮ್ಮ ಕಾಲೇಜಿಗೆ ಹೋಗಿ ವಿಚಾರಿಸಿ.

* ಪರೀಕ್ಷೆಗೆ ವಿ.ವಿ ಸಿದ್ಧವಾಗಿದೆ. ಆದರೆ, ಓದೋಕೆ ಸಮಯ ಸಿಗುತ್ತಿಲ್ಲ. ಮೊದಲು ಎಂಸಿಕ್ಯೂ (ಬಹು ಆಯ್ಕೆಪ್ರಶ್ನೆ ) ಮಾದರಿಯ ಪರೀಕ್ಷೆ ಹೇಳಿದ್ದಿರಿ. ಈಗ ಮತ್ತೆ ವಿವರಣಾತ್ಮಕ ಮಾದರಿ(ಡಿಸ್ಕ್ರಿಪ್ಟಿವ್)ಯಲ್ಲಿ ನಡೆಸುವುದಾಗಿ ಹೇಳುತ್ತಿದ್ದೀರಿ. ಯಾವುದು ಅಂತಿಮ?
-ರೋಹಿತ್‌, ಗಣೇಶಗೌಡ ಮರಿಗೌಡರ, ನವಲಗುಂದ, ಹನುಮಂತ, ಹೊಳೆಆಲೂರ, ದಿವ್ಯಾ, ಶಿರಸಿ

–ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಎಂಸಿಕ್ಯೂ ಮಾದರಿಯ ಪರೀಕ್ಷೆಗೆ ತೀರ್ಮಾನಿಸಲಾಗಿತ್ತು. ಈಗ ಯುಜಿಸಿ ಸೂಚನೆ ಅನ್ವಯ ವಿವರಣಾತ್ಮಕ ಮಾದರಿಯ ಪರೀಕ್ಷೆಗೆ ನಿರ್ಧರಿಸಲಾಗಿದೆ. ಕರ್ನಾಟಕ ಮಾತ್ರವಲ್ಲ ಇಡೀ ದೇಶಕ್ಕೆ ಈ ನಿಯಮ ಅನ್ವಯಿಸುತ್ತದೆ. ಇದಕ್ಕೆ ವಿದ್ಯಾರ್ಥಿಗಳು ಸಜ್ಜಾಗಬೇಕು.

* ಯಾವ ಯಾವ ಸೆಮಿಸ್ಟರ್‌ಗೆ ಪರೀಕ್ಷೆ ನಡೆಯಲಿವೆ.
-ಚಂದ್ರಶೇಖರ್‌

–1, 3, 5 ಮತ್ತು 6ನೇ ಸೆಮಿಸ್ಟರ್‌ ಪರೀಕ್ಷೆಗಳು ನಡೆಯಲಿವೆ. ಗೊಂದಲ ಇದ್ದರೆ ನಿಮ್ಮ ಕಾಲೇಜಿನ ಮುಖ್ಯಸ್ಥರನ್ನು ಭೇಟಿ ಮಾಡಿ.

* 3ನೇ ಸೆಮಿಸ್ಟರ್‌ ಪರೀಕ್ಷೆ ಮುಂದೂಡಿದರೆ ಅನುಕೂಲ.
-ನಿವೇದಿತಾ, ಹಾವೇರಿ, ಶ್ರದ್ಧಾ ರಾಣೆಬೆನ್ನೂರು

–ಈ ಹಂತದಲ್ಲಿ ಪರೀಕ್ಷೆ ಮುಂದೂಡಿಕೆ ಸಾಧ್ಯವಿಲ್ಲ. ಅಕ್ಟೋಬರ್‌ 1ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭ ಆಗಲಿದೆ. ನಿಮಗೆ ಓದಲು ಸಮಯವಿದೆ. ಲಭಿಸಿದ ಸಮಯ ಬಳಿಸಿಕೊಂಡು ಪರೀಕ್ಷೆಗೆ ಸಿದ್ಧತೆ ನಡೆಸಿ.

* 2019ರಲ್ಲಿ ಘಟಿಕೋತ್ಸವಕ್ಕೆ ಅರ್ಜಿ ಸಲ್ಲಿಸಿದ್ದೆ, ಈ ವರ್ಷ ಘಟಿಕೋತ್ಸವ ನಡೆಯುತ್ತಾ?
-ಕಲ್ಲನಗೌಡ, ಧಾರವಾಡ

–ಕೋವಿಡ್‌ ಕಾರಣ ಘಟಿಕೋತ್ಸವಕ್ಕೆ ಅನುಮತಿ ಸಿಕ್ಕಿಲ್ಲ. ಪ್ರಮಾಣಪತ್ರ ಮನೆಗೇ ಕಳುಹಿಸಲಾಗುವುದು.

* ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಪ್ರಾಯೋಗಿಕ ಪರೀಕ್ಷೆಗೆ ಸಮಯ ಸಿಗುತ್ತಿಲ್ಲ.
-ಭಾಗ್ಯ, ಉತ್ತಕಕನ್ನಡ, ಸಂಗೀತಾ, ರಾಣೆಬೆನ್ನೂರು

–ಪರೀಕ್ಷೆ ಬರೆಯಲು ಸಿದ್ಧರಾಗಿರಿ. 5, 6ನೇ ಸೆಮಿಸ್ಟರ್‌ ಪರೀಕ್ಷೆಗಳ ನಡುವೆ ಓದಲು ಸಮಯಾವಕಾಶ ಸಿಗಲಿದೆ.

*ಪರೀಕ್ಷೆ ಯಾವುದೇ ಮಾದರಿಯಲ್ಲಿರಲಿ; ತಯಾರಿಗೆ ಕನಿಷ್ಠ 30 ದಿನ ಕಾಲಾವಕಾಶ ನೀಡಿ.
-ಶ್ವೇತಾ

–ವಿದ್ಯಾರ್ಥಿಗಳ ಹಿತ ಗಮನದಲ್ಲಿರಿಸಿಕೊಂಡು ಸಾಧ್ಯವಾದಷ್ಟು ಸಮಯ ನೀಡುತ್ತೇವೆ. ವಿದ್ಯಾರ್ಥಿಗಳು ಆತಂಕ ಪಡಬೇಕಿಲ್ಲ. ಸೆಮಿಸ್ಟರ್‌ಗಳ ನಡುವೆ ಓದಲು ಅವಕಾಶ ದೊರೆಯಲಿದೆ.

*ಆನ್‌ಲೈನ್‌ ತರಗತಿ ಪರಿಣಾಮಕಾರಿಯಾಗಿ ನಡೆದಿಲ್ಲ. ಸಿಕ್ಕ ಕೆಲವು ತರಗತಿಯಲ್ಲಿ ನಡೆದ ಬೋಧನೆ ಅರ್ಥವಾಗಿಲ್ಲ. ಜತೆಗೆ ಪರೀಕ್ಷಾ ಸಿದ್ಧತೆಗೂ ಸಮಯವಿಲ್ಲ. ಇದರಿಂದ ಮಾನಸಿಕ ಒತ್ತಡ ಹೆಚ್ಚುತ್ತಿದೆ.
-ಪವನ್‌, ಕಾರವಾರ,ಸನತ್‌ಕುಮಾರ್‌, ಸುರೇಶ್‌

–ಪರೀಕ್ಷೆ ನಡೆಸುವ ನಿರ್ಧಾರ ಕೇವಲ ವಿಶ್ವವಿದ್ಯಾಲಯದ್ದಲ್ಲ. ಯಾರಿಗೂ ಆತಂಕ ಪಡಬೇಡಿ. ತಯಾರಿಯಲ್ಲಿ ತೊಡಗಿಕೊಳ್ಳಿ

* ನಾನು ಪದವಿ ಅಂತಿಮ ವರ್ಷದ ವಿದ್ಯಾರ್ಥಿ. ಒಮ್ಮೆಗೇ ಎರಡು ಸೆಮಿಸ್ಟರ್‌ಗಳ ಪರೀಕ್ಷೆ ನಡೆಯುವುದರಿಂದ ಸಮಸ್ಯೆಗಳಾಗುತ್ತಿವೆ. ಶಾಲೆ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೆ ಉತ್ತೀರ್ಣ ಮಾಡಲಾಗಿದೆ. ನಮ್ಮ ಬಗ್ಗೆಯೂ ಇದೇ ನಿರ್ಧಾರ ಕೈಗೊಳ್ಳಲಾಗದೇ?
-ಪವನ್‌, ವಿದ್ಯಾರ್ಥಿ

–ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಇದಕ್ಕೆ ಅವಕಾಶವಿಲ್ಲ, ಯುಜಿಸಿ ಸೂಚನೆ ಪಾಲಿಸಲೇಬೇಕು.

* ಪದವಿ ಪೂರ್ಣವಾಗಿದೆ. ಆದರೆ, ಒಂದು ವಿಷಯ ಬಾಕಿ ಉಳಿದಿದೆ. ಮೂರು ವರ್ಷದಿಂದ ಮರುಪರೀಕ್ಷೆ ಬರೆಯಲಾಗಿಲ್ಲ. ಉಳಿದ ವಿಷಯಗಳನ್ನೂ ಪಿಯುಸಿ ಹಾಗೂ ಶಾಲಾ ಮಕ್ಕಳಿಗೆ ಉತ್ತೀರ್ಣ ಮಾಡಿದಂತೆ ಮಾಡಬಹುದೇ?
-ತಮ್ಮನಗೌಡ

–ಇದಕ್ಕೆ ವಿಶ್ವವಿದ್ಯಾಲಯಗಳಲ್ಲಿ ಅವಕಾಶವಿಲ್ಲ. ಮತ್ತಷ್ಟು ಕಷ್ಟಪಟ್ಟು ಓದಿ ಪರೀಕ್ಷೆ ಎದುರಿಸಿ.

***

ಫೋನ್‌ ಇನ್‌ ಕಾರ್ಯಕ್ರಮ ನಿರ್ವಹಣೆ: ರಶ್ಮಿ ಎಸ್‌., ಕೃಷ್ಣಿ ಶಿರೂರ, ರವಿ ಎಸ್‌. ಬಳೂಟಗಿ, ಓದೇಶ ಸಕಲೇಶಪುರ, ಕಲಾವತಿ ಬೈಚಬಾಳ, ಸಬೀನಾ ಎ, ಗೌರಮ್ಮ ಕಟ್ಟಿಮನಿ, ಹಿತೇಶ್‌ ವೈ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.