ADVERTISEMENT

ಮೊಟ್ಟೆ ವಿತರಣೆ ಕೈಬಿಡಿ, ಇಲ್ಲ ಪ್ರತ್ಯೇಕ ಶಾಲೆ ತೆರೆಯಿರಿ: ದಯಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2021, 10:01 IST
Last Updated 8 ಡಿಸೆಂಬರ್ 2021, 10:01 IST

ಹುಬ್ಬಳ್ಳಿ: ಶಾಲೆಗಳಲ್ಲಿ ಮತ್ತು ಅಂಗನವಾಡಿಗಳಲ್ಲಿ ಮೊಟ್ಟೆ ಬದಲಾಗಿ ಸತ್ವಯುತ ಸಸ್ಯಾಹಾರ ಪದಾರ್ಥ ನೀಡಬೇಕು. ಇಲ್ಲವೇ, ರಾಜ್ಯದಾದ್ಯಂತ ಪ್ರತ್ಯೇಕ ಶಾಲೆ ಹಾಗೂ ಅಂಗನವಾಡಿ ತೆರೆಯಬೇಕು ಎಂದು ಅಖಿಲ ಭಾರತ ಸಸ್ಯಾಹಾರಿಗಳ ಒಕ್ಕೂಟದ ಸಂಚಾಲಕ ದಯಾನಂದ ಸ್ವಾಮೀಜಿ ಆಗ್ರಹಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ನಿರ್ಧಾರ ಖಂಡಿಸಿ ಬೆಳಗಾವಿಯಲ್ಲಿ ಡಿ. 20ರಂದು ಬೆಳಿಗ್ಗೆ 10ಕ್ಕೆ ಸಂತ ಸಮಾವೇಶ, ವಿಧಾನಸೌಧ ಚಲೋ ಚಳವಳಿ ಹಮ್ಮಿಕೊಳ್ಳಲಾಗಿದೆ. ನಾಡಿನ 100 ಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಮಕ್ಕಳಿಗೆ ಪೌಷ್ಟಿಕಾಂಶದ ಹೆಸರಲ್ಲಿ ಮೊಟ್ಟೆ ತಿನ್ನಿಸಲು ಸರ್ಕಾರ ಮುಂದಾಗಿರುವುದು ಖಂಡನೀಯ. ಮೊಟ್ಟೆಗಿಂತಲೂ ಅಧಿಕ ಪೌಷ್ಟಿಕಾಂಶ ಇರುವ ಸರ್ವಸಮ್ಮತ ಏಕರೂಪದ ಸಸ್ಯಾಹಾರ ನೀಡಬೇಕು. ಮಕ್ಕಳಲ್ಲಿ ಮಾಂಸಾಹಾರಿ, ಸಸ್ಯಾಹಾರಿ ಎಂದು ಪ್ರತ್ಯೇಕತಾ ಭಾವನೆ ಸೃಷ್ಟಿಸುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಮೊಟ್ಟೆ ವಿವಾದ ಕುರಿತು ಈವರೆಗೂ ಆರ್.ಎಸ್.ಎಸ್. ಯಾವ ಹೇಳಿಕೆಯನ್ನೂ ನೀಡಿಲ್ಲ. ಉಳಿದ ಸಂದರ್ಭದಲ್ಲಿ ಲಿಂಗಾಯತದ ಬೆಂಬಲ ಕೇಳುವ ಅವರು ಈ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಇಲ್ಲದಿದ್ದರೆ, ಮುಂಬರುವ ದಿನಗಳಲ್ಲಿ ಅವರ ಎಲ್ಲ ಕಾರ್ಯಕ್ರಮಗಳನ್ನು ನಾವು ಬಹಿಷ್ಕರಿಸುತ್ತೇವೆ ಎಂದು ಹೇಳಿದರು.

ಮೊಟ್ಟೆ ವಿತರಣೆ ಕುರಿತು ಇನ್ಮುಂದೆ ಮುಖ್ಯಮಂತ್ರಿಗೆ ಮನವಿ, ಒತ್ತಾಯ ಮಾಡಲ್ಲ. ಬೀದಿಗಿಳಿದು ಪ್ರತಿಭಟನೆ ನಡೆಸುತ್ತೇವೆ. ತಕ್ಷಣ ಯೋಜನೆ ಕೈ ಬಿಡಬೇಕು. ಇಲ್ಲದಿದ್ದರೆ, ಲಿಂಗಾಯತ ಸಮುದಾಯದವರಿಂದಲೇ ಸರ್ಕಾರ ಪತನವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಮೊಟ್ಟೆ ಮಾಂಸಾಹಾರ. ನಮ್ಮ ಧರ್ಮ ಸಸ್ಯಹಾರ ಸೇವನೆ ಬಗ್ಗೆ ಹೇಳುತ್ತದೆ. ಮುಖ್ಯ. ಸರ್ಕಾರದ ನಿರ್ಧಾರದಿಂದ ಸಸ್ಯಾಹಾರಿಗಳ ಹಾಗೂ ಧರ್ಮದ‌‌‌ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ ಎಂದ ದಯಾನಂದ ಸ್ವಾಮೀಜಿ, ನಮ್ಮ ಹೋರಾಟ ಮಾಂಸಹಾರಿಗಳ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿದರು.

ಮಾತೆ ಗಂಗಾದೇವಿ ಮಾತನಾಡಿ, ಬಸವಣ್ಣನ ನಾಡಿನಲ್ಲಿ ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡುವ ಸರ್ಕಾರದ ಘೋಷಣೆ ನೋವುಂಟು ಮಾಡಿದೆ. ಕೂಡಲೇ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಚನ್ನಬಸವ ಸ್ವಾಮೀಜಿ, ಅಮೃತಲಾಲ್ ಭವರಲಾಲ್, ರಮೇಶ ಕುಲಕರ್ಣಿ, ಕಲ್ಯಾಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.