ADVERTISEMENT

ಖಾಸನೀಸ್ ಸೋದರರಿಗೆ ಸೇರಿದ ಆಸ್ತಿ ಜಪ್ತಿ

ಉಪವಿಭಾಗಾಧಿಕಾರಿ ಕಚೇರಿ ಸಿಬ್ಬಂದಿ ನಡೆಸಿದ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2019, 20:08 IST
Last Updated 17 ಜುಲೈ 2019, 20:08 IST

ಧಾರವಾಡ:ಬಹುಕೋಟಿ ವಂಚನೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಕಲಘಟಗಿಯ ಖಾಸನೀಸ್‌ ಸಹೋದರಿರಿಗೆ ಸೇರಿದ್ದ ಸ್ಥಿರ ಮತ್ತು ಚರಾಸ್ತಿಗಳನ್ನು ಇಲ್ಲಿನ ಉಪವಿಭಾಗಾಧಿಕಾರಿ ಜಪ್ತಿ ಮಾಡಿದ್ದಾರೆ.

ಹರ್ಷ ಎಂಟರ್‌ಟೇನ್ಮೆಂಟ್ ಸಂಸ್ಥೆ ಹೆಸರಿನಲ್ಲಿ ಹೆಚ್ಚಿನ ಬಡ್ಡಿ ನೀಡುವ ಆಮಿಷ ತೋರಿಸಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿದ್ದ ಆರೋಪ ಎದುರಿಸುತ್ತಿರುವ ಕಲಘಟಗಿಯ ಸತ್ಯಬೋಧ ಖಾಸನೀಸ್‌ ಮತ್ತು ಆತನ ಸಹೋದರರಾದ ಸಂಜೀವ ಮತ್ತು ಶ್ರೀಕಾಂತ ಖಾಸನೀಸ್‌ ಕುಟುಂಬಗಳಿಗೆ ಸೇರಿದ ಆಸ್ತಿಗಳನ್ನು ಸಿಐಡಿ ಅಧಿಕಾರಿಗಳು ವಶಪಡಿಸಿಕೊಂಡು ಉಪವಿಭಾಗಾಧಿಕಾರಿಗೆ ಸುಪರ್ದಿಗೆ ನೀಡಿದ್ದರು.

ಉಪವಿಭಾಗಾಧಿಕಾರಿ ಕೋರಿಕೆ ಮೇರೆಗೆ ಖಾಸನೀಸ್‌ ಸೋದರರ ಆಸ್ತಿಗಳನ್ನು ಜಪ್ತಿ ಮಾಡಲು ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದರು. ಇದರ ಆಧಾರದ ಮೇಲೆಈ ಮೂವರಿಗೆ ಸೇರಿದ ಆಸ್ತಿಗಳನ್ನು ಉಪವಿಭಾಗಾಧಿಕಾರಿ ಹಾಗೂ ಸಿಬ್ಬಂದಿ ಕಳೆದ ಎರಡು ದಿನಗಳಿಂದ ಜಪ್ತಿ ಮಾಡುವ ಕಾರ್ಯಾಚರಣೆ ನಡೆಸಿದ್ದಾರೆ.

ADVERTISEMENT

ಇದರಲ್ಲಿ ಕಲಘಟಗಿ, ಹುಬ್ಬಳ್ಳಿ ತಾಲ್ಲೂಕಿನಲ್ಲಿರುವ 10 ಆಸ್ತಿಗಳನ್ನು ಜಪ್ತಿ ಮಾಡಿದ್ದಾರೆ. ಮತ್ತೊಂದು ಆಸ್ತಿ ಬಳ್ಳಾರಿಯಲ್ಲಿದ್ದು, ಅದರ ಜಪ್ತಿಗೆ ಅಲ್ಲಿನ ತಹಶೀಲ್ದಾರ್‌ಗೆ ಪತ್ರ ಬರೆದಿರುವುದಾಗಿ ಉಪವಿಭಾಗಾಧಿಕಾರಿ ಮೊಹಮ್ಮದ್ ಝುಬೇರ್ ತಿಳಿಸಿದರು.

‘ಈ ಸ್ಥಿರಾಸ್ತಿಗಳಲ್ಲದೇ ಇನ್ನೂ ಹೆಚ್ಚಿನ ಆಸ್ತಿಗಳಿದ್ದಲ್ಲಿ ಅದನ್ನು ಉಪವಿಭಾಗಾಧಿಕಾರಿ ಅಥವಾ ಕಲಘಟಗಿ ತಹಶೀಲ್ದಾರ್ ಅವರ ಗಮನಕ್ಕೆ ಸಾರ್ವಜನಿಕರು ತರಬಹುದು’ ಎಂದು ಝುಬೇರ್ ತಿಳಿಸಿದರು.

ಈ ಕಾರ್ಯಾಚರಣೆಯಲ್ಲಿ ಉಪವಿಭಾಗಾಧಿಕಾರಿ ಕಚೇರಿಯ ಸತೀಶ ಕರಿಲಿಂಗಣ್ಣವರ, ಪರಶುರಾಮ ಪೂಜಾರ, ಶಿಂಪಿ ಇದ್ದರು.

ಹಣ ವಾಪಾಸ್‌ ನೀಡದೆ ವಂಚನೆ ಎಸಗಿರುವ ಆರೋಪ ಎದುರಿಸುತ್ತಿರುವ ಖಾಸನೀಸ್‌ ಸಹೋದರರ ವಿರುದ್ಧ ಕಲಘಟಗಿ ಠಾಣೆಯಲ್ಲಿ ಹಣ ಕಳೆದುಕೊಂಡವರು ದೂರು ದಾಖಲಿಸಿದ್ದರು. ನಂತರ ಆರೋಪಿಗಳು ತಲೆಮರೆಸಿಕೊಂಡಿದ್ದರು. ಪ್ರಕರಣದ ತನಿಖೆ ನಡೆಸಿದ ಸಿಐಡಿ ಪೊಲೀಸರು ಇವರನ್ನು ಮಥುರಾದಲ್ಲಿ ಬಂಧಿಸಿದ್ದರು. ಇವರ ಜಾಮೀನು ಅರ್ಜಿಯೂ ವಜಾಗೊಂಡಿದ್ದರಿಂದ ಸದ್ಯ ಇವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಉಪವಿಭಾಗಾಧಿಕಾರಿ ವಶಕ್ಕೆ ಪಡೆದ ಸ್ಥಿರಾಸ್ತಿಗಳ ವಿವರ

ಗ್ರಾಮ;ವಿಸ್ತೀರ್ಣ;ಮಾಲೀಕರು

ಕಲಘಟಗಿ;20ಗುಂಟೆ;ಗೀತಾ ಶ್ರೀನಿವಾಸರಾವ್ ಖಾಸನೀಸ್

ಮಡಕಿಹೊನ್ನಿಹಳ್ಳಿ;3.05ಎಕರೆ;ಗೀತಾ ಶ್ರೀನಿವಾಸರಾವ್ ಖಾಸನೀಸ್

ಮಡಿಹೊನ್ನಿಹಳ್ಳಿ;2.05ಎಕರೆ;ಸಂಜೀವ ಶ್ರೀನಿವಾಸರಾವ್ ಖಾಸನೀಸ್

ಕಲಘಟಗಿ;3ಎಕರೆ;ಶ್ರೀಕಾಂತ ಶ್ರೀನಿವಾಸರಾವ್ ಖಾಸನೀಸ್

ಮಾಚಾಪುರ;2.39ಎಕರೆ;ಸಂಜೀವ ಶ್ರೀನಿವಾಸರಾವ್ ಖಾಸನೀಸ್

ಹಿರೇಹೊನ್ನಿಹಳ್ಳಿ;4.37ಎಕರೆ;ಶ್ರೀಕಾಂತ ಶ್ರೀನಿವಾಸರಾವ್ ಖಾಸನೀಸ್

ರಾಮನಾಳ;1.20ಎಕರೆ;ಮಾಧುರಿ ಶ್ರೀಕಾಂತ ಖಾಸನೀಸ್

ಹಿರೇಹೊನ್ನಿಹಳ್ಳಿ;2.09ಎಕರೆ;ರೋಜಾ ಸಂಜೀವ ಖಾಸನೀಸ್

ಹಿರೇಹೊನ್ನಿಹಳ್ಳಿ;3.22ಎಕರೆ;ಸವಿತಾ ಶ್ರೀನಿವಾಸರಾವ್ ಖಾಸನೀಸ್

ಬೈರಿದೇವರಕೊಪ್ಪ (ಹುಬ್ಬಳ್ಳಿ);1.08ಎಕರೆ;ಪೂರ್ಣಿಮಾ ಕಕಮರಿ

ಕೆಎಚ್‌ಬಿ ಕಾಲೊನಿ (ಬಳ್ಳಾರಿ);640ಚದರಡಿ;ಸಂಜೀವ ಶ್ರೀನಿವಾಸರಾವ್ ಖಾಸನೀಸ್

***

ಚರಾಸ್ತಿ:
* ಖಾಸನೀಸ್‌ ಸಹೋದರರ ಬ್ಯಾಂಕ್‌ ಖಾತೆಯಲ್ಲಿದ್ದ ₹ 7.17ಕೋಟಿ ಮತ್ತು ₹ 1.03ಕೋಟಿ ಅನ್ನು ಮುಟ್ಟುಗೋಲು ಹಾಕಿಕೊಂಡು ಎಸ್‌ಬಿಐನಲ್ಲಿ ನಿಶ್ಚಿತ ಠೇವಣಿಯಲ್ಲಿ ತೊಡಗಿಸಲಾಗಿದೆ.

* ಸುಮಾರು 85 ಗ್ರಾಂ ಚಿನ್ನ, 1.5 ಕೆಜಿ ಬೆಳ್ಳಿ ವಸ್ತುಗಳು (ಖಜಾನೆಯಲ್ಲಿ ಇರಿಸಲಾಗಿದೆ)

*ಒಂದು ಮಾರುತಿ ಓಮಿನಿ, ಒಂದು ಇನ್ನೋವಾ ಕಾರು ಮತ್ತು ಒಂದು ರಾಯಲ್‌ ಎನ್‌ಫೀಲ್ಡ್‌ ಬೈಕ್‌ (ಉಪನಗರ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ)

* ಚಾಲ್ತಿಯಲ್ಲಿರುವ ನೋಟುಗಳ ಒಟ್ಟು ಮೊತ್ತ ₹93,900. ಜತೆಗೆ ರದ್ದುಗೊಂಡ ₹1ಸಾವಿರ ಮುಖಬೆಲೆಯ ನೋಟುಗಳ ಒಟ್ಟು ಮೌಲ್ಯ ₹3.01ಲಕ್ಷ(ಖಜಾನೆಯಲ್ಲಿ ಇರಿಸಲಾಗಿದೆ)

* ಡಿಬಿಎಫ್‌ಎಸ್ ಷೇರು ಮಾರುಕಟ್ಟೆಯಲ್ಲಿ ತೊಡಗಿಸಿದ ಹಣ ಕುರಿತಂತೆ ಚಾಲ್ತಿಯಲ್ಲಿ ಇರದ ಷೇರುಗಳು ಸೇರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.