ADVERTISEMENT

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವಹಿವಾಟು ಅವಧಿ ವಿಸ್ತರಣೆಗೆ ಕ್ರಮ: ಸಚಿವ ಶೆಟ್ಟರ್

ಎಪಿಎಂಸಿಯಲ್ಲಿ ಕಾಣದ ಸುರಕ್ಷಿತ ಅಂತರ; ಜಿಲ್ಲಾ ಉಸ್ತುವಾರಿ ಸಚಿವರಿಂದ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 1 ಮೇ 2021, 6:36 IST
Last Updated 1 ಮೇ 2021, 6:36 IST
ಅಮರಗೋಳದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಭೇಟಿ ನೀಡಿದರು
ಅಮರಗೋಳದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಭೇಟಿ ನೀಡಿದರು   

ಹುಬ್ಬಳ್ಳಿ: ಇಲ್ಲಿನ ಅಮರಗೋಳದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ (ಎಪಿಎಂಸಿ) ಸಗಟು ವ್ಯಾಪಾರದ ವೇಳೆ ಶನಿವಾರ ಬೆಳಿಗ್ಗೆ ಸುರಕ್ಷಿತ ಅಂತರ ಕಂಡುಬರಲಿಲ್ಲ. ಬಹುತೇಕರು ಮಾಸ್ಕ್‌ ಧರಿಸಿದ್ದರಾದರೂ, ಅಂತರ ಇರಲಿಲ್ಲ. ಹೀಗಾಗಿ ಪೊಲೀಸರು ಅಂತರ ಕಾಯ್ದುಕೊಳ್ಳುವಂತೆ ವ್ಯಾಪಾರಿಗಳಿಗೆ ಪದೇ ಪದೇ ಸೂಚನೆ ನೀಡುತ್ತಿದ್ದ ಚಿತ್ರಣ ಕಂಡುಬಂತು.

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಬೆಳಿಗ್ಗೆ ಎಪಿಎಂಸಿಗೆ ಭೇಟಿ ನೀಡಿ ವ್ಯಾಪಾರಿಗಳ ಜೊತೆ ಮಾತನಾಡಿದರು. ವ್ಯಾಪಾರದ ಜೊತೆಗೆ ಸುರಕ್ಷತೆಗೂ ಒತ್ತು ಕೊಡಬೇಕು ಎಂದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಶೆಟ್ಟರ್‌ ‘ನಗರದ ಮಾರುಕಟ್ಟೆ ಪ್ರದೇಶಗಳಲ್ಲಿ ಜನದಟ್ಟಣೆ ನಿಯಂತ್ರಿಸಿ, ಮಾಸ್ಕ್ ಹಾಗೂ ಅಂತರ ಕಾಯ್ದುಕೊಂಡು ವ್ಯಾಪಾರ ನಡೆಸಲು ಅನುಕೂಲ ಮಾಡಿಕೊಡಲಾಗಿದೆ’ ಎಂದರು.

ADVERTISEMENT

‘ಎಪಿಎಂಸಿ ವಹಿವಾಟಿನ ಸಮಯವನ್ನು ಹೆಚ್ಚಿಸುವಂತೆ‌‌‌ ಹಾಗೂ ಎ.ಪಿ.ಎಂ.ಸಿ ಮಾರುಕಟ್ಟೆಗಳನ್ನು ಸಂಜೆಯವರೆಗೆ ತೆರೆಯಲು ಅವಕಾಶ ನೀಡುವಂತೆ ರಾಜ್ಯದಾದ್ಯಂತ ಬೇಡಿಕೆಗಳು ಬರುತ್ತಿವೆ.‌ ಈ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

‘ಹಿಂದಿನ ಲಾಕ್‌ಡೌನ್‌ ಸಮಯದಲ್ಲಿ ಇಕ್ಕಟ್ಟಿನ ಪ್ರದೇಶದಲ್ಲಿ ವಹಿವಾಟು ನಡೆಯುತ್ತಿತ್ತು. ಇದರಿಂದ ಜನದಟ್ಟಣೆ ಉಂಟಾಗಿ ಬಹಳ ತೊಂದರೆಯಾಗಿತ್ತು. ಇದನ್ನು ಸರಿಪಡಿಸುವಂತೆ ಎ.ಪಿ.ಎಂ.ಸಿ ಸದಸ್ಯರು ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ. ಅದರಂತೆ ವಿಶಾಲ ಪ್ರದೇಶದಲ್ಲಿ ಮಾರುಕಟ್ಟೆ ಸ್ಥಾಪಿಸಲಾಗಿದೆ. ಸಗಟು ಮಾರುಕಟ್ಟೆಯಲ್ಲಿ ಸಾರ್ವಜನಿಕರು ಕೂಡ ಖರೀದಿಗೆ ಬರುವುದರಿಂದ ಜನದಟ್ಟಣೆ ಹೆಚ್ಚಾಗುತ್ತಿದೆ.‌ ಅಧಿಕಾರಿಗಳು ಬೆಳಗಿನಿಂದಲೇ ಸ್ಥಳದಲ್ಲಿ ಇದ್ದು ಜನದಟ್ಟಣೆ ನಿಯಂತ್ರಿಸುತ್ತಿದ್ದಾರೆ’ ಎಂದರು.

ಬಳಿಕ ಗಿರಣಿಚಾಳ ಹಾಗೂ ಸಿದ್ಧಾರೂಢ ಮಠದ ಮಾರುಕಟ್ಟೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಮಾರುಕಟ್ಟೆ ಶುಲ್ಕ ಸಂಗ್ರಹದಿಂದ ಬರುವ ಹಣದಲ್ಲಿ ವ್ಯಾಪಾರಿಗಳಿಗೆ, ರೈತರಿಗೆ ಹಾಗೂ ಮಾರಾಟಗಾರರಿಗೆ ಮಾಸ್ಕ್ ವಿತರಣೆ ಮಾಡಬೇಕು ಎಂದು ಎ.ಪಿ.ಎಂ.ಸಿ ಸದಸ್ಯರು ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.

ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಆಯುಕ್ತ ಲಾಬೂರಾಮ್‌, ಉಪ ಪೊಲೀಸ್ ಆಯುಕ್ತ ರಾಮರಾಜನ್, ಎ.ಪಿ.ಎಂ.ಸಿ ಅಧ್ಯಕ್ಷ ಸಹದೇವಪ್ಪ ಸುಡಕೇನವರ, ಉಪಾಧ್ಯಕ್ಷ ಬಸವರಾಜ ನಾಯ್ಕರ್, ವರ್ತಕರ ಪ್ರತಿನಿಧಿ ಚನ್ನು ಹೊಸಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.