ADVERTISEMENT

ಸಹಸ್ರಾರ್ಜುನ ದೇವಸ್ಥಾನಕ್ಕೆ ಭೂಮಿ ನೀಡಲು ಕ್ರಮ: ಸಚಿವ ಜಗದೀಶ ಶೆಟ್ಟರ್ ಭರವಸೆ

ಹುಡಾ ಅಧ್ಯಕ್ಷ ಕಲಬುರ್ಗಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 5:00 IST
Last Updated 22 ಫೆಬ್ರುವರಿ 2021, 5:00 IST
ಹುಬ್ಬಳ್ಳಿಯಲ್ಲಿ ಭಾನುವಾರ ಎಸ್‌.ಎಸ್‌.ಕೆ ಸಮಾಜದ ವತಿಯಿಂದ ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಅವರನ್ನು ಸನ್ಮಾನಿಸಲಾಯಿತು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವ ಜಗದೀಶ ಶೆಟ್ಟರ್‌, ಶಾಸಕ ಅರವಿಂದ ಬೆಲ್ಲದ, ಅಶೋಕ ಕಾಟವೆ, ನೀಲಕಂಠಸಾ ಜಡಿ ಇದ್ದಾರೆ
ಹುಬ್ಬಳ್ಳಿಯಲ್ಲಿ ಭಾನುವಾರ ಎಸ್‌.ಎಸ್‌.ಕೆ ಸಮಾಜದ ವತಿಯಿಂದ ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಅವರನ್ನು ಸನ್ಮಾನಿಸಲಾಯಿತು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವ ಜಗದೀಶ ಶೆಟ್ಟರ್‌, ಶಾಸಕ ಅರವಿಂದ ಬೆಲ್ಲದ, ಅಶೋಕ ಕಾಟವೆ, ನೀಲಕಂಠಸಾ ಜಡಿ ಇದ್ದಾರೆ   

ಹುಬ್ಬಳ್ಳಿ: ‘ನಗರದಲ್ಲಿ ಸಹಸ್ರಾರ್ಜುನ‌ ದೇವಸ್ಥಾನ ನಿರ್ಮಾಣಕ್ಕೆ ಅಗತ್ಯವಾದ ಭೂಮಿ ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ಎಸ್.ಎಸ್.ಕೆ ಶ್ರೀ ತುಳಜಾಭವಾನಿ ದೇವಸ್ಥಾನ ಕೇಂದ್ರ ಪಂಚ ಸಮಿತಿ ಭಾನುವಾರ ನಗರದಲ್ಲಿ ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಅವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮಧ್ಯಪ್ರದೇಶದಲ್ಲಿರುವ ಎಸ್.ಎಸ್.ಕೆ ಸಮಾಜದ ಮಹೇಶ್ವರ ದೇವಸ್ಥಾನದಂತೆ ಹುಬ್ಬಳ್ಳಿಯಲ್ಲೂ ದೇವಸ್ಥಾನ ನಿರ್ಮಾಣವಾಗಲಿ’ ಎಂದರು.

‘ದೇವಸ್ಥಾನದ ನಿರ್ಮಿಸಲು ಜಾಗವನ್ನು ಸಮಾಜದ ಮುಖಂಡರು ಗುರುತಿಸಿ ಮಾಹಿತಿ ನೀಡಿದರೆ, ಒಂದು ಎಕರೆ ನೀಡಲು ಸಿದ್ಧರಿದ್ದೇವೆ. ದೇವಸ್ಥಾನ ನಿರ್ಮಾಣವಾದರೆ ಹುಬ್ಬಳ್ಳಿಯ ಪ್ರವಾಸಿತಾಣವಾಗಿ ಬದಲಾಗಲಿದೆ’ ಎಂದು ತಿಳಿಸಿದರು.

ADVERTISEMENT

‘ನಗರದ ಅಭಿವೃದ್ಧಿಯಲ್ಲಿ ಹುಡಾ ಪಾತ್ರ ಪ್ರಮುಖವಾಗಿದೆ. ಅದರ ಅಧ್ಯಕ್ಷರಾಗಿರುವ ನಾಗೇಶ ಕಲಬುರ್ಗಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರ್ಷಕ್ಕೆ ಕನಿಷ್ಠ ಐದು ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಿದರೆ, ಅನಧಿಕೃತ ಬಡಾವಣೆಗಳ ಸಂಖ್ಯೆ ಕಡಿಮೆಯಾಗುತ್ತದೆ’ ಎಂದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ‘ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರವು ಭ್ರಷ್ಟಾಚಾರದಿಂದ ಮುಕ್ತವಾಗಬೇಕು. ನಿವೇಶನಗಳು ತುಟ್ಟಿಯಾಗಿದ್ದು, ಅರ್ಹರಿಗೆ ದೊರಕುತ್ತಿಲ್ಲ. ನಾಗೇಶ ಕಲಬುರ್ಗಿ ಭ್ರಷ್ಟಾಚಾರ ನಿರ್ಮೂಲನೆಗೆ ಮುಂದಾಗಬೇಕು. ಇದಕ್ಕೆ ನಮ್ಮ ಸಹಕಾರ ನಿಮಗಿದೆ’ ಎಂದದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಾಗೇಶ ಕಲಬುರ್ಗಿ, ‘ನಗರದಲ್ಲಿರುವ ಅನಧಿಕೃತ ಬಡಾವಣೆಗಳನ್ನು ಮೂಲಾಜಿಲ್ಲದೆ ತೆರವುಗೊಳಿಸಲಾಗುವುದು. ಅರ್ಹ ಫಲಾನುಭವಿಗಳಿಗೆ ಐದು ಸಾವಿರ ನಿವೇಶನ ನೀಡಲು ನಿರ್ಧರಿಸಲಾಗಿದೆ. ಕೆಲವರು 150 ಎಕರೆ ಜಾಗ ನೀಡಲು ಮುಂದೆ ಬಂದಿದ್ದಾರೆ. ಮುಂದಿನ ತಿಂಗಳು 337 ಫಲಾನುಭವಿಗಳಿಗೆ ನಿವೇಶನ ನೀಡಲಾಗುವುದು’ ಎಂದು ತಿಳಿಸಿದರು.

ಶಾಸಕ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಎಸ್.ಎಸ್.ಕೆ. ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಅಶೋಕ ಕಾಟವೆ, ಮಲ್ಲಿಕಾರ್ಜುನ ಸಾವುಕಾರ, ಪ್ರಭು ನವಲಗುಂದಮಠ, ಹನುಮಂತಸಾ ನಿರಂಜನ, ನಾರಾಯಣ ಜರತಾರಘರ, ರಂಗಾ ಬದ್ದಿ, ಭಾಸ್ಕರ ಜಿತೂರಿ, ಎನ್.ಎನ್. ಖೋಡೆ, ಡಿ.ಕೆ. ಚವ್ಹಾಣ, ಜಯತೀರ್ಥ ಕಟ್ಟಿ, ಬಾಲಣ್ಣ ಮಗಜಿಕೊಂಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.