ಹುಬ್ಬಳ್ಳಿ: ಕರ್ನಾಟಕ ಏಕೀಕರಣಕ್ಕೆ ಹುಬ್ಬಳ್ಳಿ ಕೊಟ್ಟ ಕೊಡುಗೆ ಅಪಾರ. ಗುಳಕವ್ವನ ಕೆರೆ ಆಗಿದ್ದ ಇಂದಿನ ನೆಹರೂ ಮೈದಾನದಲ್ಲಿ ಏಕೀಕರಣ ಹೋರಾಟಕ್ಕಾಗಿ ಗೋಲಿಬಾರ್ ನಡೆದಿತ್ತು. ವಿವಿಧೆಡೆಯಿಂದ ಚಕ್ಕಡಿ ಏರಿ ಬಂದು, ಕನ್ನಡ ಭಾಷಿಕರನ್ನು ಒಂದುಗೂಡಿಸಿ ಎಂದು ಹಿಡಿದ ಪಟ್ಟು ರಾಷ್ಟ್ರ ರಾಜಕಾರಣ ಅಲುಗಾಡಿಸಿತ್ತು.
ವರ್ಷ 1953. ಭಾಷಾವಾರು ಪ್ರಾಂತಗಳ ಕೂಗು ಎಲ್ಲೆಡೆ ಇತ್ತು. ಕನ್ನಡ ಭಾಷಿಕರನ್ನು ಒಂದೆಡೆ ಸೇರಿಸಲು ಸ್ಪಂದನೆ ಸಿಗದಿದ್ದಕ್ಕೆ ಧಾರವಾಡದ ಅದರಗುಂಚಿಯ ಕಲ್ಮೇಶ್ವರ ದೇವಸ್ಥಾನದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಶಂಕರಗೌಡ ಪಾಟೀಲರು ಮಾರ್ಚ್ 28ರಂದು ಕೈಗೊಂಡ ಉಪವಾಸ ಸತ್ಯಾಗ್ರಹ ಸಂಚಲನ ಮೂಡಿಸಿತ್ತು.
ಶಂಕರಗೌಡರ ಈ ಹೋರಾಟದ ಕುರಿತು ಇಲ್ಲಿನ ಪತ್ರಿಕೆಗಳೂ ವರದಿ ಮಾಡಲಿಲ್ಲ. ಆದರೆ, ಅಮೆರಿಕಾದ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ ಭಾರತ ಮತ್ತು ಕರ್ನಾಟಕದ ನಕಾಶೆ ಹಾಕಿ ಈ ಕುರಿತು ವಿಸ್ತೃತ ವರದಿ ನೀಡಿತು. ಇದರಿಂದ ಶಂಕರಗೌಡರ ಉಪವಾಸ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತು. ನಾಡಿನ ಜನರು ಬೆಂಬಲ ಸೂಚಿಸಿದರು.
ಚಳವಳಿಯ ತೀವ್ರತೆ ಕಂಡು ಏಪ್ರಿಲ್ 4ರಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಎಸ್.ನಿಜಲಿಂಗಪ್ಪ ಅವರ ಅಧ್ಯಕ್ಷತೆಯಲ್ಲಿ ಹುಬ್ಬಳ್ಳಿಯ ಟೌನ್‌ಹಾಲ್‌ನಲ್ಲಿ ಸಭೆ ನಡೆಯಿತು. ಹುಬ್ಬಳ್ಳಿ, ಧಾರವಾಡ ಮತ್ತು ಗ್ರಾಮಗಳಿಂದ ಜನರು ತಮ್ಮ ಚಕ್ಕಡಿಗಳಿಗೆ ಕಪ್ಪು ನಿಶಾನೆ ಕಟ್ಟಿಕೊಂಡು ಟೌನ್‌ಹಾಲ್‌ಗೆ ದೌಡಾಯಿಸಿದರು. ಹೊರಗೆ ಕಾಯುತ್ತಿದ್ದ ಜನರ ತಾಳ್ಮೆ ಕಟ್ಟೆ ಒಡೆಯಿತು. ರಾಜಕೀಯ ಮುಖಂಡರು ಹೊರಬರಲು ಹಿಂಜರಿದರು. ಪೊಲೀಸರು ಗೋಲಿಬಾರ್ ನಡೆಸಿದರು. ನಾಲ್ಕೈದು ಜನರಿಗೆ ಗುಂಡು ತಾಗಿತು.
‘ಇದು ಎಲ್ಲವನ್ನೂ ಗಮನಿಸಿದ ನಿಜಲಿಂಗಪ್ಪ ಅವರು ಹುಬ್ಬಳ್ಳಿಯಿಂದ ನೇರ ಅದರಗುಂಚಿಗೆ ತೆರಳಿ 6 ತಿಂಗಳಲ್ಗಿ ಕರ್ನಾಟಕ ಏಕೀಕರಣದ ಕುರಿತು ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು. ಒಪ್ಪದಿದ್ದಲ್ಲಿ, ಕೆಪಿಸಿಸಿಯ ಎಲ್ಲ ಸದಸ್ಯರು ಶಾಸನ ಸಭೆಗೆ ರಾಜೀನಾಮೆ ನೀಡುವುದಾಗಿ ಠರಾವು ಪಾಸ್ ಮಾಡಿರುವುದಾಗಿ ಶಂಕರಗೌಡರಿಗೆ ತಿಳಿಸಿದರು. ಉಪವಾಸ ಸತ್ಯಾಗ್ರಹ ಬಿಡಿಸಿದರು’ ಎಂದು ಬಾಲಕನಾಗಿ ಅಂದಿನ ಘಟನೆಗೆ ಸಾಕ್ಷಿಯಾಗಿದ್ದ ಶಂಕರಗೌಡರ ಸಹೋದರ ವಿ.ಜಿ.ಪಾಟೀಲ ವಿವರಿಸಿದರು.
ಶಂಕರಗೌಡರ ಹೆಸರಲ್ಲಿ ಪ್ರತಿಷ್ಠಾನ ಸ್ಥಾಪಿಸಿರುವೆ. ನನಗೆ ಸಿಕ್ಕ ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಹಣವನ್ನು ದತ್ತಿ ಇಟ್ಟಿದ್ದು ಆ ಹಣದಿಂದ ಪ್ರತಿ ವರ್ಷ ವಿಶೇಷ ಉಪನ್ಯಾಸ ಆಯೋಜಿಸುತ್ತೇನೆ.– ರಾಜು ಮುಲಗಿ, ಅಧ್ಯಕ್ಷ ಕರ್ನಾಟಕ ಜಾನಪದ ಪರಿಷತ್ತು ಧಾರವಾಡ ಘಟಕ
ಕನಸು ನನಸಾದ ಕ್ಷಣ..
ಕರ್ನಾಟಕ ಏಕೀಕರಣಕ್ಕೆ ನಿಜಲಿಂಗಪ್ಪ ಮತ್ತು ಇತರ ಮುಖಂಡರು ಹೇರಿದ ಒತ್ತಡ ಮತ್ತು ನೀಡಿದ ಎಚ್ಚರಿಕೆ ದೆಹಲಿ ಗದ್ದುಗೆಗೆ ಬಿಸಿ ಮುಟ್ಟಿಸಿತು. ಆಗಿನ ಪ್ರಧಾನಿ ಜವಾಹರ್‌ಲಾಲ್ ನೆಹರೂ ಅವರು ಕರ್ನಾಟಕ ಏಕೀಕರಣಕ್ಕೆ ಹಸಿರು ನಿಶಾನೆ ತೋರಿದರು. ಆದರೆ ಉತ್ತರ ಕರ್ನಾಟಕ ಪ್ರಾಂತ್ಯಗಳನ್ನು ಒಂದುಗೂಡಿಸಲು ಹಲವರಿಂದ ವಿರೋಧ ವ್ಯಕ್ತವಾದಾಗ ಶಂಕರಗೌಡರು ಹಂಪಿಗೆ ತೆರಳಿ ಉಪವಾಸ ಆರಂಭಿಸಿದರು.
ಉಪವಾಸದ ಹತ್ತನೇ ದಿನವಾದ ಜುಲೈ 11 1955ರಲ್ಲಿ ಅಖಂಡ ಕರ್ನಾಟಕ ಏಕೀಕರಣಕ್ಕೆ ಠರಾವು ಪಾಸು ಮಾಡಿದ ಸಿಹಿ ಸುದ್ದಿ ಬಂತು. ಅದರನ್ವಯ 1956ರ ನವೆಂಬರ್ 1ರಂದು ಅಖಂಡ ಕರ್ನಾಟಕದ ಕನಸು ನನಸಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.