
ಹುಬ್ಬಳ್ಳಿ: ನಗರದ ರಾಯಾಪುರದ ಇಸ್ಕಾನ್ ಮಂದಿರದ ಹಿಂಭಾಗದಲ್ಲಿರುವ ಅಕ್ಷಯ ಪಾತ್ರ ಪ್ರತಿಷ್ಠಾನದ ಅಡುಗೆ ಮನೆಯಲ್ಲಿ ಚಪಾತಿ, ಅನ್ನ ಹಾಗೂ ಸಾಂಬಾರು ತಯಾರಿಸುವ ಆಧುನಿಕ ತಂತ್ರಜ್ಞಾನದ ಬೃಹತ್ ಯಂತ್ರಗಳನ್ನು ಶುಕ್ರವಾರ ಲೋಕಾರ್ಪಣೆ ಮಾಡಲಾಯಿತು.
ನಗರದ ತಾರಿಹಾಳ ಬಳಿ ಇರುವ ಮೈಕ್ರೋಫಿನಿಶ್ ಕಂಪನಿಯ ಸಾಮಾಜಿಕ ಜವಾಬ್ದಾರಿ ಉಪಕ್ರಮ (ಸಿಎಸ್‌ಆರ್) ನಿಧಿಯಡಿ 10 ಸ್ಟೀಮ್–ಚಾಲಿತ ರೈಸ್ ಕೌಲ್ಡ್ರನ್, ಎಂಟು ಡಬಲ್–ಜಾಕೆಟೆಡ್–ಸ್ಟೀಮ್ ಚಾಲಿತ ಸಾಂಬಾರ್ ಕೌಲ್ಡ್ರನ್ ಯಂತ್ರ ಹಾಗೂ ಉಪಕರಣಗಳನ್ನು ಅಳವಡಿಸಲಾಗಿದೆ.
ಮೈಕ್ರೋಫಿನಿಶ್ ಕಂಪನಿ ಅಧ್ಯಕ್ಷ ತಿಲಕ ವಿಕಂಶಿ, ನಿರ್ದೇಶಕ ಮಹೇಂದ್ರ ವಿಕಂಶಿ ಹಾಗೂ ಹುಬ್ಬಳ್ಳಿ–ಧಾರವಾಡ ಅಕ್ಷಯ ಪಾತ್ರ ಪ್ರತಿಷ್ಠಾನ ಘಟಕದ ಅಧ್ಯಕ್ಷ ರಾಜೀವ್ ಲೋಚನದಾಸ ಇದ್ದರು.
‘ಸರ್ಕಾರದ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಧ್ಯೇಯ–ಉದ್ದೇಶ ಸಮರ್ಪಕವಾಗಿ ಈಡೇರಬೇಕು ಎನ್ನುವ ನಿಟ್ಟಿನಲ್ಲಿ ಅಕ್ಷಯಪಾತ್ರ ಪ್ರತಿಷ್ಠಾನ, ಮಕ್ಕಳಿಗೆ ಗುಣಮಟ್ಟದ ಹಾಗೂ ಪೌಷ್ಟಿಕಾಂಶಯುಕ್ತ ಆಹಾರ ಸಿದ್ಧಪಡಿಸುತ್ತಿದೆ. ಲಕ್ಷಾಂತರ ಮಕ್ಕಳಿಗೆ ಸೀಮಿತ ಅವಧಿಯಲ್ಲಿ ಆಹಾರ ಸಿದ್ಧಪಡಿಸುವ ನಿಟ್ಟಿನಲ್ಲಿ ನಮ್ಮ ಕಂಪನಿ ಸಾಮಾಜಿಕ ಹೊಣೆಗಾರಿಕೆಯಡಿ ತುಸು ನೆರವು ನೀಡಿದೆ’ ಎಂದು ಮೈಕ್ರೋಫಿನಿಶ್ ಕಂಪನಿ ಅಧ್ಯಕ್ಷ ಮಹೇಂದ್ರ ವಿಕಂಶಿ ಹೇಳಿದರು.
ನಿತ್ಯ 1.30 ಲಕ್ಷ ಮಕ್ಕಳಿಗೆ ಬಿಸಿಯೂಟ: ‘ಏಷ್ಯಾದಲ್ಲಿಯೇ ಅತಿ ದೊಡ್ಡ ಅಡುಗೆ ಮನೆ ಇದಾಗಿದ್ದು, ನಿತ್ಯ ಧಾರವಾಡ ಜಿಲ್ಲೆ ಸೇರಿ ಅಕ್ಕಪಕ್ಕದ ಜಿಲ್ಲೆಯ ಐದು ತಾಲ್ಲೂಕಿನ 1.30 ಲಕ್ಷ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಇಲ್ಲಿಯೇ ಸಿದ್ಧಪಡಿಸಲಾಗುತ್ತಿದೆ’ ಎಂದು ಇಸ್ಕಾನ್ ಹುಬ್ಬಳ್ಳಿ–ಧಾರವಾಡದ ರಾಮ ಗೋಪಾಲದಾಸ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಈ ಹಿಂದೆ ಸಿಬ್ಬಂದಿ ಅಡುಗೆ ಸಿದ್ಧಪಡಿಸುತ್ತಿದ್ದರು. ಇದೀಗ ಸುಧಾರಿತ ಬೃಹತ್ ಯಂತ್ರೋಪಕರಣಗಳ ಅಳವಡಿಸಿರುವುದರಿಂದ, ಎಲ್ಲವೂ ಯಂತ್ರಗಳ ಮೂಲಕವೇ ನಡೆಯುತ್ತಿದೆ. ಒಂದು ಕ್ವಿಂಟಾಲ್ ಅಕ್ಕಿ ಹದಿನೈದು ನಿಮಿಷದಲ್ಲಿ ಅನ್ನ ಆಗುತ್ತದೆ. ಅಂದಾಜು ಆರು ಸಾವಿರ ಮಕ್ಕಳಿಗೆ 45 ನಿಮಿಷದಲ್ಲಿ ಸಾಂಬಾರು ಸಿದ್ಧವಾಗುತ್ತದೆ. ನೂತನ ಯಂತ್ರದಲ್ಲಿ ಒಂದು ತಾಸಿಗೆ 20 ಸಾವಿರ ರೊಟ್ಟಿ, ಚಪಾತಿ ಸಿದ್ಧಪಡಿಸಬಹುದಾಗಿದೆ’ ಎಂದರು.
‘ನಸುಕಿನ 4 ಗಂಟೆಯಿಂದಲೇ ಅಡುಗೆ ಸಿದ್ಧತೆ ನಡೆದು, ಬೆಳಿಗ್ಗೆ 9ರ ಒಳಗೆ ಮುಕ್ತಾಯವಾಗುತ್ತದೆ. ಶಾಲೆಯಲ್ಲಿನ ಮಕ್ಕಳ ಹಾಜರಾತಿಗೆ ಅನುಗುಣವಾಗಿ ಬಿಸಿಯೂಟವನ್ನು ನಮ್ಮದೇ ವಾಹನದಲ್ಲಿ ಕಳುಹಿಸುತ್ತೇವೆ. ಒಂದು ವಾರಕ್ಕಷ್ಟೇ ಬೇಕಾಗುವ ಆಹಾರ ಪದಾರ್ಥಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತೇವೆ. ತರಕಾರಿ ಕೆಡದಂತೆ ಇಡಲು ಪ್ರತ್ಯೇಕ ಕೋಲ್ಡ್ ಸ್ಟೋರೇಜ್ ಕೊಠಡಿ ಇದೆ. ಸೊಪ್ಪು–ತರಕಾರಿಗಳನ್ನು ಸ್ಥಳೀಯ ರೈತರಿಂದಲೇ ಖರೀದಿಸಲು ಒಂದು ವರ್ಷಕ್ಕೆ ಒಪ್ಪಂದ ಮಾಡಿಕೊಂಡಿದ್ದೇವೆ. ಸರ್ಕಾರದಿಂದ ರಿಯಾಯಿತಿ ದರದಲ್ಲಿ ಅಕ್ಕಿ ಪೂರೈಕೆಯಾಗುತ್ತಿದ್ದು, ಕೆಲವು ಬಾರಿ ಕಬ್ಬಿಣದ ತುಂಡು, ಬ್ಲೇಡ್, ಮೊಳೆ ಹಾಗೂ ಕಲ್ಲುಗಳು ಇರುತ್ತವೆ. ಅವುಗಳನ್ನು ಪ್ರತ್ಯೇಕಿಸಲೆಂದೇ ಯಂತ್ರವನ್ನು ಅಳವಡಿಸಿಕೊಂಡಿದ್ದೇವೆ’ ಎಂದು ವಿವರಿಸಿದರು.
‘ಬೃಹತ್ ಅಡುಗೆ ಮನೆಯಲ್ಲಿ ಪ್ರತಿ ದಿನ 140 ಸಿಬ್ಬಂದಿ ಅಡುಗೆ ಸಿದ್ಧತೆಯಲ್ಲಿ ತೊಡಗಿಕೊಂಡರೆ, 200 ಸಿಬ್ಬಂದಿ ಆಹಾರ ಸಂಗ್ರಹ ಕೊಠಡಿ, ಲೆಕ್ಕಪತ್ರ, ಚಾಲಕ, ಸ್ವಚ್ಛತೆಯಲ್ಲಿ ನಿರತರಾಗಿರುತ್ತಾರೆ. ಅಡುಗೆ ಮನೆಯಲ್ಲಿ ಪ್ರತಿದಿನ 200ರಿಂದ 300 ಕೆ.ಜಿ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಬಯೋಗ್ಯಾಸ್ ಮೂಲಕ 40 ಲೀಟರ್ ಅಡುಗೆ ಅನಿಲ ಮರುಪೂರಣ ಮಾಡುತ್ತಿದ್ದೇವೆ. ಇಸ್ಕಾನ್‌ನ ಪ್ರತಿ ಕಟ್ಟಡದ ಮೇಲೂ ಸೋಲಾರ್ ಅಳವಡಿಕೆ ಮಾಡಿರುವುದರಿಂದ, ವಿದ್ಯುತ್‌ನಲ್ಲಿ ಸ್ವಾವಲಂಬಿ ಆಗಿದ್ದೇವೆ’ ಎಂದು ಹೇಳಿದರು.
ಅಕ್ಷಯಪಾತ್ರ ಪ್ರತಿಷ್ಠಾನ 24ನೇ ವರ್ಷದಲ್ಲಿ ಮುಂದುವರಿಯುತ್ತಿದೆ. ವಿವಿಧ ಸಂಘ–ಸಂಸ್ಥೆ ಕಂಪನಿಗಳ ದೇಣಿಗೆ ಹಾಗೂ ಸರ್ಕಾರದ ಸಹಾಯದಿಂದ ಮಕ್ಕಳಿಗೆ ಬಿಸಿಯೂಟ ಸಿದ್ಧಪಡಿಸುತ್ತಿದ್ದೇವೆರಾಮ ಗೋಪಾಲದಾಸ್ ಇಸ್ಕಾನ್ ಹುಬ್ಬಳ್ಳಿ–ಧಾರವಾಡ
‘ಗುಣಮಟ್ಟ ಪರಿಶೀಲನೆಗೆ ಪ್ರಯೋಗಾಲಯ’
‘ಅಡುಗೆ ಮನೆಗೆ ಬರುವ ಪ್ರತಿಯೊಂದು ಆಹಾರ ಪದಾರ್ಥಗಳನ್ನು ಸರ್ಕಾರದ ಮಾನದಂಡದ ಪ್ರಕಾರವೇ ತಪಾಸಣೆ ಪರೀಕ್ಷೆ ನಡೆಸುತ್ತೇವೆ. ಬಳಸಲು ಯೋಗ್ಯವಲ್ಲದ ಸಾಮಗ್ರಿಗಳನ್ನು ವಾಪಸ್ ಕಳುಹಿಸುತ್ತೇವೆ. ಗುಣಮಟ್ಟದ ಪರಿಶೀಲನೆಗಾಗಿಯೇ ಆಹಾರ ರಕ್ಷಣೆ ಮತ್ತು ಗುಣಮಟ್ಟ ನಿಯಂತ್ರಣ ಪ್ರಯೋಗಾಲಯವಿದ್ದು ಮೂವರು ಪರಿಣತ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಾರೆ’ ಎಂದು ಗುಣಮಟ್ಟ ವಿಭಾಗದ ಸಹಾಯಕ ವ್ಯವಸ್ಥಾಪಕ ನಂದಕುಮಾರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.