ADVERTISEMENT

ಇನ್‌ಸ್ಪೆಕ್ಟರ್ ಸೂರಿನ್ ಅಮಾನತಿಗೆ ವಕೀಲರ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 15:36 IST
Last Updated 30 ನವೆಂಬರ್ 2020, 15:36 IST
ನವನಗರದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಎಪಿಎಂಸಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಪ್ರಭು ಸೂರಿನ್ ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ, ಹುಬ್ಬಳ್ಳಿ ವಕೀಲರ ಸಂಘದವರು ಸೋಮವಾರ ಕಲಾಪ ಬಹಿಷ್ಕರಿಸಿ ಪ್ರತಿಭಟಿಸಿದರು
ನವನಗರದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಎಪಿಎಂಸಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಪ್ರಭು ಸೂರಿನ್ ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ, ಹುಬ್ಬಳ್ಳಿ ವಕೀಲರ ಸಂಘದವರು ಸೋಮವಾರ ಕಲಾಪ ಬಹಿಷ್ಕರಿಸಿ ಪ್ರತಿಭಟಿಸಿದರು   

ಹುಬ್ಬಳ್ಳಿ: ನವನಗರದಲ್ಲಿ ಇತ್ತೀಚೆಗೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಎಪಿಎಂಸಿ ಠಾಣೆ ಇನ್‌ಸ್ಪೆಕ್ಟರ್ ಪ್ರಭು ಸೂರಿನ್‌ ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ, ಹುಬ್ಬಳ್ಳಿ ವಕೀಲರ ಸಂಘದವರು ಸೋಮವಾರ ಕೋರ್ಟ್ ಕಲಾಪ ಬಹಿಷ್ಕರಿಸಿ ಪ್ರತಿಭಟಿಸಿದರು. ಇದಕ್ಕೂ ಮುಂಚೆ ನಡೆದ ಸಂಘದ ಸಭೆಯಲ್ಲಿ ಘಟನೆಯನ್ನು ಎಲ್ಲರೂ ಖಂಡಿಸಿದರು.

ಗಲಾಟೆ ಸಂದರ್ಭದಲ್ಲಿ ವಕೀಲ ವಿನೋದ ಪಾಟೀಲ ಅವರಿಗೆ ಸೂರಿನ್ ಅವರು ಸಾರ್ವಜನಿಕವಾಗಿ ಬೇಡಿ ಹಾಕಿದ್ದಾರೆ. ಇದು ಸುಪ್ರೀಂಕೋರ್ಟ್‌ ಮಾರ್ಗದರ್ಶಿ ಸೂತ್ರದ ಸ್ಪಷ್ಟ ಉಲ್ಲಂಘನೆಯಾಗಿದೆ. ಕಾನೂನುಬಾಹಿರವಾಗಿ ನಡೆದುಕೊಂಡಿರುವ ಸೂರಿನ್ ಅವರನ್ನು ಸರ್ಕಾರ ಅಮಾನತುಗೊಳಿಸಬೇಕು ಎಂದು ಸಂಘದ ಅಧ್ಯಕ್ಷ ಅಶೋಕ ಬಳಿಗಾರ ಒತ್ತಾಯಿಸಿದರು.

ಬಳಿಕ ಉಪ ತಹಶೀಲ್ದಾರ್ ಮೂಲಕ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.

ADVERTISEMENT

ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ನಡೆಸಿದ್ದ ತನಿಖೆ ಆಧರಿಸಿ, ಇನ್‌ಸ್ಪೆಕ್ಟರ್ ಸೂರಿನ್ ಅವರನ್ನು ಭಾನುವಾರ ಕಮಿಷನರ್‌ ಕಚೇರಿಯ ಸಿಎಸ್‌ಬಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು.

ಏನಿದು ಪ್ರಕರಣ

ನವನಗರದ ಕರ್ನಾಟಕ ವೃತ್ತದಲ್ಲಿ ರೌಡಿ ಶೀಟರ್‌ ಪ್ರವೀಣ್‌ ಪೂಜಾರಿ, ಮಲ್ಲಯ್ಯ ಹಿರೇಮಠ ಮತ್ತು ವಕೀಲ ವಿನೋದ ಪಾಟೀಲ ಎಂಬುವರು ಜಗಳವಾಡುತ್ತಿದ್ದರು. ವಿಷಯ ತಿಳಿದು ಸ್ಥಳಕ್ಕೆ ತೆರಳಿದ್ದ ಪೊಲೀಸರ ವಿರುದ್ಧ ಎಲ್ಲರೂ ತಿರುಗಿ ಬಿದ್ದಿದ್ದರು ಎಂದು ಸೂರಿನ್ ಪ್ರಕರಣ ದಾಖಲಿಸಿಕೊಂಡಿದ್ದರು. ಪಾಟೀಲ ಅವರ ವಿರುದ್ಧ ಸೂರಿನ್ ದರ್ಪ ತೋರಿಸಿ, ಕಾನೂನುಬಾಹಿರವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿ ವಕೀಲರು ಪ್ರತಿಭಟನೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.