ADVERTISEMENT

ಸಂಶೋಧನೆ ಪ್ರಯೋಜನ ರೈತರಿಗೆ ತಲುಪಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಕೃಷಿ ಮೇಳ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 4:08 IST
Last Updated 16 ಸೆಪ್ಟೆಂಬರ್ 2025, 4:08 IST
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಕೃಷಿ ಮೇಳ ಉದ್ಘಾಟನಾ ಸಮಾರಂಭದಲ್ಲಿ ಕೃಷಿ ವಿಶ್ವವಿದ್ಯಾಲಯದ 11 ಪ್ರಕಟಣೆಗಳನ್ನು ಬಿಡುಗಡೆಗೊಳಿಸಲಾಯಿತು. ಶಾಸಕ ಎನ್‌.ಎಚ್‌.ಕೋನರೆಡ್ಡಿ, ಸಚಿವ ಸಂತೋಷ ಲಾಡ್‌, ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಪ್ರಸಾದ ಅಬ್ಬಯ್ಯ, ಕುಲಪತಿ ಪ್ರೊ.ಪಿ.ಎಲ್‌.ಪಾಟೀಲ ಪಾಲ್ಗೊಂಡಿದ್ದರು
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಕೃಷಿ ಮೇಳ ಉದ್ಘಾಟನಾ ಸಮಾರಂಭದಲ್ಲಿ ಕೃಷಿ ವಿಶ್ವವಿದ್ಯಾಲಯದ 11 ಪ್ರಕಟಣೆಗಳನ್ನು ಬಿಡುಗಡೆಗೊಳಿಸಲಾಯಿತು. ಶಾಸಕ ಎನ್‌.ಎಚ್‌.ಕೋನರೆಡ್ಡಿ, ಸಚಿವ ಸಂತೋಷ ಲಾಡ್‌, ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಪ್ರಸಾದ ಅಬ್ಬಯ್ಯ, ಕುಲಪತಿ ಪ್ರೊ.ಪಿ.ಎಲ್‌.ಪಾಟೀಲ ಪಾಲ್ಗೊಂಡಿದ್ದರು   

ಧಾರವಾಡ: ‘ಕೃಷಿ ವಿಶ್ವವಿದ್ಯಾಲಯಗಳು ಸಂಶೋಧನೆಗೆ ಒತ್ತು ನೀಡಬೇಕು. ಸಂಶೋಧನೆಯ ಲಾಭಗಳು ರೈತರಿಗೆ ತಲುಪಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಸೋಮವಾರ ಕೃಷಿ ಮೇಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಲ್ಯಾಬ್ ಟು ಲ್ಯಾಂಡ್’ ಜೊತೆಗೆ ‘ಲ್ಯಾಂಡ್ ಟು ಲ್ಯಾಬ್’ ಕಡೆಗೆ ವಿಶ್ವವಿದ್ಯಾಲಯಗಳು ಗಮನಹರಿಸಬೇಕು. ಕೃಷಿ ಇಲಾಖೆ ಮತ್ತು ಕೃಷಿ ವಿಶ್ವವಿದ್ಯಾಲಯಗಳು ರೈತರಿಗೆ ಸಂಪರ್ಕ ಸೇತುವಿನಂತೆ ಕಾರ್ಯ ನಿರ್ವಹಿಸಬೇಕು’ ಎಂದರು.

‘ರಾಜ್ಯದ ಕೃಷಿ ಭೂಮಿಯಲ್ಲಿ ಮಳೆ ಆಶ್ರಿತ ಕೃಷಿ ಪ್ರದೇಶ ಶೇ 60 ಹಾಗೂ ನೀರಾವರಿ ಆಶ್ರಿತ ಶೇ 40 ಇದೆ. ಮಳೆ ಆಶ್ರಿತ ಪ್ರದೇಶಗಳಲ್ಲಿ ಯಾವ ಬೆಳೆ ಬೆಳೆಯಬೇಕು ಎಂಬ ಕುರಿತು ರೈತರಿಗೆ ತಿಳಿಸುವ ಕೆಲಸವನ್ನು ಕೃಷಿ ವಿಶ್ವವಿದ್ಯಾಲಯಗಳು ಮಾಡಬೇಕು’ ಎಂದು ಹೇಳಿದರು.

ADVERTISEMENT

‘ರೈತರು ಸಿರಿಧಾನ್ಯಗಳನ್ನು ಬೆಳೆಯಬೇಕು. ಸಿರಿಧಾನ್ಯಗಳು ಆರೋಗ್ಯ ಕಾಪಾಡಿಕೊಳ್ಳಲು ಪೂರಕವಾಗಿವೆ. ಸಿರಿಧಾನ್ಯಗಳ ಮಹತ್ವವನ್ನು ಕೃಷಿ ವಿಜ್ಞಾನಿಗಳು ರೈತರಿಗೆ ತಿಳಿಸಬೇಕು’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್‌ ಮಾತನಾಡಿ, ‘ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳಿಗೆ ₹55 ಸಾವಿರ ಕೋಟಿ ಅನುದಾನ ಬಳಕೆ ಮಾಡುತ್ತಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಸುಮಾರು ₹83 ಸಾವಿರ ಕೋಟಿ, ಶಿಕ್ಷಣಕ್ಕೆ ₹65 ಸಾವಿರ ಕೋಟಿ, ಸಾಮಾಜಿಕ ಭದ್ರತಾ ಯೋಜನೆಗಳಿಗೆ ₹1.20 ಲಕ್ಷ ಕೋಟಿ ಅನುದಾನ ಒದಗಿಸುತ್ತಿದೆ’ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಕೃಷಿಧಾರೆ’ ಆ್ಯಪ್‌ ಬಿಡುಗಡೆಗೊಳಿಸಿದರು.

ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್.ಪಾಟೀಲ, ವಿಧಾನಸಭೆ ಆಡಳಿತ ಪಕ್ಷದ ಮುಖ್ಯ ಸಚೇತಕ ಅಶೋಕ ಪಟ್ಟಣ, ಶಾಸಕರಾದ ಎನ್.ಎಚ್.ಕೋನರಡ್ಡಿ, ಪ್ರಸಾದ ಅಬ್ಬಯ್ಯ, ವಿಜಯಾನಂದ ಕಾಶಪ್ಪನವರ, ಯಾಸೀರಅಹ್ಮದ ಪಠಾಣ, ಬಸವರಾಜ ಶಿವಣ್ಣನವರ, ಶ್ರೀನಿವಾಸ ಮಾನೆ, ಜಿ.ಎಸ್.ಪಾಟೀಲ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ ಇದ್ದರು.

ಕೃಷಿ ಮೇಳದಲ್ಲಿ ಸಾಂಸ್ಕೃತಿಕ ಕಲಾ ತಂಡದವರ ಜೊತೆ ವ್ಯಕ್ತಿಯೊಬ್ಬರು ಸೆಲ್ಫಿ ಕ್ಲಿಕ್ಕಿಸಿಕೊಂಡರು
ಕೃಷಿ ವಿಶ್ವವಿದ್ಯಾಲಯದ ಆಡಳಿತ ಕಚೇರಿ ಮುಂದಿನ ಉದ್ಯಾನದಲ್ಲಿ ಲಂಬಾನಿ ಮಹಿಳೆಯರು ನೃತ್ಯ ಪ್ರದರ್ಶಿಸಿದರು
ರೈತರು ಆತ್ಮಹತ್ಯೆ ಮಾಡಿಕೊಳ್ಳದಂತೆ ಕೃಷಿ ವಿಶ್ವವಿದ್ಯಾಲಯಗಳು ಶ್ರೇಷ್ಠ ಕೆಲಸ ಮಾಡಬೇಕು. ಸಂಶೋಧನೆಗಳನ್ನು ರೈತರಿಗೆ ತಲುಪಿಸಿ ಕೃಷಿಯನ್ನು ಲಾಭದಾಯಕವಾಗಿಸಬೇಕು
ಬಸವರಾಜ ಹೊರಟ್ಟಿ ಸಭಾಪತಿ ವಿಧಾನ ಪರಿಷತ್ತು

‘ಬೆಳೆ ಹಾನಿ: ಪರಿಹಾರ ಜಮೆಗೆ ಕ್ರಮ’

‘ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ 80 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಮಳೆಯಿಂದಾಗಿ ಕೆಲ ಜಿಲ್ಲೆಗಳಲ್ಲಿ ಸುಮಾರು 5 ಲಕ್ಷ ಹೆಕ್ಟೇರ್‌ ಬೆಳೆ ನಾಶವಾಗಿದೆ. ಜಂಟಿ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಸಿಇಒಗಳಿಗೆ ತಿಳಿಸಿದ್ದೇನೆ’ ಎಂದು ಸಿದ್ದರಾಮಯ್ಯ ಹೇಳಿದರು. ‘ಧಾರವಾಡ ಜಿಲ್ಲೆಯ ಬೆಳೆ ಹಾನಿ ಜಂಟಿ ಸಮೀಕ್ಷೆ ವರದಿ ಸಲ್ಲಿಕೆಯಾಗಿದೆ. ಸುಮಾರು 97 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ರೈತರ ಖಾತೆಗಳಿಗೆ ಪ‍ರಿಹಾರ ಜಮೆಯಾಗಲಿದೆ’ ಎಂದರು. ‘ರಾಜ್ಯ ಸರ್ಕಾರವು ಬೆಣ್ಣಿಹಳ್ಳದ ಅಭಿವೃದ್ಧಿಗೆ ₹200 ಕೋಟಿ ಮಂಜೂರು ಮಾಡಿದೆ. ಕಾಮಗಾರಿ ನಿಟ್ಟಿನಲ್ಲಿ ಟೆಂಡರ್ ಆಹ್ವಾನಿಸಲಾಗಿದೆ’ ಎಂದು ತಿಳಿಸಿದರು.

‘ಜಿಲ್ಲೆಗೆ ಮತ್ತೊಂದು ಖರೀದಿ ಕೇಂದ್ರ’

‘ಬೆಂಬಲ ಬೆಲೆ ಖರೀದಿ (ಎಂಎಸ್‌ಪಿ) ಕೇಂದ್ರಗಳಲ್ಲಿ ಸೆಪ್ಟೆಂಬರ್‌ ಅಂತ್ಯದಲ್ಲಿ ನೋಂದಣಿ ಆರಂಭಿಸಲಾಗುವುದು. ಅಕ್ಟೋಬರ್‌ ನವೆಂಬರ್‌ನಲ್ಲಿ ಖರೀದಿ ಆರಂಭಿಸಲು ತೀರ್ಮಾನಿಸಲಾಗಿದೆ’ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ತಿಳಿಸಿದರು. ‘ನವಣೆ ಉದಲು ಮುಂತಾದ ಸಿರಿಧಾನ್ಯಗಳನ್ನು ರಾಗಿ ದರದಲ್ಲೇ ಖರೀದಿಸಲು ನಿರ್ಧರಿಸಲಾಗಿದೆ. ಧಾರವಾಡ ಜಿಲ್ಲೆಗೆ ಹೆಚ್ಚುವರಿಯಾಗಿ ಇನ್ನೊಂದು ಖರೀದಿ ಕೇಂದ್ರಕ್ಕೆ ಕೋರಿಕೆ ಸಲ್ಲಿಸಿದ್ದಾರೆ. ಅನುಮೋದನೆ ನೀಡಲಾಗುವುದು’ ಎಂದರು.

14 ಮಂದಿಗೆ ಪ್ರಶಸ್ತಿ ಪ್ರದಾನ

14 ಮಂದಿಗೆ ಜಿಲ್ಲಾಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪಡೆದ ಮಹಿಳೆಯರು: ರೇಣುಕಾ ಬೋಜಣ್ಣವರ ಬಸಮ್ಮ ಚೆನ್ನೂರು ಸುಧಾ ಮೂಶಪ್ಪನವರ ಕೃಷ್ಣಾಬಾಯಿ ಸಾಳುಂಕೆ ಸಂಗೀತಾ ಕಾಂತಿ ಕಮಲಾ ಕೋಡೆಕರ್‌ ಶಿವಲೀಲಾ ಹಿತ್ತಲಮನಿ. ಪ್ರಶಸ್ತಿ ಪಡೆದ ಪುರುಷರು: ರಾಮನಗೌಡ ಪಾಟೀಲ ರಾಜೀವ ದಾನಪ್ಪನವರ ಗರುಡಪ್ಪ ಜಂಟ್ಲಿ ನಿಂಗನಗೌಡ ಪಾಟೀಲ ಅರ್ಜುನ ಗಲಗಲಿ ಸುಬ್ರಾಯ ಹೆಗಡೆ ಶೌಕತ್‌ ಅಲಿ ಲಂಬೂನವರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.