ADVERTISEMENT

ಧಾರವಾಡ | ಕೃಷಿ ವಿಶ್ವವಿದ್ಯಾಲಯ ಕೃಷಿ ಮೇಳ: ಹೊಸ ತಳಿ, ಬೆಳೆ ವೈಶಿಷ್ಟ್ಯ ಪರಿಚಯ

ಬೆಳೆ ಪ್ರಯೋಗ ತಾಕು

ಬಿ.ಜೆ.ಧನ್ಯಪ್ರಸಾದ್
Published 12 ಸೆಪ್ಟೆಂಬರ್ 2025, 4:19 IST
Last Updated 12 ಸೆಪ್ಟೆಂಬರ್ 2025, 4:19 IST
ಧಾರವಾಡದ ಕೃಷಿ ವಿಶ್ವವಿದ್ಯಾಲಯ ಆವರಣದ ಬೆಳೆ ಪ್ರಯೋಗ ತಾಕಿನಲ್ಲಿ ಕುಲಪತಿ ಪ್ರೊ.ಪಿ.ಎಲ್‌.ಪಾಟೀಲ ಅವರು ಮುಸುಕಿನ ಜೋಳ ಧರ್ಮ ಹೈಬ್ರಿಡ್‌ ತಳಿ ಬೆಳೆ ವೀಕ್ಷಿಸಿದರು
ಧಾರವಾಡದ ಕೃಷಿ ವಿಶ್ವವಿದ್ಯಾಲಯ ಆವರಣದ ಬೆಳೆ ಪ್ರಯೋಗ ತಾಕಿನಲ್ಲಿ ಕುಲಪತಿ ಪ್ರೊ.ಪಿ.ಎಲ್‌.ಪಾಟೀಲ ಅವರು ಮುಸುಕಿನ ಜೋಳ ಧರ್ಮ ಹೈಬ್ರಿಡ್‌ ತಳಿ ಬೆಳೆ ವೀಕ್ಷಿಸಿದರು   

ಧಾರವಾಡ: ಕೃಷಿ ಮೇಳದಲ್ಲಿ ರೈತರಿಗೆ ಹೊಸ ತಳಿಗಳು, ಬೆಳೆ ವಿಧಾನ ಸಮಗ್ರ ಮಾಹಿತಿ ಒದಗಿಸಲು ಬೆಳೆ ಪ್ರಯೋಗ ತಾಕು ಸಜ್ಜುಗೊಳಿಸಲಾಗಿದೆ. 500 ಎಕರೆಯಲ್ಲಿ ಶೇಂಗಾ, ಜೋಳ, ಮುಸುಕಿನ ಜೋಳ ಹಾಗೂ ಸೊಯಾಬೀನ್‌ನ 50ಕ್ಕೂ ಹೆಚ್ಚು ತಳಿಗಳು ಈ ತಾಕುಗಳಲ್ಲಿ ಇವೆ.

ಕೃಷಿ ವಿಶ್ವವಿದ್ಯಾಲಯದ ಹಳೆಯ ಮುಖ್ಯ ಕಚೇರಿ ಕಟ್ಟಡದ ಹಿಂಭಾಗದಲ್ಲಿ ತಾಕುಗಳಿವೆ. ಬೆಳೆ ಹೆಸರು, ತಳಿ ವಿವರಗಳ ಫಲಕಗಳನ್ನು ಅಳವಡಿಸಲಾಗಿದೆ. ಮಿಶ್ರ ಬೆಳೆ ಪದ್ಧತಿ, ಸಾವಯವ ಕೃಷಿ ವಿಧಾನ, ಪ್ರಯೋಜನಗಳ ಕುರಿತು ಮಾಹಿತಿ ಲಭ್ಯ ಇವೆ.

ಶೇಂಗಾ ನಡುವೆ ತೊಗರಿ, ಗೋವಿನ ಜೋಳ, ಹತ್ತಿ, ಮೆಕ್ಕೆಜೋಳದ ನಡುವೆ ತೊಗರಿ ಮಿಶ್ರ ಬೆಳೆಗಳ ತಾಕುಗಳು ಇವೆ.

ADVERTISEMENT

ಕೃಷಿ ವಿಶ್ವವಿದ್ಯಾಲಯದಲ್ಲಿ ಸೆ. 13ರಿಂದ ಕೃಷಿ ಮೇಳ ನಡೆಯಲಿದೆ. ವಿವಿಧೆಡೆಗಳಿಂದ ಮೇಳಕ್ಕೆ ಬರುವ ರೈತರು ತಾಕುಗಳಿಗೆ ಭೇಟಿ ನೀಡಿ ಬೆಳೆಗಳನ್ನು ಪ್ರತ್ಯಕ್ಷವಾಗಿ ವೀಕ್ಷಿಸಬಹುದು.

‘ಶೇಂಗಾದ ಸೂಪರ್‌ ಟಿಎಂವಿ:2, ಡಿಬಿಜಿವಿ:3, ಡಿಬಿಜಿವಿ:4 , ಮೆಕ್ಕೆಜೋಳದ ‘ಧರ್ಮ ಹೈಬ್ರಿಡ್‌’, ಜೋಳ ಸಿಎಸ್‌ವಿ: 49, ಸೊಯಾಬೀನ್‌ ಡಿಎಸ್‌ಬಿ:34 ಮುಂತಾದ ತಳಿಗಳ ಬೆಳೆಗಳು ಇವೆ. ಮೇವಿನ ಬೆಳೆ, ಆಹಾರ ಬೆಳೆ, ಜೋಳದ ತಳಿಗಳು ಇವೆ. ರೋಗ (ತುಕ್ಕು, ಎಲೆಚುಕ್ಕಿ...) ನಿರೋಧಕ, ಅಧಿಕ ಇಳುವರಿ, ಕಡಿಮೆ ಅವಧಿ ತಳಿಗಳ ಬೆಳೆಗಳು ಇವೆ’ ಎಂದು ಸಂಶೋಧಾನ ವಿಭಾಗದ ನಿರ್ದೇಶಕ ಪ್ರೊ.ಬಿ.ಡಿ.ಬಿರಾದಾರ ತಿಳಿಸಿದರು.

ಬೆಳೆ ಪ್ರಯೋಗ ತಾಕು ಭಾಗದಲ್ಲಿ ಸಾವಯವ ಕೃಷಿ ಸಂಶೋಧನಾ ಸಂಸ್ಥೆ ಇದೆ. ಇಲ್ಲಿ ಎರೆಹುಳು ಗೊಬ್ಬರ ತಯಾರಿ, ಬೀಜಾಮೃತ, ಜೀವಾಮೃತ, ಪಂಚಗವ್ಯ ಇತ್ಯಾದಿ ಮಾಹಿತಿ ಪಡೆಯಬಹುದು. ಸಾವಯವ ಬೆಳಗಳನ್ನು ವೀಕ್ಷಿಸಬಹುದು. ರಸಗೊಬ್ಬರ, ಕೀಟ ನಾಶಕ ಬಳಸದೇ ಸಾವಯವ ಪದ್ಧತಿಯಲ್ಲಿ ಬೆಳೆಯುವ ವಿಧಾನ ಇಲ್ಲಿ ತಿಳಿದುಕೊಳ್ಳಬಹುದು.

ಧಾರವಾಡದ ಕೃಷಿ ವಿಶ್ವವಿದ್ಯಾಲಯ ಆವರಣದ  ಬೆಳೆ ಪ್ರಯೋಗ ತಾಕಿನಲ್ಲಿ ಮಿಶ್ರ ಬೆಳೆ ಪದ್ಧತಿಯಲ್ಲಿ ಶೇಂಗಾ ಮತ್ತು ಹತ್ತಿ ಬೆಳೆ ಬೆಳೆಯಲಾಗಿದೆ.
ಬೆಳೆ ಪ್ರಯೋಗ ತಾಕುಗಳಿಗೆ ಭೇಟಿ ನೀಡಲು ವಾಹನ ವ್ಯವಸ್ಥೆ ಇರುತ್ತದೆ. ಪ್ರಾತ್ಯಕ್ಷಿಕೆ ಮೂಲಕ ಬೆಳೆ ಮಾಹಿತಿ ತಿಳಿದುಕೊಳ್ಳಬಹುದು. ಜಮೀನು ಹವಾಗುಣಕ್ಕೆ (ಮಣ್ಣು ಮಳೆ) ಪೂರಕ ಬೆಳೆ ತಳಿ ಆಯ್ಕೆಗೆ ರೈತರಿಗೆ ಅನುಕೂಲವಾಗಲಿದೆ.
ಪ್ರೊ.ಬಿ.ಡಿ.ಬಿರಾದಾರ ನಿರ್ದೇಶಕ ಸಂಶೋಧನಾ ವಿಭಾಗ ಕೃಷಿ ವಿ.ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.