ADVERTISEMENT

ಕೃಷಿ ಭಾರತದ ಆರ್ಥಿಕತೆಯ ಮೂಲ

ಡಾ. ಪಾವಟೆ ಮೂಲತತ್ವ ಉಪನ್ಯಾಸದಲ್ಲಿ ಡಾ. ಆರ್.ಎಸ್.ದೇಶಪಾಂಡೆ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 30 ಜನವರಿ 2023, 4:29 IST
Last Updated 30 ಜನವರಿ 2023, 4:29 IST
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಡಿ.ಸಿ.ಪಾವಟೆ ಫೆಲೋಶಿಪ್‌ಗೆ ಆಯ್ಕೆಯಾದ ಶಿವಕುಮಾರ ಮಳಗಿಹಾಳ, ಪ್ರೊ. ಆಕಾಂಕ್ಷಾ ನಟಾನಿ, ಡಾ. ವಿನೋದ ಮಹದೇವನ್ ಅವನ್ನು ಗಣ್ಯರು ಅಭಿನಂದಿಸಿದರು
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಡಿ.ಸಿ.ಪಾವಟೆ ಫೆಲೋಶಿಪ್‌ಗೆ ಆಯ್ಕೆಯಾದ ಶಿವಕುಮಾರ ಮಳಗಿಹಾಳ, ಪ್ರೊ. ಆಕಾಂಕ್ಷಾ ನಟಾನಿ, ಡಾ. ವಿನೋದ ಮಹದೇವನ್ ಅವನ್ನು ಗಣ್ಯರು ಅಭಿನಂದಿಸಿದರು   

ಧಾರವಾಡ: ‘ಭಾರತದ ಆರ್ಥಿಕತೆಗೆ ಕೃಷಿ ಕ್ಷೇತ್ರ ಒಂದು ಪ್ರಮುಖ ಆರ್ಥಿಕ ಮೂಲವಾಗಿದೆ’ ಎಂದು ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಅಂಡ್ ಎಕನಾಮಿಕ್ ಚೇಂಜ್‌ನ ವಿಶ್ರಾಂತ ನಿರ್ದೇಶಕ ಆರ್.ಎಸ್.ದೇಶಪಾಂಡೆ ಅಭಿಪ್ರಾಯಪಟ್ಟರು.

ಕರ್ನಾಟಕ ವಿಶ್ವವಿದ್ಯಾಲಯದ ಡಾ. ಡಿ.ಸಿ.ಪಾವಟೆ ಸ್ಮಾರಕ ಪ್ರತಿಷ್ಠಾನದ ಮೂಲತತ್ವ ಉಪನ್ಯಾಸದ ಅಂಗವಾಗಿ ಆಯೋಜಿಸಲಾದ ಭಾರತದ ಭವಿಷತ್ತಿನ ಕೃಷಿ ಕ್ಷೇತ್ರ: ಮಸುಕಾದೆಯೇ? ಅಥವಾ ಉಜ್ವಲವಾಗಿದೆಯೇ? ಎಂಬ ವಿಷಯ ಕುರಿತು ಅವರು ಮಾತನಾಡಿದರು.

‘ಭಾರತದಲ್ಲಿ ಕೃಷಿಯು ಏರಿಳಿತಗಳನ್ನು ಕಂಡಿದೆ. ರೈತರು ಇಂದಿಗೂ ಕೃಷಿಯಿಂದ ಹೆಚ್ಚು ಲಾಭಾಂಶವನ್ನು ಪಡೆಯುತ್ತಿಲ್ಲ. ದಶಕಗಳಿಂದ ರೈತರಿಗೆ ಮಾರುಕಟ್ಟೆ ಬೇಂಬಲ ಬೆಲೆಯನ್ನು ನೀಡಲು ಆಗುತ್ತಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

ADVERTISEMENT

‘ಗ್ರಾಮೀಣ ವಲಯದಲ್ಲಿ ರೈತರು ಅನೇಕ ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಭಾರತದಲ್ಲಿ ದಶಕಗಳಿಂದ ಕೃಷಿಯ ಅಭಿವೃದ್ಧಿಗೆ ಅನೇಕ ಸಮಿತಿಗಳನ್ನು ರಚಿಸಿದರೂ ಕೃಷಿಯಲ್ಲಿ ಸ್ಥಿರತೆಯನ್ನು ತರಲು ಸಾಧ್ಯವಾಗಿಲ್ಲ. ಬೇಳೆ ವಿಮೆ ಇದ್ದರೂ ರೈತರಿಗೆ ಉಪಯೋಗವಾಗುತ್ತಿಲ್ಲ. ಹೀಗಾಗಿ ಭೂ-ಸುಧಾರಣೆಗಳನ್ನು ಪುನರ್ ಪರಿಶಿಲಬೇಕಾಗಿದೆ. ಜತೆಗೆ ಕೃಷಿ ಮಾರುಕಟ್ಟೆಯಲ್ಲಿ ಏಜೆಂಟರ ಹಾವಳಿಯಿಂದಾಗಿ ರೈತರಿಗೆ ನಿಜವಾದ ಬೆಲೆ ಸಿಗುತ್ತಿಲ್ಲ’ ಎಂದರು.

‘ಭೂ ಸುಧಾರಣೆ, ಮಧ್ಯಸ್ಥಕಾರರ ನಿಯಂತ್ರಣ, ಬೆಳೆ ವಿಮೆ ಹಾಗೂ ರೈತರಿಗೆ ಕೃಷಿಗೆ ಬೆಂಬಲ ಬೆಲೆಯನ್ನು ನೀಡುವಲ್ಲಿ ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳು ಇನ್ನಷ್ಟು ಆಗಬೇಕಿದೆ’ ಎಂದು ಆರ್.ಎಸ್.ದೇಶಪಾಂಡೆ ಹೇಳಿದರು.

ಮೂಲತತ್ವ ಉಪನ್ಯಾಸದ ಸಂಯೋಜಕ ಪ್ರೊ. ಬಿ.ಎಚ್.ನಾಗೂರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ‘ಡಾ. ಡಿ.ಸಿ.ಪಾವಟೆ ಫೌಂಡೇಶನ್ ಮತ್ತು ಕವಿವಿ ನಡುವಿನ ಒಪ್ಪಂದದ ಭಾಗವಾಗಿ ದೇಶದ ವಿವಿಧ ಶಿಕ್ಷಣ ಸಂಸ್ಥೆಗಳಿಂದ ಆಯ್ಕೆಯಾದ ಮೂರು ವಿದ್ಯಾರ್ಥಿಗಳು ನಾಲ್ಕು ತಿಂಗಳವರೆಗೆ ಹೆಚ್ಚಿನ ಅಧ್ಯಯನಕ್ಕೆ ಇಂಗ್ಲೆಂಡ್‌ನ ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯಕ್ಕೆ ಕಳುಹಿಸಲಾಗುತ್ತಿದೆ’ ಎಂದರು.

ಕೇಂಬ್ರಿಡ್ಜ್ ವಿವಿಯ ಪ್ರಾಧ್ಯಾಪಕ ಪ್ರೊ. ಜೇಮ್ಸ್ ಮಯಾಲ್ ಮಾತನಾಡಿದರು. ಕುಲಪತಿ ಪ್ರೊ. ಕೆ.ಬಿ.ಗುಡಸಿ ಅವರು ಅಧ್ಯಕ್ಷತೆ ವಹಿಸಿದ್ದರು. ಕೇಂಬ್ರಿಡ್ಜ್‌ ವಿವಿಯ ಎಡ್ವರ್ಡ್‌ ವಿಲ್ಸನ್, ಕವಿವಿ ಕುಲಸಚಿವ ಯಶಪಾಲ್ ಕ್ಷೀರಸಾಗರ, ಮೌಲ್ಯಮಾಪನ ಕುಲಸಚಿವ ಸಿ.ಕೃಷ್ಣಮೂರ್ತಿ, ಡಾ. ಆರ್.ಆರ್.ಬಿರಾದಾರ, ಡಾ. ಎಸ್.ಟಿ.ಬಾಗಲಕೋಟಿ. ಡಾ. ಬುರ್ಜಿಕಿ, ಡಾ. ಎಸ್.ಎಚ್.ವಿಶ್ವನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.