ADVERTISEMENT

ಆಲಮಟ್ಟಿಗೆ ಹರಿದ 14 ಟಿಎಂಸಿ ಅಡಿ ನೀರು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2023, 6:06 IST
Last Updated 10 ಅಕ್ಟೋಬರ್ 2023, 6:06 IST
   

ಆಲಮಟ್ಟಿ (ವಿಜಯಪುರ ಜಿಲ್ಲೆ): ಮಹಾರಾಷ್ಟ್ರದ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಕಳೆದ ವಾರ ಸುರಿದ ಮಳೆಯಿಂದ ಆಲಮಟ್ಟಿ ಜಲಾಶಯಕ್ಕೆ ನಿಧಾನವಾಗಿ ಮತ್ತೆ ನೀರು ಹರಿದು ಬರುತ್ತಿದೆ. ಕರ್ನಾಟಕದ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯಾಗದಿದ್ದರೂ ಸೆಪ್ಟೆಂಬರ್ 27ರಿಂದ ಜಲಾಶಯಕ್ಕೆ ಒಳಹರಿವು ಕ್ರಮೇಣ ಏರುತ್ತಿದೆ.

10 ದಿನದಲ್ಲಿ 14 ಟಿಎಂಸಿ ಅಡಿ ನೀರು:

ಅಕ್ಟೋಬರ್ 4ರಂದು ಜಲಾಶಯಕ್ಕೆ ಒಂದೇ ದಿನ 39,064 ಕ್ಯೂಸೆಕ್ (3.3 ಟಿಎಂಸಿ ಅಡಿ) ನೀರು ಹರಿದು ಬಂದಿತ್ತು. ಸೆಪ್ಟೆಂಬರ್ 29ರಿಂದ ಅಕ್ಟೋಬರ್ 9ರ ವರೆಗೆ 10 ದಿನ ಜಲಾಶಯಕ್ಕೆ 1,63,224 ಕ್ಯೂಸೆಕ್ ನೀರು (14.10 ಟಿಎಂಸಿ ಅಡಿ) ಹರಿದು ಬಂದಿದೆ. ಇದರಿಂದ ನೀರಿನ ಕೊರತೆ ಆತಂಕ ಕೊಂಚ ತಗ್ಗಿದೆ.

ADVERTISEMENT

519.60 ಮೀ ಗರಿಷ್ಠ ಎತ್ತರದ ಜಲಾಶಯದಲ್ಲಿ ಸದ್ಯ 519.16 ಮೀ ವರೆಗೆ ನೀರು ಸಂಗ್ರಹವಾಗಿದ್ದು, 123.081 ಟಿಎಂಸಿ ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 115.546 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಜಲಾಶಯ ಭರ್ತಿಗೆ ಇನ್ನೂ 8 ಟಿಎಂಸಿ ಅಡಿ ನೀರು ಬಾಕಿಯಿದೆ.

ಹಿಂಗಾರಿಗೆ ನೀರು?:

‘ಇದೇ ರೀತಿ ಜಲಾಶಯಕ್ಕೆ ನೀರು ಹರಿದು ಬರುತ್ತಾ ಸಾಗಿದರೇ ಹಿಂಗಾರು ಹಂಗಾಮಿಗೂ ನೀರು ಹರಿಸುವ ಸಾಧ್ಯತೆ ಇದೆ. ಈಗ ನವೆಂಬರ್ 23ರ ವರೆಗೆ ಮುಂಗಾರು ಹಂಗಾಮಿಗೆ ನೀರು ಹರಿಸಿದ ನಂತರ ಆಗಿನ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದ ನೀರಿನ ಸಂಗ್ರಹ ಮಟ್ಟ ನೋಡಿಕೊಂಡು, 2024 ಜುಲೈ ವರೆಗೂ ಕುಡಿಯುವ ನೀರು, ಭಾಷ್ಪೀಭವನ, ಕೈಗಾರಿಕೆ, ವಿದ್ಯುತ್ ಸ್ಥಾವರ ಸೇರಿ ನಾನಾ ಉಪಯೋಗಕ್ಕೆ 56 ಟಿಎಂಸಿ ಅಡಿಯಷ್ಟು ನೀರು ಸಂಗ್ರಹ ಇಟ್ಟುಕೊಂಡು ಹೆಚ್ಚುವರಿ ನೀರನ್ನು ಮಾತ್ರ ಕಾಲುವೆಗೆ ಹರಿಸುವ ಸಾಧ್ಯತೆಯಿದೆ. ಸದ್ಯಕ್ಕಂತೂ ಮುಂಗಾರು ಹಂಗಾಮಿಗೆ ನೀರು ಹರಿಸಲು ಯಾವುದೇ ನೀರಿನ ಕೊರತೆಯಿಲ್ಲ’ ಎಂದು ಅಧಿಕಾರಿಗಳು ತಿಳಿಸಿದರು.

ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನೀರು ಬಿಡುವ ಬಗ್ಗೆ ನಿರ್ಣಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.