ಅಳ್ನಾವರ: ‘ಶ್ರಮಿಕ ವರ್ಗದವರಿಗೆ ಎಲ್ಲ ಮೂಲಸೌಲಭ್ಯಗಳು ದೊರೆಯಬೇಕು ಎಂಬ ಅಂಬೇಡ್ಕರ್ ಅವರ ಕನಸು ನನಸಾಗಿಸಲು ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದ್ದು, ಹಲವು ಜನಪರ ಯೋಜನೆಗಳನ್ನು ರೂಪಿಸಲಾಗಿದೆ’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುವ ಕಾಯಂ ಪೌರಕಾರ್ಮಿಕರಿಗೆ ₹1 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ವಸತಿ ಸಂಕೀರ್ಣ ಉದ್ಘಾಟಿಸಿ, ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಸ್ವಚ್ಛತೆಗೆ ಪೌರಕಾರ್ಮಿಕರು ಹಗಲಿರುಳೆನ್ನದೆ ಶ್ರಮಿಸುತ್ತಿದ್ದಾರೆ. ಅವರನ್ನು ಗೌರವದಿಂದ
ಕಾಣಬೇಕು ಎಂದರು.
ರಾಜ್ಯ ಸರ್ಕಾರ ಬಡವರಿಗಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು ₹7 ಸಾವಿರದಿಂದ ₹8 ಸಾವಿರ ದೊರೆಯುತ್ತಿದೆ. ನೂತನ ಅಳ್ನಾವರ ತಾಲ್ಲೂಕು ಕೇಂದ್ರದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದು, ₹8.50 ಕೋಟಿ ವೆಚ್ಚದಲ್ಲಿ ತಾಲ್ಲೂಕು ಭವನ ಕಟ್ಟಡ ನಿರ್ಮಾಣ ಮಾಡಲು ನಿವೇಶನ ಗುರುತಿಸಲಾಗಿದೆ. ಶೀಘ್ರದಲ್ಲಿ ನ್ಯಾಯಾಲಯ ಕಟ್ಟಡ ಹಾಗೂ ತಾಲ್ಲೂಕು ಪಂಚಾಯಿತಿ ಕಚೇರಿ ಕಟ್ಟಡ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಇಲ್ಲಿನ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ 50 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯಾಗಿ ಮಾಡಲಾಗುವುದು. ಮುಂಬರುವ ದಿನಗಳಲ್ಲಿ ಇಲ್ಲಿ ವಲಯ ಅರಣ್ಯಾಧಿಕಾರಿ ಕಚೇರಿ ತೆರೆಯಲಾಗುವುದು ಎಂದರು.
ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ, ತಾಲ್ಲೂಕು ಪಂಚಾಯಿತಿ ಇಒ ಪ್ರಶಾಂತ ತುರ್ಕಾಣಿ, ಜಿಲ್ಲಾ ಯೋಜನಾ ನಿರ್ದೇಶಕ ಎ.ಆರ್. ದೇಸಾಯಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಮಧು ಬಡಸ್ಕರ್, ಉಪಾಧ್ಯಕ್ಷ ಅಮೋಲ ಗುಂಜೀಕರ, ಸ್ಥಾಯಿ ಸಮಿತಿ ಅಧ್ಯಕ್ಷ ಜೈಲಾನಿ ಸುದರ್ಜಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಕಾಶ ಮುಗದಮು ಇದ್ದರು.
ನಂತರ ಸಚಿವ ಸಂತೋಷ್ ಲಾಡ್ ಅವರು ಸಮೀಪದ ಅರವಟಗಿಯಲ್ಲಿ ₹49 ಲಕ್ಷ ವೆಚ್ಚದಲ್ಲಿ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೇರವೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.