ಹುಬ್ಬಳ್ಳಿ: ಕುಡಿಯಲು ನೀರಿಲ್ಲ, ಸರಿಯಾದ ಬೀದಿ ದೀಪಗಳ ವ್ಯವಸ್ಥೆಯಿಲ್ಲ. ನ್ಯಾಯಬೆಲೆ ಅಂಗಡಿಯಿಲ್ಲ, ಪ್ರಾಥಮಿಕ ಆರೋಗ್ಯ ಕೇಂದ್ರವೇ ಇಲ್ಲ...!
ಇದು ನಗರದ ಅಮರಗೋಳದ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ (ಎಪಿಎಂಸಿ) ಹಮಾಲರ ಬಡಾವಣೆಯ (ಬಸವ ಕಾಲೊನಿ) ಸ್ಥಿತಿ. ಸವಾಲು, ಸಂಕಷ್ಟಗಳ ಮಧ್ಯೆ ಅವರ ಬದುಕು ಸಾಗಿದೆ.
ಕಾಲೊನಿಯಲ್ಲಿ 132 ಹಮಾಲಿ ಕಾರ್ಮಿಕರ ಮನೆಗಳಿದ್ದು, ಜನಸಂಖ್ಯೆ 600ಕ್ಕೂ ಅಧಿಕವಿದೆ. ಬಹುತೇಕರಿಗೆ ಹಮಾಲಿಯೇ ಬದುಕಿಗೆ ಆಧಾರವಾಗಿದೆ. ಬಡಾವಣೆಯಲ್ಲಿ ಪ್ರಸ್ತುತ ಐದು ಓಣಿಗಳಿದ್ದು, ಇಲ್ಲಿನ ಮನೆಗಳಿಗೆ ಎಪಿಎಂಸಿ ವತಿಯಿಂದ ನೆಲದಡಿಯ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ಬೀದಿ ದೀಪಗಳ ವ್ಯವಸ್ಥೆಯಿಲ್ಲ.
ಹುಬ್ಬಳ್ಳಿಯ ಎಪಿಎಂಸಿಯಲ್ಲಿನ ಹಮಾಲರ ಬಡಾವಣೆಯಲ್ಲಿ ಕುಡಿಯುವ ನೀರು ತರಲು ಮಹಿಳೆಯರು ಹೊರಟಿರುವುದು
ನಿವಾಸಿಗಳಿಗೆ ಕುಡಿಯುವ ನೀರು ಪೂರೈಸಲು ನಿರ್ಮಿಸಿದ್ದ ಟ್ಯಾಂಕ್ ಹಾಳಾಗಿದೆ. ಇದಕ್ಕೆ ಹಲವು ವರ್ಷಗಳಿಂದ ನೀರು ಪೂರೈಸಿಲ್ಲ. ಜನರ ನಿತ್ಯ ಬಳಕೆಗಾಗಿ ಇಲ್ಲಿನ ಎರಡು ಕೊಳವೆಬಾವಿಗಳ ಮೂಲಕ ನೀರು ನೀಡಲಾಗುತ್ತಿದೆ. 600 ಜನಸಂಖ್ಯೆಗೆ ವಾರಕೊಮ್ಮೆ ಮಾತ್ರ ಒಂದು ಟ್ಯಾಂಕ್ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಇದು ನಮಗೆ ಸಾಲುವುದಿಲ್ಲ ಎಂಬುದು ಇಲ್ಲಿನ ಸ್ಥಳೀಯ ನಿವಾಸಿಗಳ ಅಳಲು.
‘ಎಪಿಎಂಸಿಯಲ್ಲಿ ಸಾವಿರಕ್ಕೂ ಅಧಿಕ ಹಮಾಲಿ ಕಾರ್ಮಿಕರಿದ್ದಾರೆ. 800 ಮಂದಿಗೆ ಪರವಾನಗಿ ಇದೆ. ಇವರಲ್ಲಿ 132 ಮಂದಿಗೆ ಮಾತ್ರ 1998ರಲ್ಲಿ ಮನೆಗಳನ್ನು ಎಪಿಎಂಸಿ ವತಿಯಿಂದ ವಸತಿ ಮತ್ತು ನಗರಾಭಿವೃದ್ಧಿ ಕಾರ್ಪೊರೇಷನ್ (ಹುಡ್ಕೊ) ಸಹಯೋಗದಲ್ಲಿ ಮನೆಗಳನ್ನು ನಿರ್ಮಿಸಿಕೊಡಲಾಯಿತು. ಉಳಿದವರಿಗೆ ಮನೆಗಳನ್ನು ನಿರ್ಮಿಸಿಕೊಟ್ಟಿಲ್ಲ’ ಎಂದು ಎಪಿಎಂಸಿ ಹಮಾಲಿ ಕಾರ್ಮಿಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗುರುಸಿದ್ದಪ್ಪ ಅಂಬಿಗೇರ ತಿಳಿಸಿದರು.
‘ಹಮಾಲರಿಗೆ ಮನೆ ನಿರ್ಮಿಸಿಕೊಡಲು ಈ ಹಿಂದೆ 6 ಎಕರೆ ಜಾಗ ಮಿಸಲಿಡಲಾಗಿತ್ತು. ಇದರಲ್ಲಿ ಅಂದಾಜು 2 ಎಕರೆಯಲ್ಲಿ ಚಿಕ್ಕ ಚಿಕ್ಕ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಇನ್ನೂ 4 ಎಕರೆ 3ಗುಂಟೆ ಜಾಗ ಖಾಲಿಯಿದ್ದು, ಅದರಲ್ಲಿ ನಮಗೆ ರಾಜೀವ್ ಗಾಂಧಿ ವಸತಿ ಯೋಜನೆ/ ಅಟಲ್ ಬಿಹಾರಿ ವಾಜಪೇಯಿ ವಸತಿ ಯೋಜನೆ ಅಥವಾ ಪರಿಶಿಷ್ಟರ ಸಮುದಾಯದ ಮೀಸಲು ಅನುದಾನದಲ್ಲಿಯಾದರೂ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹಾಗೂ ಜಿಲ್ಲಾಧಿಕಾರಿ ದಿವ್ಯಪ್ರಭು ಅವರಲ್ಲಿ ಮನವಿ ಮಾಡಲಾಗಿದೆ. ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದೂ ಅವರು ಭರವಸೆ ನೀಡಿದ್ದಾರೆ’ ಎಂದರು.
‘ಹೆಸ್ಕಾಂ ವತಿಯಿಂದ ಈಚೆಗೆ ಬಡಾವಣೆಯ ರಸ್ತೆಗಳಲ್ಲಿ ಹೊಸದಾಗಿ ವಿದ್ಯುತ್ ಕಂಬಗಳನ್ನು ಹಾಕಲಾಗಿದೆ. ಆದರೆ, ಅಧಿಕಾರಿಗಳು ತಾಂತ್ರಿಕ ಕಾರಣ ನೀಡಿ ವಿದ್ಯುತ್ ಪರಿವರ್ತಕ ಅಳವಡಿಸಿಲ್ಲ. ನಿತ್ಯ ರಾತ್ರಿ ಕತ್ತಲಲ್ಲೇ ಓಡಾಡುತ್ತೇವೆ. ಶೀಘ್ರದಲ್ಲಿಯೇ ಬೀದಿ ದೀಪಗಳನ್ನು ಹಾಕಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಆದಷ್ಟು ಬೇಗನೇ ವಿದ್ಯುತ್ ಪರಿವರ್ತಕ ಅಳವಡಿಸಿ, ವಿದ್ಯುತ್ ದೀಪಗಳ ಸಂಪರ್ಕ ಕಲ್ಪಿಸಿಕೊಟ್ಟರೆ ಅನುಕುಲವಾಗುತ್ತದೆ’ ಎಂದರು.
₹16 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಲಾಗುವುದು. ಮೀಸಲು 4 ಎಕರೆ ಜಾಗದಲ್ಲಿ ಕಾರ್ಮಿಕರಿಗೆ ಜಿ+3 ಗುಂಪು ಮನೆ ನಿರ್ಮಿಸಿಕೊಡಲಾಗುವುದು. ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು.ಮಹೇಶ ಟೆಂಗಿನಕಾಯಿ ಶಾಸಕ.
ವಾರಕ್ಕೊಮ್ಮೆ ಕುಡಿಯುವ ನೀರು ಪೂರೈಸುತ್ತಿದ್ದು ಇದು ಸಾಲುತ್ತಿಲ್ಲ. ನಮಗೆ ವಾರಕ್ಕೆ ಐದು ಬಾರಿಯಾದರೂ ನೀರು ಪೂರೈಸಿದರೆ ಅನುಕೂಲ. ಚರಂಡಿಯಲ್ಲಿ ತ್ಯಾಜ್ಯ ತುಂಬಿದ್ದು ವಿಲೇವಾರಿ ಮಾಡಬೇಕು. ಮಂಜುನಾಥ ಹುಜರಾತಿ ಸ್ಥಳೀಯ ನಿವಾಸಿ
‘ನಗರದ ಎಪಿಎಂಸಿಯ ಹಮಾಲಿ ಕಾರ್ಮಿಕರಿಗಾಗಿ ಬಡಾವಣೆಯಲ್ಲಿ ಮೀಸಲಿರುವ 4 ಎಕರೆ 3ಗುಂಟೆ ಜಾಗದಲ್ಲಿ ಜಿ+2 ಮಾದರಿಯಲ್ಲಿ ಗುಂಪು ಮನೆಗಳನ್ನು ನಿರ್ಮಿಸಿ ಉಳಿದ ಕಾರ್ಮಿಕರಿಗೆ ಹಂಚಿಕೆ ಮಾಡಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸಬೇಕು. ಇಲ್ಲಿ ಬಹುತೇಕರು ಬಿಪಿಎಲ್ ಕಾರ್ಡ್‌ದಾರರಿದ್ದು ಪಡಿತರಕ್ಕಾಗಿ ಬೈರದೇವರಕೊಪ್ಪಕ್ಕೆ ಹೋಗಬೇಕಿದೆ. ಇಲ್ಲಿಯೇ ನ್ಯಾಯಬೆಲೆ ಅಂಗಡಿ ತೆರೆದರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ ರಾಜ್ಯ ಪ್ರದಾನ ಕಾರ್ಯದರ್ಶಿ ಮಹೇಶ ಪತ್ತಾರ ಹಾಗೂ ಎಪಿಎಂಸಿ ಹಮಾಲಿ ಕಾರ್ಮಿಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗುರುಸಿದ್ದಪ್ಪ ಅಂಬಿಗೇರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.