ADVERTISEMENT

‘ಶೋಷಿತರ ವಿಮೋಚಕ ಅಂಬೇಡ್ಕರ್’

ಎನ್‌ಡಬ್ಲ್ಯೂ, ಕೆಎಸ್‌ಆರ್‌ಟಿಸಿ ಎಸ್ಸಿ, ಎಸ್ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಅಂಬೇಡ್ಕರ್ ಜಯಂತಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2018, 19:49 IST
Last Updated 23 ಡಿಸೆಂಬರ್ 2018, 19:49 IST
ಕಾರ್ಯಕ್ರಮದಲ್ಲಿ ರೇಣುಕಾ ಶಿ. ದುರಘಣ್ಣವರ, ಸಿದ್ದು ಕಮ್ಮಾರ ಹಾಗೂ ಬಸವರಾಜ ಗು. ಬಂಡಿವಡ್ಡರ ಅವರಿಗೆ ‘ಸಾರಿಗೆ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು
ಕಾರ್ಯಕ್ರಮದಲ್ಲಿ ರೇಣುಕಾ ಶಿ. ದುರಘಣ್ಣವರ, ಸಿದ್ದು ಕಮ್ಮಾರ ಹಾಗೂ ಬಸವರಾಜ ಗು. ಬಂಡಿವಡ್ಡರ ಅವರಿಗೆ ‘ಸಾರಿಗೆ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಹುಬ್ಬಳ್ಳಿ: ‘ವಿಶ್ವ ಮೆಚ್ಚಿದ ನಾಯಕ ಡಾ.ಬಿ.ಆರ್. ಅಂಬೇಡ್ಕರ್, ಈ ದೇಶದ ಶೋಷಿತರ ವಿಮೋಚಕರಾಗಿದ್ದಾರೆ’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ರಾಜೇಶ ಹುದ್ದಾರ ಹೇಳಿದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ವಲಯದ ಪರಿಶಿಷ್ಟ ಜಾತಿ ಮತ್ತು ಪಂಗಡ ನೌಕರರ ಕ್ಷೇಮಾಭಿವೃದ್ಧಿ ಸಂಘ ಹುಬ್ಬಳ್ಳಿಯಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ಬುದ್ಧ ಮತ್ತು ಬಸವಣ್ಣನ ಹಾದಿಯಲ್ಲಿ ಅಂಬೇಡ್ಕರ್ ಕೂಡ ಮನುಕುಲದ ಉದ್ಧಾರಕ್ಕೆ ಶ್ರಮಿಸಿದರು. ಬುದ್ಧ ಆಸೆಯೇ ದುಃಖಕ್ಕೆ ಮೂಲ ಎಂದು ಬೋಧಿಸಿದರೆ, ಬಸವಣ್ಣ ಕಾಯಕವೇ ಕೈಲಾಸ ಎಂದು ನುಡಿದರು. ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಎಂಬ ಮಂತ್ರವನ್ನು ಅಂಬೇಡ್ಕರ್ ಶೋಷಿತರಿಗೆ ನೀಡಿದರು’ ಎಂದರು.

ADVERTISEMENT

ಬಹುಜನ ಸಮಾಜ ಪಕ್ಷದ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಪ್ರೇಮನಾಥ ಚಿಕ್ಕತುಂಬಳ ಮಾತನಾಡಿ, ‘ಸ್ವತಂತ್ರ ಭಾರತದ ಮೊದಲ ಕಾರ್ಮಿಕ ಸಚಿವರಾಗಿದ್ದ ಅಂಬೇಡ್ಕರ್, ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ದುಡಿಮೆ ಅವಧಿಯನ್ನು ದಿನಕ್ಕೆ 8 ತಾಸಿಗೆ ನಿಗದಿಪಡಿಸಿದರು. ಅವಧಿ ಮೀರಿದ ದುಡಿಮೆಗೆ ಹೆಚ್ಚುವರಿ ವೇತನ, ಬೋನಸ್‌ನಂತಹ ಹಲವು ಕಾರ್ಮಿಕರ ಪರ ಕಾಯ್ದೆಗಳನ್ನು ಜಾರಿಗೆ ತಂದ ಶ್ರೇಯಸ್ಸು ಅಂಬೇಡ್ಕರ್‌ಗೆ ಸಲ್ಲುತ್ತದೆ’ ಎಂದು ಬಣ್ಣಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ವಾಯವ್ಯ ಕೇಂದ್ರ ಸಮಿತಿ ಅಧ್ಯಕ್ಷ ಡಿ. ಪ್ರಸಾದ, ‘ಸಾರಿಗೆ ಸಂಸ್ಥೆಯ ನೌಕರರಿಗೆ ನೀಡುವ ವಿಮೆ ಸೌಲಭ್ಯವನ್ನು ಮತ್ತೆ ಮುಂದುವರಿಸುವ ಜತೆಗೆ, ನೌಕರರ ಮಕ್ಕಳಿಗೆ ಕೌಶಲ್ಯಾಭಿವೃದ್ಧಿ ಯೋಜನೆಯಡಿ ವೃತ್ತಿಪರ ತರಬೇತಿ ನೀಡಲು ಸಂಸ್ಥೆ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

‘ಸಾರಿಗೆ ರತ್ನ’ ಪ್ರಶಸ್ತಿ:

ಹೆಸ್ಕಾಂ ಎಸ್‌ಸಿ ಮತ್ತು ಎಸ್‌ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಹ ಕಾರ್ಯದರ್ಶಿ ಸಿದ್ದು ಕಮ್ಮಾರ, ಸಾರಿಗೆ ಸಂಸ್ಥೆ ಮಹಾ ಮಂಡಳದ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ಕನಕದಾಸ ಕಮಿಟಿ ಅಧ್ಯಕ್ಷೆ ರೇಣುಕಾ ಶಿ. ದುರಘಣ್ಣವರ ಹಾಗೂ ಎನ್‌ಡಬ್ಲ್ಯೂಕೆಎಸ್‌ಆರ್‌ಟಿಸಿ ಎಸ್‌ಸಿ ಮತ್ತು ಎಸ್‌ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಬಸವರಾಜ ಗು. ಬಂಡಿವಡ್ಡರ ಅವರಿಗೆ ‘ಸಾರಿಗೆ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಎನ್‌ಡಬ್ಲ್ಯೂಕೆಎಸ್‌ಆರ್‌ಟಿಸಿ ಮುಖ್ಯ ಲೆಕ್ಕಾಧಿಕಾರಿ ಹಾಗೂ ಆರ್ಥಿಕ ಸಲಹೆಗಾರ ಶಾಂತಪ್ಪ ಗೋಡಖಂಡ್ಕಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಜಿ. ಪ್ರಕಾಶಮೂರ್ತಿ, ಕೆಎಸ್‌ಆರ್‌ಟಿಸಿ ಎಸ್‌ಸಿ, ಎಸ್‌ಟಿ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಪುಟ್ಟರಾಜ, ಬಿಎಂಟಿಸಿ ಎಸ್‌ಸಿ, ಎಸ್‌ಟಿ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್. ಮುನಿನಾರಾಯಣಸ್ವಾಮಿ, ಸಮತಾ ಸೈನಿಕ ದಳ ಉತ್ತರ ಕರ್ನಾಟಕ ವಿಭಾಗದ ಅಧ್ಯಕ್ಷ ಪೀತಾಂಬ್ರಪ್ಪ ಬಿಳಾರ, ಸಂಘದ ಧಾರವಾಡ ವಿಭಾಗದ ಪ್ರಧಾನ ಕಾರ್ಯದರ್ಶಿ ಬಸವರಾಜ ತೇರದಾಳ, ಹುಬ್ಬಳ್ಳಿ ವಿಭಾಗದ ಅಧ್ಯಕ್ಷ ಸಿ.ಡಿ. ಗೌಡರ, ಶಿರಸಿ ವಿಭಾಗದ ಅಧ್ಯಕ್ಷ ಅಶೋಕ ಬೆಣಗಿ, ಪ್ರಧಾನ ಕಾರ್ಯದರ್ಶಿ ಎಫ್‌.ಎಸ್. ಭಜಂತ್ರಿ, ಗದಗ ವಿಭಾಗದ ಅಧ್ಯಕ್ಷ ಪಿ.ಎಂ. ತೇರದಾಳ ಹಾಗೂ ಹಾವೇರಿ ವಿಭಾಗದ ಎಸ್‌.ಜಿ. ಹಾದಿಮನಿ ಇದ್ದರು. ಕಟ್ಟೀಮನಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.