ADVERTISEMENT

ಅಂಬಿಗರ ಶರಣ ಸಂಸ್ಕೃತಿ ಉತ್ಸವ ಜ.14ರಿಂದ–ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 3:00 IST
Last Updated 6 ಡಿಸೆಂಬರ್ 2025, 3:00 IST
ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ
ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ   

ಹುಬ್ಬಳ್ಳಿ: ‘ಹಾವೇರಿ ತಾಲ್ಲೂಕಿನ ಕಂಚಾರಗಟ್ಟಿಯ ನರಸೀಪುರದಲ್ಲಿನ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ 2026ರ ಜನವರಿ 14 ಮತ್ತು 15ರಂದು ಅಂಬಿಗರ 10ನೇ ಶರಣ ಸಂಸ್ಕೃತಿ ಉತ್ಸವ–2026 ಹಮ್ಮಿಕೊಳ್ಳಲಾಗಿದೆ’ ಎಂದು ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಹೇಳಿದರು. 

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘14ರಂದು ಬೆಳಿಗ್ಗೆ 6ಕ್ಕೆ ನಿಜಶರಣ ಅಂಬಿಗರ ಚೌಡಯ್ಯನವರ ತೊಟ್ಟಿಲೋತ್ಸವ, 8 ಗಂಟೆಗೆ ಚೌಡಯ್ಯನವರ ಐಕ್ಯಮಂಟಪದ ಪೂಜೆ, 10 ಗಂಟೆಗೆ ರಕ್ತದಾನ ಶಿಬಿರ, 11 ಗಂಟೆಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ’ ಎಂದರು.

‘ನಂತರ ಪ್ರತಿಭಾ ಪುರಸ್ಕಾರ, ವಚನ ಕಂಠಪಾಠ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಗುತ್ತದೆ. ಸಂಜೆ 7ಕ್ಕೆ ಗಂಗಾರತಿ, ರಾತ್ರಿ 8 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಅವರು
ಹೇಳಿದರು.

ADVERTISEMENT

‘15ರಂದು ಬೆಳಿಗ್ಗೆ 8ಕ್ಕೆ ಧರ್ಮ ಧ್ವಜಾರೋಹಣ, ನಂತರ ಧರ್ಮಸಭೆ ನಡೆಯಲಿದೆ. ಇದೇ ವೇಳೆ ಅಂಬಿಗರ ಚೌಡಯ್ಯನವರ ಶಿಲಾಮಂಟಪ, ಕಂಚಿನ ಪುತ್ಥಳಿ ಲೋಕಾರ್ಪಣೆ ಹಾಗೂ ಮಹರ್ಷಿ ವೇದವ್ಯಾಸ ಕಲ್ಯಾಣ ಮಂಟಪ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗಿದೆ’ ಎಂದರು. 

‘ಬೆಳಿಗ್ಗೆ 11 ಗಂಟೆಗೆ ಅಂಬಿಗರ ಚೌಡಯ್ಯನವರ 906ನೇ ಜಯಂತ್ಯುತ್ಸವ, ನಂತರ ನಮ್ಮ ಪೀಠಾರೋಹಣದ ದಶಮಾನೋತ್ಸವ ಕಾರ್ಯಕ್ರಮ, ಸಂಜೆ 5ಕ್ಕೆ ವಚನ ಗ್ರಂಥ ಮಹಾರಥೋತ್ಸವ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

ಶೇಖರಪ್ಪ ಪೂಜಾರಿ, ಗದ್ದಿಗೆಪ್ಪ ಅಮರಗೋಳ, ಮಂಜುನಾಥ, ಪಕ್ಕಿರಪ್ಪ ತಿಮ್ಮನಕಟ್ಟಿ, ಮಾರುತಿ, ಸಿದ್ದರಾಮ ಹಾಜರಿದ್ದರು. 

‘ಚೌಡಯ್ಯ ಹೆಸರಿನ ಪ್ರಾಧಿಕಾರ ರಚಿಸಿ’

‘ನಿಜಶರಣ ಅಂಬಿಗರ ಚೌಡಯ್ಯನವರ ಹೆಸರಿನಲ್ಲಿ ಪ್ರಾಧಿಕಾರ ರಚಿಸಬೇಕು. ಐಕ್ಯಮಂಟಪದ ಅಭಿವೃದ್ಧಿಗೆ ಕ್ರಮವಹಿಸಬೇಕು. ಅಂಬಿಗ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕ್ರಮವಹಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಲಾಗುತ್ತದೆ’ ಎಂದು ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಹೇಳಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.