ADVERTISEMENT

ಉಳ್ಳವರಿಗೂ ಅಂತ್ಯೋದಯ ಕಾರ್ಡ್‌: ಆಕ್ರೋಶ

ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆ: ಕ್ರಮಕ್ಕೆ ಅಧ್ಯಕ್ಷೆ ಚನ್ಮಮ್ಮ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2020, 12:48 IST
Last Updated 18 ನವೆಂಬರ್ 2020, 12:48 IST
ಹುಬ್ಬಳ್ಳಿಯಲ್ಲಿ ಬುಧವಾರ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಕಾರ್ಯನಿರ್ವಾಹಕಾಧಿಕಾರಿ ಗಂಗಾಧರ ಕಂದಕೂರ ಮಾತನಾಡಿದರು. ಉಪಾಧ್ಯಕ್ಷ ಗುರುಪಾದಪ್ಪ ಕಮಡೊಳ್ಳಿ, ಅಧ್ಯಕ್ಷೆ ಚನ್ನಮ್ಮ ಗೋರ್ಲ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಬೀರಣ್ಣವರ ಇದ್ದಾರೆ
ಹುಬ್ಬಳ್ಳಿಯಲ್ಲಿ ಬುಧವಾರ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಕಾರ್ಯನಿರ್ವಾಹಕಾಧಿಕಾರಿ ಗಂಗಾಧರ ಕಂದಕೂರ ಮಾತನಾಡಿದರು. ಉಪಾಧ್ಯಕ್ಷ ಗುರುಪಾದಪ್ಪ ಕಮಡೊಳ್ಳಿ, ಅಧ್ಯಕ್ಷೆ ಚನ್ನಮ್ಮ ಗೋರ್ಲ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಬೀರಣ್ಣವರ ಇದ್ದಾರೆ   

ಹುಬ್ಬಳ್ಳಿ: ಕಡು ಬಡವರಿಗೆ ನೀಡುವ ಅಂತ್ಯೋದಯ ಕಾರ್ಡ್ ಅನ್ನು ಉಳ್ಳವರಿಗೆ ನೀಡಿರುವ ಬಗ್ಗೆ, ನಗರದ ಮಿನಿ ವಿಧಾನಸೌಧದಲ್ಲಿ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಆಹಾರ ಇಲಾಖೆಯ ಅಧಿಕಾರಿ ಎ.ಎ. ಕತ್ತಿ ಇಲಾಖೆ ವತಿಯಿಂದ ವಿತರಿಸಿರುವ ಕಾರ್ಡ್‌ಗಳ ಬಗ್ಗೆ ಸಭೆಗೆ ತಿಳಿಸಿದರು. ಆಗ ಅಧ್ಯಕ್ಷೆ ಚನ್ನಮ್ಮ ಗೋರ್ಲ ಅವರು, ‘ನಮ್ಮ ಊರಿನಲ್ಲಿರುವ ಆಸ್ತಿವಂತರ ಬಳಿಯೂ ಅಂತ್ಯೋದಯ ಕಾರ್ಡ್‌ಗಳಿವೆ. ಬಡವರ ಬದಲು ಸಿರಿವಂತರಿಗೂ ಕಾರ್ಡ್ ಕೊಟ್ಟರೆ, ಸರ್ಕಾರದ ಸೌಲಭ್ಯ ನಿಜವಾದ ಫಲಾನುಭವಿಗಳನ್ನು ತಲುಪುವುದು ಹೇಗೆ?’ ಎಂದು ಪ್ರಶ್ನಿಸಿದರು.

ಅವರ ಮಾತಿಗೆ ಉಪಾಧ್ಯಕ್ಷ ಗುರುಪಾದಪ್ಪ ಕಮಡೊಳ್ಳಿ ಸೇರಿದಂತೆ, ಇತರ ಸದಸ್ಯರು ದನಿಗೂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ‘ಕಾರ್ಡ್‌ ವಿತರಣೆಯಲ್ಲಿ ಲೋಪವಾಗಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಸದ್ಯ ತಾಲ್ಲೂಕಿನಲ್ಲಿ ಒಟ್ಟು 3,890 ಅಂತ್ಯೋದಯ ಕಾರ್ಡ್, 31,550 ಬಿಪಿಎಲ್, 3,277 ಎಪಿಎಲ್ ಕಾರ್ಡ್‌ಗಳನ್ನು ವಿತರಿಸಲಾಗಿದೆ’ ಎಂದರು.

ADVERTISEMENT

ಪರಿಹಾರ ವಿಳಂಬಕ್ಕೆ ಬೇಸರ

ಬೆಳೆ ಹಾನಿ ಸಮೀಕ್ಷೆ ನಡೆದು ಎರಡು ತಿಂಗಳುಗಳಾದರೂ ರೈತರಿಗೆ ಪರಿಹಾರ ಸಿಗದ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಆಗ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ ಎ., ‘ಸಮೀಕ್ಷೆಯ ವಿವರಗಳು ಕೇಂದ್ರಿಕೃತ ವ್ಯವಸ್ಥೆಯಲ್ಲಿ ದಾಖಲಾಗಿದೆ. ಪರಿಹಾರ ಬೆಂಗಳೂರಿನಿಂದಲೇ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪಾವತಿಯಾಗಲಿದೆ’ ಎಂದರು.

‘ಹನಿ ನೀರಾವರಿ ಯೋಜನೆಗೆ ಅರ್ಜಿ ಸಲ್ಲಿಸುವ ಎಸ್‌ಸಿ ಮತ್ತು ಎಸ್‌ಟಿ ಸಮುದಾಯವರಿಗೆ ಶೇ 90 ಹಾಗೂ ಸಾಮಾನ್ಯ ವರ್ಗದವರಿಗೆ ಶೇ 50 ಸಬ್ಸಿಡಿ ಸಿಗಲಿದ್ದು, ಅರ್ಹರು ಅರ್ಜಿ ಸಲ್ಲಿಸಬಹುದು. ತಾಡಪತ್ರಿಗೆ ಹೆಚ್ಚಿನ ಬೇಡಿಕೆ ಇದ್ದು, ಮತ್ತಷ್ಟು ತರಿಸಿ ವಿತರಿಸಲಾಗುವುದು’ ಎಂದು ಹೇಳಿದರು.

ನಡಾವಳಿ ತೋರಿಸಲು ಸೂಚನೆ

ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿ ದೀಪಾ ಜಾವೂರ, ‘2020–21ನೇ ಸಾಲಿನ ಅಕ್ಟೋಬರ್ ಅಂತ್ಯಕ್ಕೆ ಭಾಗ್ಯಲಕ್ಷ್ಮಿ ಯೋಜನೆಯಡಿ 290 ಅರ್ಜಿಗಳಿಗೆ ಆನ್‌ಲೈನ್ ಮೂಲಕ, ಮಂಜೂರಾತಿ ನೀಡಿ ಎಲ್‌ಐಸಿಗೆ ಕಳಿಸಲಾಗಿದೆ. ಮಾತೃ ವಂದನಾ ಯೋಜನೆಯಡಿ 1,187 ಅರ್ಜಿಗಳನ್ನು ಸ್ವೀಕರಿಸಿ ಮಂಜೂರಾತಿಗಾಗಿ ಸಲ್ಲಿಸಲಾಗಿದೆ’ ಎಂದು ಸಭೆಗೆ ತಿಳಿಸಿದರು.

ಆಗ ನೂಲ್ವಿ ಸದಸ್ಯ ಪರ್ವೇಜ್ ಬ್ಯಾಹಟ್ಟಿ, ‘ನೂಲ್ವಿಯಲ್ಲಿ ಖಾಸಗಿ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿದೆ.ಯಾವಾಗ ಹೊಸ ಕಟ್ಟಡ ನಿರ್ಮಿಸುತ್ತೀರಿ?’ ಎಂದು ಕೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ದೀಪಾ, ‘ಕಟ್ಟಡ ನಿರ್ಮಾಣಕ್ಕೆ ₹16 ಲಕ್ಷ ಅಗತ್ಯವಿದ್ದು, ಅನುದಾನ ಬಂದಾಗ ಪ್ರಕ್ರಿಯೆ ಆರಂಭಿಸಲಾಗುವುದು’ ಎಂದರು.

ಒಪ್ಪಿಗೆ ಪಡೆಯದೆ ₹9 ಲಕ್ಷ ಬಿಲ್ ಪಾಸ್

ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಒಪ್ಪಿಗೆ ಇಲ್ಲದೆ, ಹಾಸ್ಟೆಲ್ ನಿರ್ವಹಣೆಗಾಗಿ ₹9 ಲಕ್ಷಕ್ಕೂ ಅಧಿಕ ಮೊತ್ತದ ಬಿಲ್ ಪಾಸ್ ಆಗಿದೆ. ಹಿಂದಿನ ತಾ.ಪಂ. ಕಾರ್ಯನಿರ್ವಾಹಕಾಧಿಕಾರಿ ಅವಧಿಯಲ್ಲಿ ಒಳಗೊಳಗೆ ನಡೆದಿರುವ ಬಿಲ್ ಪಾಸ್‌ ಕುರಿತು ಲೆಕ್ಕಪತ್ರಗಳನ್ನು ನೀಡಬೇಕು ಎಂದು ಇಲಾಖೆಯ ಸಹಾಯಕ ನಿರ್ದೇಶಕ ನಂದಾ ಹಣಬರಟ್ಟಿ ಅವರಿಗೆ ಸದಸ್ಯರು ಆಗ್ರಹಿಸಿದರು.

‘ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಲೆಕ್ಕಪತ್ರ ತೋರಿಸಿ. ಅಲ್ಲದೆ, ಮುಂದೆ ಯಾವುದೇ ಬಿಲ್ ಪಾಸ್ ಮಾಡುವುದಕ್ಕೆ ಮುಂಚೆ ಸಮಿತಿ ಗಮನಕ್ಕೆ ತರಬೇಕು’ ಎಂದು ಇಒ ಗಂಗಾಧರ ಕಂದಕೂರ ನಂದಾ ಅವರಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.