ಹುಬ್ಬಳ್ಳಿ: ‘ನಗರದ ಬೈರಿದೇವರಕೊಪ್ಪದ ಬಳಿಯ ಶ್ರೀ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಯ (ಎಪಿಎಂಸಿ) ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಭಾನುವಾರ ಎಪಿಎಂಸಿಗೆ ಭೇಟಿ ನೀಡಿ ವರ್ತಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
‘ಇಲ್ಲಿನ ಮಳಿಗೆ ಮತ್ತು ನಿವೇಶನ ಹಂಚಿಕೆ ಮಾಡುವ ಕುರಿತು ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ. ಈ ಹಿಂದೆ ಹಂಚಿಕೆ ಮಾಡಿದ ನಿವೇಶನ, ಮಳಿಗೆಗಳಲ್ಲಿ ವರ್ತಕರು ವ್ಯಾಪಾರ ನಡೆಸುತ್ತಿಲ್ಲ ಎನ್ನುವ ದೂರುಗಳು ಕೇಳಿಬಂದಿವೆ. ಹಂಚಿಕೆಯಾದ ಸ್ಥಳಗಳಲ್ಲಿ ವ್ಯಾಪಾರ ಚಟುವಟಿಕೆಗಳು ನಡೆಸದಿದ್ದರೆ ನೋಟಿಸ್ ನೀಡಿ, ಮಳಿಗೆಯನ್ನು ಮರಳಿ ಪಡೆಯಲಾಗುವುದು’ ಎಂದು ಎಚ್ಚರಿಕೆ ನೀಡಿದರು.
‘ತರಕಾರಿ–ಹಣ್ಣು ಮಾರುಕಟ್ಟೆ ಮಳಿಗೆ ಹಿಂಭಾಗದಲ್ಲಿರುವ ಖಾಲಿ ನಿವೇಶನದಲ್ಲಿ ಮತ್ತಷ್ಟು ಮಳಿಗೆ ನಿರ್ಮಾಣ ಮಾಡುವ ಬಗ್ಗೆ ಪರಿಶೀಲಿಸಿ ನಿರ್ಣಯ ತೆಗೆದುಕೊಳ್ಳಲಾಗುವುದು. ವರ್ತಕರು ಗಾಳಿ ಸುದ್ದಿಗೆ ಕಿವಿಕೊಡಬಾರದು. ಮಳಿಗೆ ಹಂಚಿಕೆ ಮಾಡುವ ಕುರಿತು ಯಾರಾದರೂ ಹಣದ ಬೇಡಿಕೆ ಇಟ್ಟಿರೆ, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.