ಧಾರವಾಡ: ಸೈನಿಕ ಮೆಸ್ ಮಾಲೀಕ ಮಾಜಿ ಸೈನಿಕ ರಾಮಪ್ಪ ನಿಪ್ಪಾಣಿ ಅವರ ಮೇಲೆ ಉಪನಗರ ಠಾಣೆ ಇನ್‌ಸ್ಪೆಕ್ಟರ್ ಹಲ್ಲೆ ನಡೆಸಿದ್ದು, ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಮಾಜಿ ಸೈನಿಕರ ಸಂಘ, ಕರ್ನಾಟಕ ಕಾನೂನು ವಿದ್ಯಾರ್ಥಿಗಳ ಸಂಘದವರು ಸೋಮವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ‘ಅನ್ಯಾಯ ಅನ್ಯಾಯ ಮಾಜಿ ಸೈನಿಕರಿಗೆ ಅನ್ಯಾಯ’, ‘ಏಳಿ ಎದ್ದೇಳಿ ಸೈನಿಕರೆ ಗುರಿ ಮುಟ್ಟುವ ತನಕ ನಿಲ್ಲದಿರಿ’ ಎಂಬ ಭಿತ್ತಿಫಲಕಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಇನ್‌ಸ್ಪೆಕ್ಟರ್ ವಿರುದ್ಧ ಶಿಸ್ತುಕ್ರಮ ಜರುಗಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸಪ್ತಾಪೂರದ ಸೈನಿಕ ಮೆಸ್‌ನಲ್ಲಿ ಸೆ.29ರಂದು ರಾತ್ರಿ 11 ಗಂಟೆ ಹೊತ್ತಿನಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಮತ್ತು ಸಿಬ್ಬಂದಿ ರಾಮಪ್ಪ ನಿಪ್ಪಾಣಿ ಅವರನ್ನು ನಿಂದಿಸಿ, ಹಲ್ಲೆ ಮಾಡಿದ್ದಾರೆ. ಮೆಸ್‌ನಲ್ಲಿನ ಪೀಠೋಪಕರಣಗಳನ್ನು ನಾಶ ಮಾಡಲಾಗಿದೆ. ಸಿಸಿಟಿವಿ ಕ್ಯಾಮೆರಾ, ನಾಲ್ಕು ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದಿದ್ಧಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಗಾಯಾಳು ರಾಮಪ್ಪ ಅವರನ್ನು ಆಸ್ಪತ್ರೆಗೆ ಕರದೊಯ್ಯುವಂತೆ ಅವರ ಪತ್ನಿ ಕೇಳಿದರೂ ಸ್ಪಂದಿಸಿಲ್ಲ. ಮೆಸ್ ಬಾಗಿಲು ಮುಚ್ಚಿ ಹಿಂಸೆ ನೀಡಿದ್ದಾರೆ ಎಂದು ದೂರಿದರು.
ಮಾಜಿ ಸೈನಿಕರ ಸಂಘದವರು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ.ಅವರಿಗೆ ಮನವಿ ಸಲ್ಲಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ವಹಿಸಲಾಗುವುದು ಎಂದು ಡಿಸಿಪಿ ಸಿ.ಆರ್.ರವೀಶ್ ಭರವಸೆ ನೀಡಿದರು.
ಬೆಳಗಾವಿ ಜಿಲ್ಲೆ ಮಾಜಿ ಸೈನಿಕ ಸಂಘಟನೆಗಳ ಮಹಾಸಂಘದ ಅಧ್ಯಕ್ಷ ಜಗದಯ್ಯ ಪೂಜೇರಿ, ಪ್ರಧಾನ ಕಾರ್ಯದರ್ಶಿ ಶಿವಬಸಪ್ಪ ಕಾಡನ್ನವರ, ಖಜಾಂಚಿ ಸಂತೋಷ ಹಿರೇಮಠ, ಗೌರವಾಧ್ಯಕ್ಷ ರಮೇಶ ಚೌ್ಗಲಾ, ಸಿಖಂಧರ್ ನವಲೂರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.