ಹುಬ್ಬಳ್ಳಿ: ಸಾಹಿತ್ಯ, ಸಂಗೀತದಂತೆ ಚಿತ್ರಕಲೆಯಲ್ಲೂ ಧಾರವಾಡ ಜಿಲ್ಲೆಗೆ ಶ್ರೀಮಂತ ಪರಂಪರೆ ಇದೆ. ಮಿಣಜಗಿ, ಹಾಲಬಾವಿ ಅವರಂಥ ಶ್ರೇಷ್ಠ ಕಲಾವಿದರನ್ನು ಕಂಡ ನೆಲ ಇದು. ಆದರೂ ಸುಸಜ್ಜಿತ ಕಲಾ ಗ್ಯಾಲರಿಗಾಗಿ ಹುಬ್ಬಳ್ಳಿ– ಧಾರವಾಡ ಕಲಾವಿದರ ಹೋರಾಟ ಇಂದಿಗೂ ತೀರಿಲ್ಲ.
ಹುಬ್ಬಳ್ಳಿಯಲ್ಲಿ ಕುಂಚಬ್ರಹ್ಮ ಎಂ.ವಿ. ಮಿಣಜಗಿ ಆರ್ಟ್ ಗ್ಯಾಲರಿ, ವಿಜಯಮಹಾಂತೇಶ ಲಲಿತಕಲಾ ಮಹಾವಿದ್ಯಾಲಯ, ಧಾರವಾಡದಲ್ಲಿ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ಗ್ಯಾಲರಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಗ್ಯಾಲರಿ, ಜೆಎಸ್ಎಸ್ ಹಾಲಭಾವಿ ಕಲಾ ಶಾಲೆ ಹೀಗೆ ಕೆಲವೇ ಕೆಲವು ಗ್ಯಾಲರಿಗಳಿವೆ.
ದಶಕಗಳ ಹಿಂದೆ ಗ್ಯಾಲರಿ ಕೊರತೆ ಕಾರಣಕ್ಕೆ ಬೆರಳೆಣಿಕೆಯಷ್ಟು ಕಲಾವಿದರು ಮನೆಗಳಲ್ಲೇ ಚಿಕ್ಕದಾಗಿ ಪ್ರದರ್ಶನ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದು ಎಲ್ಲರಿಗೂ ಸಾಧ್ಯವಿಲ್ಲ. ಪರಿಣಾಮವಾಗಿ ಕಲಾವಿದರು ಜನರಿಂದ ದೂರವೇ ಉಳಿಯುತ್ತಾರೆ. ಆದ್ದರಿಂದ ಸುಸಜ್ಜಿತ ಸರ್ಕಾರಿ ಗ್ಯಾಲರಿಯ ನಿರೀಕ್ಷೆ ಕಲಾವಿದರದ್ದು.
ಬೇಕಿದೆ ಸೌಕರ್ಯ: ಮಿಣಜಗಿ ಗ್ಯಾಲರಿಗೆ ವಿದ್ಯಾನಗರದ ಚಿಕ್ಕವೀರಯ್ಯ ಆರ್ಟ್ ಗ್ಯಾಲರಿಯ ಒಂದು ಮಹಡಿ ನೀಡಲಾಗಿದ್ದರೂ ಮೂಲಸೌಕರ್ಯ ಕೊರತೆ ಕಾಡುತ್ತಿದೆ. ಮಳೆ ನೀರು ಸೋರುವುದರಿಂದ ಕಲಾಕೃತಿಗಳು ಕೆಡುವ ಆತಂಕ ಇದೆ. ಗೋಡೆಗಳು ಬಣ್ಣ ಕಾಣಬೇಕಿವೆ. ಸರಿಯಾದ ಬೆಳಕು, ಧ್ವನಿ ವ್ಯವಸ್ಥೆ, ಆಸನಗಳು, ಪರಿಕರಗಳನ್ನು ಸಂಗ್ರಹಿಸಲು ಕಪಾಟು, ಭದ್ರತೆಗಾಗಿ ಸಿಸಿಟಿವಿ ಕ್ಯಾಮೆರಾ ಬೇಕಿವೆ. ಕಲಾ ಗ್ಯಾಲರಿಗೆಂದೇ ನಿರ್ಮಾಣವಾದ ಈ ಕಟ್ಟಡದ ತಳಮಹಡಿಯಲ್ಲಿ ಪಾಲಿಕೆಯ ವಲಯ ಕಚೇರಿ ಕಾರ್ಯನಿರ್ವಹಿಸುತ್ತದೆ.
ಇಲ್ಲಿ ಕಲಾಕೃತಿ ಪ್ರದರ್ಶಿಸಲು ಎಲ್ಲರಿಗೂ ಮುಕ್ತ ಅವಕಾಶವಿದ್ದು, ಅಳತೆಗೆ ಅನುಗುಣವಾಗಿ 200–500ರ ವರೆಗೂ ಕಲಾಕೃತಿಗಳ ಪ್ರದರ್ಶನಕ್ಕೆ ಅವಕಾಶವಿದೆ. ವಿದ್ಯಾರ್ಥಿಗಳನ್ನೂ ಒಳಗೊಂಡಂತೆ ಅಂದಾಜು 170 ಕಲಾವಿದರು ಕುಂಚಬ್ರಹ್ಮ ಎಂ.ವಿ. ಮಿಣಜಗಿ ಕಲಾಮಂದಿರ ಸಮಿತಿಯ ಸಂಪರ್ಕದಲ್ಲಿದ್ದಾರೆ.
‘ಗ್ಯಾಲರಿ ಬಗ್ಗೆ ಸಾರ್ವಜನಿಕರಿಗೆ ಅಷ್ಟಾಗಿ ಮಾಹಿತಿ ಇಲ್ಲ. ಹೆಚ್ಚಿನ ಪ್ರಚಾರ ಸಿಕ್ಕರೆ ಇನ್ನಷ್ಟು ಜನರನ್ನು ಸೆಳೆಯಬಹುದು. ಈ ನಿಟ್ಟಿನಲ್ಲಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಚಿತ್ರಸಂತೆ ಮತ್ತಿತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಆಲೋಚನೆ ಇದೆ’ ಎಂದು ಸಮಿತಿ ಅಧ್ಯಕ್ಷ ರಾಮಚಂದ್ರ ಬಿ. ಗರಗ ತಿಳಿಸಿದರು.
‘ವಿಜಯಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದಲ್ಲಿ 60 ಕಲಾಕೃತಿ ಪ್ರದರ್ಶಿಸುವಷ್ಟು ಸ್ಥಳಾವಕಾಶವಿದ್ದು, ಒಳ್ಳೆಯ ಬೆಳಕಿನ ವ್ಯವಸ್ಥೆಯೂ ಇದೆ. ಇಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರವೇ ಅಲ್ಲದೆ, ಬೇರೆ ಕಲಾವಿದರಿಗೂ ಅವಕಾಶವಿದೆ. ಸದ್ಯ ಪರೀಕ್ಷೆ ಇರುವ ಕಾರಣ ತಾತ್ಕಾಲಿಕವಾಗಿ ಪ್ರದರ್ಶನ ನಡೆಯುತ್ತಿಲ್ಲ’ ಎಂದು ಕಾಲೇಜಿನ ಶಿಕ್ಷಕ ಚಂದ್ರಕಾಂತ ಜಟ್ಟೆಣ್ಣವರ ತಿಳಿಸಿದರು.
‘ಧಾರವಾಡದ ಸರ್ಕಾರಿ ಚಿತ್ರಕಲಾ ಗ್ಯಾಲರಿಯ ಎರಡು ಕೊಠಡಿಗಳು ಸುಸಜ್ಜಿತವಾಗಿದ್ದು, ಇನ್ನೊಂದಕ್ಕೆ ಬೆಳಕಿನ ವ್ಯವಸ್ಥೆ ಸರಿಯಾಗಿಲ್ಲ. ನೀರು ಸೋರುವ ಸಮಸ್ಯೆಯೂ ಇದೆ. ಇಲ್ಲಿಯೂ ನಿಯಮಿತವಾಗಿ ಪ್ರದರ್ಶನಗಳು ನಡೆಯುತ್ತಿವೆ. ಕಾಲೇಜು ವಿದ್ಯಾರ್ಥಿಗಳೂ ಸಾರ್ವಜನಿಕರೊಂದಿಗೆ ಮುಖಾಮುಖಿ ಆಗಲಿ ಎಂಬ ಉದ್ದೇಶದಿಂದ ಅವರ ಕಲಾಕೃತಿ ಪ್ರದರ್ಶನವೂ ನಡೆಯುತ್ತದೆ’ ಎಂದು ಗ್ಯಾಲರಿಯ ಮುಖ್ಯಸ್ಥ ಬಸವರಾಜ ಕುರಿಯವರ ಮಾಹಿತಿ ನೀಡಿದರು.
ಕಲಾ ವಾತಾವರಣ ಸೃಷ್ಟಿ ಅಗತ್ಯ: ‘ಒಳ್ಳೆಯ ಗ್ಯಾಲರಿ ಇದ್ದರೆ ಸ್ಥಳೀಯ ಕಲಾವಿದರಷ್ಟೇ ಅಲ್ಲ, ಹೊರಗಿನಿಂದ ಹೆಸರಾಂತ ಕಲಾವಿದರನ್ನು ಕರೆಯಿಸಿ ಪ್ರದರ್ಶನ ಏರ್ಪಡಿಸಬಹುದು. ಅದರಿಂದ ಕಲಾ ವಿದ್ಯಾರ್ಥಿಗಳಿಗೂ ಅನುಕೂಲ. ಕಲೆಗೆ ಪೂರಕವಾದ ವಾತಾವರಣ ಸೃಷ್ಟಿಯಾದರೆ ಜನರು ಹೆಚ್ಚು ಹೆಚ್ಚು ಆಕರ್ಷಿತರಾಗುತ್ತಾರೆ. ಅವರಿಗೂ ತಮ್ಮಲ್ಲಿನ ಪ್ರತಿಭೆಯನ್ನು ಒರೆಗೆ ಹಚ್ಚುವ ಹುಮ್ಮಸ್ಸು ಬರುತ್ತದೆ. ಎಷ್ಟೋ ಸಮಯದಿಂದ ಕುಂಚ ಹಿಡಿಯದವರೂ ಮತ್ತೆ ಬಣ್ಣದ ತಟ್ಟೆ ಕೈಗೆತ್ತಿಕೊಳ್ಳಬಹುದು. ಇದೆಲ್ಲ ಸಾಧ್ಯವಾಗಬೇಕಾದರೆ ನಗರದ ನಾಲ್ಕು ಮೂಲೆಗೂ ಒಂದೊಂದು ಗ್ಯಾಲರಿ ಇರಬೇಕು’ ಎಂಬುದು ಕಲಾವಿದ ಕೆ.ವಿ. ಶಂಕರ ಅವರ ಅಭಿಪ್ರಾಯ.
‘ಪ‍್ರೋತ್ಸಾಹ ಸಿಕ್ಕಿದ್ದರಿಂದ ಸಂಗೀತ ಉಳಿದುಕೊಂಡಿತು. ನಿರ್ಲಕ್ಷ್ಯಕ್ಕೆ ಒಳಗಾಗಿದ್ದರಿಂದ 40 ವರ್ಷ ಚಿತ್ರಕಲೆಗೆ ನಿರ್ವಾತ ಉಂಟಾಗಿತ್ತು. ಈಗ 20 ವರ್ಷಗಳಿಂದ ಅದನ್ನು ನೀಗಿಸುವ ಪ್ರಯತ್ನ ನಡೆಯುತ್ತಿದೆ. ನಿರಂತರವಾಗಿ ಚಟುವಟಿಕೆ ನಡೆಯುತ್ತಿದ್ದರೆ, ಸಾರ್ವಜನಿಕರೊಂದಿಗೆ ಸಂಪರ್ಕದಲ್ಲಿದ್ದರೆ ಕಲಾ ಪರಂಪರೆ ಮುಂದುವರಿಯುತ್ತದೆ’ ಎನ್ನುತ್ತಾರೆ ಅವರು.
ಗ್ಯಾಲರಿಗಳಲ್ಲಿ ಪ್ರದರ್ಶನವಾದರೆ ಕಲಾಕೃತಿಗಳ ಮೌಲ್ಯ ಹೆಚ್ಚು ಬೌದ್ಧಿಕ ಬೆಳವಣಿಗೆ, ವ್ಯಕ್ತಿತ್ವ ವಿಕಸನಕ್ಕೆ ಕಲೆ ಪೂರಕ ಜನರ ತಲುಪಲು ಆನ್‌ಲೈನ್ ವೇದಿಕೆಗೆ ಕಾಲಿಟ್ಟ ಕಲಾವಿದರು ಸಕ್ರಿಯ ಗ್ಯಾಲರಿಯಿದ್ದರೆ ಚಿತ್ರಕಲೆಗೆ ಬ್ರ್ಯಾಂಡ್ ಆಗಲಿದೆ ಹುಬ್ಬಳ್ಳಿ– ಧಾರವಾಡ
ಸರ್ಕಾರದಿಂದ ಶಾಸಕರ ನಿಧಿ ಬಿಡುಗಡೆ ಆಗುವುದು ತಡವಾಗಿದೆ. ಅದು ಬಂದ ತಕ್ಷಣ ಮಿಣಜಗಿ ಗ್ಯಾಲರಿಗೆ ಆದ್ಯತೆ ಮೇಲೆ ನೆರವು ನೀಡಲಾಗುವುದುಮಹೇಶ ಟೆಂಗಿನಕಾಯಿ ಶಾಸಕ
ಮಿಣಜಗಿ ಗ್ಯಾಲರಿಯು ಪಾಲಿಕೆಯ ಕಟ್ಟಡದಲ್ಲೇ ಇರುವ ಕಾರಣ ಕಟ್ಟಡ ಅಭಿವೃದ್ಧಿ ಯೋಜನೆಯಲ್ಲಿ ಪರಿಗಣಿಸಿ ಅಗತ್ಯ ದುರಸ್ತಿ ಕಾರ್ಯ ಮಾಡಿಸಲಾಗುವುದುವಿಜಯಕುಮಾರ ಆರ್. ಹೆಚ್ಚುವರಿ ಆಯುಕ್ತ ಹು–ಧಾ ಮಹಾನಗರ ಪಾಲಿಕೆ
ಹೋರಾಟ ಮಾಡಿ ಗ್ಯಾಲರಿ ಪಡೆದುಕೊಂಡಿದ್ದೇವೆ. ಅದನ್ನು ಚಾಲ್ತಿಯಲ್ಲಿ ಇಡಬೇಕು. ಅದಕ್ಕಾಗಿ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿದ್ದೇವೆಕೆ.ವಿ. ಶಂಕರ ಮಿಣಜಗಿ ಕಲಾಮಂದಿರ ಸಮಿತಿ ಸದಸ್ಯ
ರಾಜ್ಯ ಸರ್ಕಾರದವರು ಸ್ಥಳಾವಕಾಶ ನೀಡಿದರೆ ಕೇಂದ್ರ ಲಲಿತಕಲಾ ಅಕಾಡೆಮಿ ಪ್ರಾದೇಶಿಕ ಕೇಂದ್ರ ಸ್ಥಾಪನೆ ಆಗುತ್ತದೆ. ಇಲ್ಲದಿದ್ದರೆ ಅದು ಜಿಲ್ಲೆಯ ಕೈತಪ್ಪುತ್ತದೆಪ್ರಲ್ಹಾದ ಜೋಶಿ ಕೇಂದ್ರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.