ADVERTISEMENT

ವಿಧಾನಸಭೆ ಅರ್ಜಿಗಳ ಸಮಿತಿ ಸಭೆ ನ. 6ಕ್ಕೆ: ಶಾಸಕ ಮಹೇಶ ಟೆಂಗಿನಕಾಯಿ

ಚಂದ್ರಮೌಳೇಶ್ವರ ದೇವಸ್ಥಾನದ ಸುತ್ತ ಅಭಿವೃದ್ದಿ–ಚರ್ಚೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 4:46 IST
Last Updated 5 ನವೆಂಬರ್ 2025, 4:46 IST
 ಮಹೇಶ ಟೆಂಗಿನಕಾಯಿ
 ಮಹೇಶ ಟೆಂಗಿನಕಾಯಿ   

ಹುಬ್ಬಳ್ಳಿ: ಇಲ್ಲಿನ ಉಣಕಲ್‌ನ ಚಂದ್ರಮೌಳೇಶ್ವರ ದೇವಸ್ಥಾನದ ಸುತ್ತ ಅಭಿವೃದ್ಧಿ ಸೇರಿ ವಿವಿಧ ವಿಷಯಗಳ ಕುರಿತು ಚರ್ಚಿಸಲು ಇದೇ ಮೊದಲ ಬಾರಿಗೆ ವಿಧಾನಸಭೆ ಅರ್ಜಿಗಳ ಸಮಿತಿ ಸಭೆಯನ್ನು ನವೆಂಬರ್‌ 6ರಂದು ಹುಬ್ಬಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ, ಸಮಿತಿಯ ಸದಸ್ಯ ಮಹೇಶ ಟೆಂಗಿನಕಾಯಿ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆಯ ಉಪ ಸಭಾಧ್ಯಕ್ಷ, ಸಮಿತಿಯ ಅಧ್ಯಕ್ಷ ರುದ್ರಪ್ಪ ಲಮಾಣಿ ಮತ್ತು ಸಮಿತಿ ಸದಸ್ಯರಾಗಿರುವ 15 ಜನ ಶಾಸಕರು ಅಂದು ಬಳಿಗ್ಗೆ 10.30ಕ್ಕೆ ಚಂದ್ರಮೌಳೇಶ್ವರ ದೇವಸ್ಥಾನ, ಉಣಕಲ್ ಕೆರೆಗೆ  ಭೇಟಿ ನೀಡಲಿದ್ದಾರೆ. ನಂತರ ಹುಬ್ಬಳ್ಳಿ –ಧಾರವಾಡ ಮಹಾನಗರ ಪಾಲಿಕೆ ಸಭಾಭವದಲ್ಲಿ ಬೆಳಿಗ್ಗೆ 11.30ಕ್ಕೆ ಸಭೆ ನಡೆಯಲಿದೆ ಎಂದರು.

ಪ್ರತಿ ಗುರುವಾರ ಅರ್ಜಿಗಳ ಸಮಿತಿ ಸಭೆ ಬೆಂಗಳೂರಿನಲ್ಲಿ ನಡೆಯುತ್ತದೆ. ಆದರೆ, ಇಲ್ಲಿನ ವಿಷಯಗಳ ಕುರಿತು ಚರ್ಚಿಸಲು ಇಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ. ವಸತಿ, ಕಂದಾಯ, ಗ್ರಾಮೀಣಾಭಿವೃದ್ದಿ, ಪ್ರವಾಸೋದ್ಯಮ, ಪುರಾತತ್ವ ಇಲಾಖೆ ಅಧಿಕಾರಿಗಳು ಸಹ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ADVERTISEMENT

ಕಾಶಿ ಕಾರಿಡಾರ್ ಮಾದರಿಯಲ್ಲಿ ಚಂದ್ರಮೌಳೇಶ್ವರ ದೇವಸ್ಥಾನದ ಸುತ್ತ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಅಧಿವೇಶನದಲ್ಲಿ ಪ್ರಸ್ತಾಪಿಸಲಾಗಿತ್ತು. ಆ ನಂತರ ಅರ್ಜಿಗಳ ಸಮಿತಿಯಲ್ಲೂ ಚರ್ಚಿಸಲಾಗಿದೆ. ಇದು ಐತಿಹಾಸಿಕ ದೇವಸ್ಥಾನವಾಗಿದ್ದು, ಅಭಿವೃದ್ಧಿಯಾದರೆ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ ಎಂದು ತಿಳಿಸಿದರು.  

ಅಲ್ಲಿನ ನಿವಾಸಿಗಳು ಅಭಿವೃದ್ಧಿಗೆ ಜಾಗ ಬಿಟ್ಟುಕೊಡಲು ಸಹಮತ ವ್ಯಕ್ತಪಡಿಸಿದ್ದಾರೆ. ಪುರಾತತ್ವ ಇಲಾಖೆ ಮತ್ತು ಪಾಲಿಕೆಯಿಂದ ಜಂಟಿ ಸರ್ವೆ ಮಾಡಲಾಗಿದ್ದು, ಡಿಪಿಆರ್ ಹಂತಕ್ಕೆ ಬಂದಿದೆ ಎಂದರು.

ಅಭಿವೃದ್ಧಿಗೆ ಜಾಗ ಬಿಟ್ಟುಕೊಡುವವರಿಗೆ ಪರ್ಯಾಯವಾಗಿ ಜಾಗ ನೀಡಲು ಎರಡು ಕಡೆ ಸ್ಥಳ ನೋಡಲಾಗಿದೆ. ಪರಿಹಾರ ನೀಡುವ ಬಗ್ಗೆಯೂ ಚಿಂತನೆ ಇದೆ. ಭೂಸ್ವಾಧೀನ ಸೇರಿ ದೇವಸ್ಥಾನದ ಸುತ್ತ ಅಭಿವೃದ್ಧಿಗೆ ₹25.50 ಕೋಟಿ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದ್ದು, ಅದರಲ್ಲಿ ₹18 ಕೋಟಿ ಭೂಸ್ವಾಧೀನಕ್ಕೆ ವೆಚ್ಚವಾಗಲಿದೆ ಎಂದು ತಿಳಿಸಿದರು.

ಕೊಳೆಗೇರಿ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ, ಜೈಹನುಮಾನ್ ನಗರದಲ್ಲಿ ಮನೆ ನಿರ್ಮಾಣ, ಹು–ಧಾ ನಗರಾಭಿವೃದ್ಧಿ ಪ್ರಾಧಿಕಾರದಿಂದ ಕ್ರಮಬದ್ಧವಾಗಿ ಕಾಮಗಾರಿಗಳ ಅನುಷ್ಠಾನ, ಕೆರೆಗಳಿಗೆ ಕಾಯಕಲ್ಪ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಹೇಳಿದರು.

ನನ್ನ ಕ್ಷೇತ್ರದಲ್ಲಿ ವಸತಿ ಸೌಲಭ್ಯಕ್ಕಾಗಿ ಎಂಟು ಸಾವಿರ ಅರ್ಜಿಗಳು ಬಂದಿವೆ. ಆದರೆ, ಕ್ಷೇತ್ರದಲ್ಲಿ ಲ್ಯಾಂಡ್‌ ಬ್ಯಾಂಕ್ ಇಲ್ಲ. ಈ ಬಗ್ಗೆ ವಸತಿ, ಕಂದಾಯ, ಗ್ರಾಮೀಣಾಭಿವೃದ್ದಿ, ಪ್ರವಾಸೋದ್ಯಮ ಸೇರಿ ವಿವಿಧ ಇಲಾಖೆಗಳ ಜತೆ ಚರ್ಚಿಸಲಾಗವುದು ಎಂದರು.

ಮೇಯರ್ ಜ್ಯೋತಿ ಪಾಟೀಲ, ಉಪಮೇಯರ್ ಸಂತೋಷ್‌ ಚವ್ಹಾಣ್, ರವಿ ನಾಯ್ಕ್‌, ಈಶ್ವರಗೌಡ ಪಾಟೀಲ ಇದ್ದರು.

ಸಭೆಯಲ್ಲಿ ಚಂದ್ರಮೌಳೇಶ್ವರ ದೇವಸ್ಥಾನದ ಸುತ್ತ ಅಭಿವೃದ್ಧಿ ಕುರಿತು ಕೂಲಂಕಷವಾಗಿ ಚರ್ಚೆ ನಡೆಸಿ ಯಾವ ಇಲಾಖೆಯಿಂದ ಅನುದಾನ ಒದಗಿಸಬೇಕು ಎಂದು  ಪ್ರಸ್ತಾವ ಸಲ್ಲಿಸಲಾಗುವುದು
ಮಹೇಶ ಟೆಂಗಿನಕಾಯಿ, ಶಾಸಕ

‘ನೃಪತುಂಗ ಬೆಟ್ಟ ಅಭಿವೃದ್ಧಿಗೆ ₹5 ಕೋಟಿ’

ನೃಪತುಂಗ ಬೆಟ್ಟದ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಯಿಂದ ₹5 ಕೋಟಿ ಮಂಜೂರಾಗಿದೆ. ಡಿಪಿಆರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು. ನೃಪತುಂಗ ಬೆಟ್ಟದಿಂದ ಉಣಕಲ್‌ ಕೆರೆ ಮತ್ತು ಬೆಟ್ಟದ ಮೇಲಿಂದ ಕೆಳಭಾಗದವರೆಗೆ ರೋಪ್‌ವೇ ನಿರ್ಮಿಸಿಲು ಉದ್ದೇಶಿಸಲಾಗಿತ್ತು. ಬೆಟ್ಟದಿಂದ ಉಣಕಲ್‌ ಕೆರೆವರೆಗೆ ರೋಪ್‌ವೇ ಅಳವಡಿಸುವ ಯೋಜನೆ ತಿರಸ್ಕೃತವಾಗಿದೆ. ಹೀಗಾಗಿ ಬೆಟ್ಟದಿಂದ ಪತ್ರಕರ್ತರ ನಗರದವರೆಗೆ ರೋಪ್‌ವೇ ನಿರ್ಮಾಣ ಮಾಡಲಾಗುವುದು ಎಂದರು. ಬೆಟ್ಟದಲ್ಲಿ ದುಬೈ ಮಾದರಿಯಲ್ಲಿ ಗ್ಲಾಸ್ ಸ್ಕೈವಾಕ್ ಜಿಪ್‌ಲೈನ್‌ ತೆರೆದ ಗ್ಯಾಲರಿ ಬೈನಾಕ್ಯುಲರ್ ಪಾಯಿಂಟ್‌ ಫುಡ್‌ಕೋರ್ಟ್‌ ಸಂಗೀತ ಕಾರಂಜಿ ನಿರ್ಮಿಸಲು ಉದ್ದೇಶಿಸಲಾಗಿದೆ. ಪರಿಸರಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಕಾಮಗಾರಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರಸ್ತೆ ಕಾಮಗಾರಿ; ಶೀಘ್ರ ಭೂಮಿಪೂಜೆ

ಸಿದ್ಧಾರೂಢ ಮಠದಿಂದ ಗೋಕುಲ ರಸ್ತೆಗೆ ಸಂಪರ್ಕ ಕಲ್ಪಿಸುವ ಆರ್‌.ಎನ್‌.ಶೆಟ್ಟಿ ರಸ್ತೆಯ ಅಭಿವೃದ್ಧಿ ಕಾಮಗಾರಿ ಮಠದಿಂದ ಡೆನಿಸನ್ಸ್ ಹೋಟೆಲ್ ಕ್ರಾಸ್‌ವರೆಗೆ ಮುಗಿದಿದೆ. ಅಲ್ಲಿಂದ ಗೋಕುಲ ರಸ್ತೆವರೆಗೆ ₹4.25 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್‌ ರಸ್ತೆ ಪೇವರ್ಸ್ ಅಳವಡಿಕೆಗೆ ಶೀಘ್ರ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಶಾಸಕ ಮಹೇಶ ಟೆಂಗಿನಕಾಯಿ ತಿಳಿಸಿದರು. ಕೋಟಿಲಿಂಗೇಶ್ವರ ನಗರದ ರಸ್ತೆ ಸಹ ಹಾಳಾಗಿದ್ದು 2.5 ಕಿ.ಮೀ ಉದ್ದದ ರಸ್ತೆಯನ್ನು ₹2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದರು.  ಚನ್ನಮ್ಮ ವೃತ್ತದ ಸುತ್ತ ಡಾಂಬರ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದರು. ಅದರ ಬದಲು ಸಿ.ಸಿ ರಸ್ತೆ ನಿರ್ಮಿಸಲು ಸೂಚಿಸಲಾಗಿದೆ. ಪಾಲಿಕೆ ಸದಸ್ಯರು ಶಾಸಕರೊಂದಿಗೆ ಸಿ.ಎಂ ಬಳಿ ಸರ್ವ ಪಕ್ಷ ನಿಯೋಗ ತೆರಳಿ ಮಹಾನಗರ ಪಾಲಿಕೆಗೆ ಬಾಕಿ ಅನುದಾನ ಬಿಡುಗಡೆ ಮಾಡಲು ಮನವಿ ಮಾಡಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.