ADVERTISEMENT

ಎಲ್ಲರಿಗೂ ಗುಣಮಟ್ಟದ ಸೌಲಭ್ಯದ ಭರವಸೆ

ಸಹಕಾರ ಮಹಾಮಂಡಳದಿಂದ ಜನ ಔಷಧ ಪ್ರಾಂತೀಯ ಕೇಂದ್ರ ಆರಂಭ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 10:24 IST
Last Updated 6 ನವೆಂಬರ್ 2020, 10:24 IST
ಹುಬ್ಬಳ್ಳಿಯಲ್ಲಿ ಶುಕ್ರವಾರ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ತಿಮ್ಮಣ್ಣ ಮೆಳ್ಳಿ ಮತ್ತು ಕರ್ನಾಟಕ ಆಯಿಲ್‌ ಫೆಡರೇಷನ್‌ ನಿರ್ದೇಶಕ ಬಿ.ಟಿ. ಬೆನಕಟ್ಟಿ ಅವರು ಪ್ರಧಾನ ಮಂತ್ರಿ ಜನ ಔಷಧ ಪ್ರಾಂತೀಯ ಕಚೇರಿ ಉದ್ಘಾಟಿಸಿದರು
ಹುಬ್ಬಳ್ಳಿಯಲ್ಲಿ ಶುಕ್ರವಾರ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ತಿಮ್ಮಣ್ಣ ಮೆಳ್ಳಿ ಮತ್ತು ಕರ್ನಾಟಕ ಆಯಿಲ್‌ ಫೆಡರೇಷನ್‌ ನಿರ್ದೇಶಕ ಬಿ.ಟಿ. ಬೆನಕಟ್ಟಿ ಅವರು ಪ್ರಧಾನ ಮಂತ್ರಿ ಜನ ಔಷಧ ಪ್ರಾಂತೀಯ ಕಚೇರಿ ಉದ್ಘಾಟಿಸಿದರು   

ಹುಬ್ಬಳ್ಳಿ: ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಎಲ್ಲರಂತೆ ಗುಣಮಟ್ಟದ ಔಷಧಿಗಳು ಲಭಿಸಬೇಕು ಎನ್ನುವ ಉದ್ದೇಶಕ್ಕೆ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಜನ ಔಷಧಿ ಕೇಂದ್ರಗಳನ್ನು ಆರಂಭಿಸಿದೆ. ಜನ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಹೇಳಿದರು.

ಇಲ್ಲಿನ ವಿಕಾಸ ನಗರದಲ್ಲಿ ರಾಜ್ಯ ಸಹಕಾರ ಮಾರಾಟ ಮಹಾಮಂಡಳದಿಂದ ಆರಂಭವಾದ ಜನ ಔಷಧಿ ಸಗಟು ಪ್ರಾಂತೀಯ ಕಚೇರಿಗೆ ಬೆಂಗಳೂರಿನಿಂದ ಆನ್‌ಲೈನ್ ಮೂಲಕ ಚಾಲನೆ ನೀಡಿದ ಅವರು ‘ಮಧುಮೇಹ ಮತ್ತು ಬಿಪಿ ಇರುವವರು ಪ್ರತಿ ತಿಂಗಳು ಔಷಧಿ ಖರೀದಿಗೆ ₹2ರಿಂದ ₹3 ಸಾವಿರ ಖರ್ಚು ಮಾಡಬೇಕಾಗುತ್ತದೆ. ಜನ ಔಷಧ ಕೇಂದ್ರದಲ್ಲಿ ಖರೀದಿಸಿದರೆ ₹400ರಿಂದ ₹450 ವೆಚ್ಚ ಮಾಡಿದರೂ ಸಾಕು’ ಎಂದರು.

‘ವೈದ್ಯಕೀಯ ಮತ್ತು ಔಷಧಗಳ ತಯಾರಿಕಾ ಕ್ಷೇತ್ರದಲ್ಲಿ ಭಾರತ ಮುಂಚೂಣಿಯಲ್ಲಿದೆ. ಶೇ 80ರಷ್ಟು ಔಷಧಿಗಳನ್ನು ವಿದೇಶಗಳಿಗೆ ರಫ್ತು ಮಾಡುತ್ತಿದೆ. ಶೀಘ್ರದಲ್ಲಿ ರಾಜ್ಯದಲ್ಲಿ ಇನ್ನಷ್ಟು ಜನ ಔಷಧಿ ಕೇಂದ್ರಗಳನ್ನು ಆರಂಭಿಸಲಾಗುವುದು, ಆ್ಯಪ್‌ ಡೌನ್‌ಲೋಡ್ ಮಾಡಿಕೊಂಡರೆ ನಿಮ್ಮ ಸಮೀಪದ ಅಂಗಡಿಗಳ ಮಾಹಿತಿ ಅದರಲ್ಲಿ ಸಿಗುತ್ತದೆ’ ಎಂದು ತಿಳಿಸಿದರು.

ADVERTISEMENT

ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ತಿಮ್ಮಣ್ಣ ಮೆಳ್ಳಿ ಮತ್ತು ಕರ್ನಾಟಕ ಆಯಿಲ್‌ ಫೆಡರೇಷನ್‌ ನಿರ್ದೇಶಕ ಬಿ.ಟಿ. ಬೆನಕಟ್ಟಿ ಅವರು ಸಾಂಕೇತಿಕವಾಗಿ ಇಲ್ಲಿನ ಪ್ರಾಂತೀಯ ಕಚೇರಿ ಉದ್ಘಾಟಿಸಿದರು.

ಬೆಳಗಾವಿ ವಿಭಾಗದ ಮಾರಾಟ ವ್ಯವಸ್ಥಾಪಕ ಮಲ್ಲಿಕಾರ್ಜುನ ಮಲ್ಲಮ್ಮನವರ ಮಾತನಾಡಿ ‘ಹುಬ್ಬಳ್ಳಿಯಲ್ಲಿ ಪ್ರಾಂತೀಯ ಕಚೇರಿ ಆರಂಭವಾಗಿದ್ದರಿಂದ ಉತ್ತರ ಕರ್ನಾಟಕದ ಜಿಲ್ಲೆಗಳ ಜನರಿಗೆ ವೇಗವಾಗಿ ಔಷಧಿಗಳನ್ನು ತಲುಪಿಸಲು ಸಾಧ್ಯವಾಗುತ್ತದೆ. ಇನ್ನು 10 ದಿನಗಳಲ್ಲಿ ಕಚೇರಿ ಕಾರ್ಯಾರಂಭ ಮಾಡಲಿದೆ’ ಎಂದು ಹೇಳಿದರು. ಬೆಳಗಾವಿ ಮತ್ತು ಕಲಬುರ್ಗಿ ವಿಭಾಗಗಳ ಶಾಖಾ ವ್ಯವಸ್ಥಾಪಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.