ADVERTISEMENT

ಆಟೊರಿಕ್ಷಾ ಪರ್ಮಿಟ್ ಬಂದ್

ಹೊಸ ವಾಹನ ಖರೀದಿಸುವ ವೃತ್ತಿಪರ ಚಾಲಕರಿಗೆ ತೊಂದರೆ

ಎಂ.ನವೀನ್ ಕುಮಾರ್
Published 27 ಏಪ್ರಿಲ್ 2019, 16:44 IST
Last Updated 27 ಏಪ್ರಿಲ್ 2019, 16:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹುಬ್ಬಳ್ಳಿ: ಆಟೊರಿಕ್ಷಾ ಹೊಸ ಪರ್ಮಿಟ್ ನೀಡದಿರುವುದರಿಂದ ವಾಹನ ಖರೀದಿ ಮಾಡಲಾಗದೆ ವೃತ್ತಿಪರ ಚಾಲಕರು ತೊಂದರೆ ಅನುಭವಿಸುತ್ತಿದ್ದಾರೆ. ಹೊಸ ಆಟೊ ರಿಕ್ಷಾಗಳು ರಸ್ತೆಗಳಿಯದ ಕಾರಣ ಹಳೆಯ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಮಾಲೀಕರು, ಚಾಲಕರಿಂದ ಹೆಚ್ಚಿನ ಬಾಡಿಗೆ (ರಿಪೋರ್ಟ್‌) ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಸಹ ಕೇಳಿ ಬಂದಿದೆ.

ಅವಳಿನಗರದಲ್ಲಿ ಈಗಾಗಲೇ ಆಟೊರಿಕ್ಷಾಗಳ ಸಂಖ್ಯೆ ವಿಪರೀತ ಇರುವುದರಿಂದ ಹೊಸ ಪರ್ಮಿಟ್ ನೀಡಬಾರದು ಎಂದು ಹಲವಾರು ಆಟೊ ರಿಕ್ಷಾ ಮಾಲೀಕರ ಸಂಘಟನೆಗಳು ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದವು. ಅದನ್ನು ಪರಿಗಣಿಸಿದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಕಳೆದ ನವೆಂಬರ್‌ನಿಂದ ಹೊಸ ಪರ್ಮಿಟ್‌ ನೀಡುತ್ತಿಲ್ಲ.

ಪರಿಣಾಮ, ಅದೇ ವೃತ್ತಿ ನಂಬಿಕೊಂಡಿರುವ ಚಾಲಕರು ಹೊಸ ವಾಹನ ಖರೀದಿಸಲು ಸಾಧ್ಯವಾಗುತ್ತಿಲ್ಲ. ಬಾಡಿಗೆಗೆ ವಾಹನ ಪಡೆದು ಜೀವನ ಚಕ್ರ ಉರುಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಆಟೊ ಮಾಲೀಕರಿಗೆ ದಿನವೊಂದಕ್ಕೆ ₹ 300 ನೀಡಬೇಕು. ಇಂಧನ ವೆಚ್ಚವನ್ನು ಭರಿಸಬೇಕು. ಆ ನಂತರ ಹಣ ಉಳಿದಿದರೆ ಅದರಲ್ಲಿ ಹೊಟ್ಟೆ ಹೊರೆಯಬೇಕಾಗಿದೆ.

ADVERTISEMENT

‘ಮೂರು ವರ್ಷಗಳಿಂದ ಬಾಡಿಗೆ ಅಟೊ ರಿಕ್ಷಾ ಓಡಿಸಿ ಜೀವನ ಸಾಗಿಸುತ್ತಿದ್ದೇನೆ. ಬಾಡಿಗೆ ಆಟೊ ಓಡಿಸುತ್ತಿರುವುದರಿಂದ ವಾಹನ ಮಾಲೀಕರಿಗೇ ದುಡಿಮೆಯ ಬಹುಪಾಲು ಹಣ ನೀಡಬೇಕಾಗಿದೆ. ಸ್ವಂತ ವಾಹನ ಖರೀದಿಸಿದರೆ ಸ್ವಲ್ಪ ಹಣ ಉಳಿಯಲಿದೆ. ಆದರೆ, ಹೊಸ ಪರ್ಮಿಟ್ ನೀಡದ ಕಾರಣ ಖರೀದಿ ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ ಆಟೊ ಚಾಲಕ ಮಂಜು ಮುಳಗುಂದ.

‘ವಾಹನ ಮಾಲೀಕರಿಗೆ ದಿನಕ್ಕೆ ₹300 ನೀಡಬೇಕು. ಅಂದರೆ ತಿಂಗಳಿಗೆ ₹ 9 ಸಾವಿರವಾಗುತ್ತದೆ. ಹೊಸ ಆಟೊ ಖರೀದಿಸಿದರೆ ಅದೇ ಹಣದಲ್ಲಿ ಕಂತು ತುಂಬಿ ಇನ್ನೂ ಸ್ವಲ್ಪ ಹಣ ಉಳಿಸಿಕೊಳ್ಳಬಹುದು’ ಎಂದು ಅವರು ಹೇಳಿದರು.

‘ಎರಡೂವರೆ ವರ್ಷದಿಂದ ಬಾಡಿಗೆ ಆಟೊ ಓಡಿಸುತ್ತಿದ್ದೇನೆ. ಈಗಂತೂ ದಿನವೊಂದಕ್ಕೆ ₹300ರಿಂದ ₹400 ವರೆಗೆ ಕೊಡಬೇಕಾದ ಅನಿವಾರ್ಯತೆ ಇದೆ. ಹೊಸ ಆಟೊ ರಿಕ್ಷಾಗಳು ಬರುತ್ತಿಲ್ಲವಾದ್ದರಿಂದ ಈಗಿರುವ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾದರೆ ಜೀವನ ನಿರ್ವಹಣೆಯೇ ಕಷ್ಟವಾಗುತ್ತದೆ’ ಎನ್ನುತ್ತಾರೆ ಇನ್ನೊಬ್ಬ ಆಟೊ ಚಾಲಕ ವೆಂಕಟೇಶ್.

ಹೊಸ ಪರ್ಮಿಟ್ ನೀಡಬಾರದು ಎಂದು ಆಟೊ ರಿಕ್ಷಾ ಸಂಘಟನೆಗಳೇ ಮಾಡಿದ್ದ ಮನವಿ ಸ್ಪಂದಿಸಿ ಪರ್ಮಿಟ್‌ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ಹೊಸ ಪರ್ಮಿಟ್ ಬೇಕು ಎಂಬ ಮನವಿ ಬಂದರೆ ಪರಿಶೀಲಿಸಲಾಗುತ್ತದೆ ಎನ್ನುತ್ತಾರೆ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ರವೀಂದ್ರ ಕವಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.