ಸಾವು
(ಪ್ರಾತಿನಿಧಿಕ ಚಿತ್ರ)
ಹುಬ್ಬಳ್ಳಿ: ಇಲ್ಲಿಯ ಸೋನಿಯಾಗಾಂಧಿ ನಗರದಲ್ಲಿ ರಸ್ತೆ ದಾಟುತ್ತಿದ್ದ ಎಂಟು ವರ್ಷದ ಬಾಲಕಿ ಹಮೀದಾಬಾನು ಕಬಾಡೆಗೆ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಆಟೋ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದಾಳೆ.
ಶನಿವಾರ ಘಟನೆ ನಡೆದಿದ್ದು, ಬಾಲಕಿ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನುಮಾನಾಸ್ಪದ ಸಾವು: ನಗರದ ಹೊರವಲಯದ ಗಾಮನಗಟ್ಟಿ ಪ್ರದೇಶದಲ್ಲಿ ಬಿಹಾರ ರಾಜ್ಯದ ತೂಪಾನ್‌ಕುಮಾರ(20) ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಕುರಿತು ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೋಮವಾರ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿದೆ. ದೇಹದಲ್ಲಿ ಕೆಲವು ಗಾಯಗಳು ಕಂಡು ಬಂದಿದ್ದು, ಬಿದ್ದಿರುವ ಅಥವಾ ಕೊಲೆ ಮಾಡಿರುವ ಶಂಕೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
₹34.94 ಲಕ್ಷ ವಂಚನೆ: ಪೀಠೋಪಕರಣ ಮಾರಾಟದ ವ್ಯವಹಾರ ನಡೆಸಿದರೆ ಹೆಚ್ಚು ಲಾಭ ನೀಡುವುದಾಗಿ ನಗರದ ಮಂಜುನಾಥ ಅವರಿಗೆ ವಾಟ್ಸ್‌ಆ್ಯಪ್‌ನಲ್ಲಿ ಸಂಪರ್ಕಿಸಿದ ಇಬ್ಬರು, ಅವರಿಂದ ₹34.94 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಮಂಜುನಾಥ ಅವರಿಗೆ ಫೈಜಲ್ ಮತ್ತು ಕೃಷ್ಣಾ ಹೆಸರಿನಲ್ಲಿ ಇಬ್ಬರು ವಾಟ್ಸ್‌ಆ್ಯಪ್ ನಂಬರ್‌ನಲ್ಲಿ ಸಂಪರ್ಕಿಸಿ, ಡಬ್ಲ್ಯೂಎಂಯುಎಸ್ ಕಂಪನಿ ಹೆಸರಿನ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರಿಸಿದ್ದಾರೆ. ಅಲ್ಲಿ ಪೀಠೋಪಕರಣಗಳ ಮಾರಾಟ ಹಾಗೂ ಜಾಹೀರಾತು ತೋರಿಸಿ, ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೂಡಿಕೆ ನೆಪದಲ್ಲಿ ವಂಚನೆ: ಆನ್‌ಲೈನ್ ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ, ಹೆಚ್ಚು ಹಣ ಗಳಿಸಬಹುದು ಎಂದು ನಗರದ ಆರತಿ ಅವರ ಮೊಬೈಲ್‌ಗೆ ಸಂದೇಶ ಕಳುಹಿಸಿದ ವ್ಯಕ್ತಿ, ₹16.85 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಆರತಿ ಅವರು ಇನ್‌ಸ್ಟಾಗ್ರಾಮ್ ಪೇಜ್ ನೋಡುತ್ತಿದ್ದಾಗ ವಂಚಕ, ಅವರಿಗೆ ಮನೆಯಿಂದಲೇ ಕೆಲಸ ಮಾಡಿ ಹೆಚ್ಚು ಲಾಭ ಗಳಿಸಬಹುದು ಎಂದು ಸಂದೇಶ ಕಳುಹಿಸಿದ್ದ. ನಂತರ ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಲಾಭ ಗಳಿಸಬಹುದು ಎಂದು ನಂಬಿಸಿ, ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಭರಣ ಕಳವು: ಇಲ್ಲಿನ ಹಳೇಹುಬ್ಬಳ್ಳಿಯ ಅಜ್ಮೀರನಗರದ ಮಸೀದಿ ಬಳಿಯ ಸಲಿಮ್ ಪಟೇಲ್ ಅವರ ಮನೆಯ ಬಾಗಿಲಿನ ಕೀಲಿ ಮುರಿದು, ₹1.35 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹42 ಸಾವಿರ ನಗದು ಕಳವು ಮಾಡಲಾಗಿದೆ. ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.