ADVERTISEMENT

ದೇಶಕ್ಕೆ ಜಗಜೀವನ್‌ ರಾಂ ಕೊಡುಗೆ ಅಪಾರ: ಪ್ರಸಾದ ಅಬ್ಬಯ್ಯ

ಡಾ. ಬಾಬು ಜಗಜೀವನ್‌ ರಾಂ ಅವರ 115ನೇ ಜನ್ಮ ಜಯಂತಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 15:12 IST
Last Updated 5 ಏಪ್ರಿಲ್ 2022, 15:12 IST
ಹುಬ್ಬಳ್ಳಿಯ ಮಿನಿ ವಿಧಾನಸೌಧದಲ್ಲಿ ತಾಲ್ಲೂಕು ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಮಂಗಳವಾರ ಆಯೋಜಿಸಿದ ಡಾ. ಬಾಬು ಜಗಜೀವನ್‌ ರಾಂ ಜನ್ಮದಿನ ಕಾರ್ಯಕ್ರಮವನ್ನು ಸಾಮಾಜಿಕ ಕಾರ್ಯಕರ್ತ ತಮ್ಮಣ್ಣ ಮಾದಾರ ಉದ್ಘಾಟಿಸಿದರು
ಹುಬ್ಬಳ್ಳಿಯ ಮಿನಿ ವಿಧಾನಸೌಧದಲ್ಲಿ ತಾಲ್ಲೂಕು ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಮಂಗಳವಾರ ಆಯೋಜಿಸಿದ ಡಾ. ಬಾಬು ಜಗಜೀವನ್‌ ರಾಂ ಜನ್ಮದಿನ ಕಾರ್ಯಕ್ರಮವನ್ನು ಸಾಮಾಜಿಕ ಕಾರ್ಯಕರ್ತ ತಮ್ಮಣ್ಣ ಮಾದಾರ ಉದ್ಘಾಟಿಸಿದರು   

ಹುಬ್ಬಳ್ಳಿ: ‘ಆಧುನಿಕ ಭಾರತ ನಿರ್ಮಾಣಕ್ಕೆ ಡಾ. ಬಾಬು ಜಗಜೀವನ್‌ರಾಂ ಅವರ ಕೊಡುಗೆ ದೊಡ್ಡದು. ಈ ದೇಶದ ಶೋಷಿತ ಮತ್ತು ಹಿಂದುಳಿದ ವರ್ಗದವರಿಗೆ ಜಗಜೀವನ್‌ ರಾಂ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಎರಡು ಕಣ್ಣುಗಳಿದ್ದಂತೆ’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ತಾಲ್ಲೂಕು ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರದ ಮಿನಿ ವಿಧಾನಸೌಧದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡಾ. ಬಾಬು ಜಗಜೀವನ್‌ರಾಂ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಎಂಟು ವರ್ಷಗಳಲ್ಲಿ ದೇಶದ ದಲಿತ ಸಮುದಾಯಗಳ ಶಕ್ತಿ ದಿನದಿಂದ ದಿನಕ್ಕೆ ಒಡೆಯುತ್ತಿದೆ. ಖಾಸಗೀಕರಣದಿಂದಾಗಿ ಮೀಸಲಾತಿಯನ್ನು ಇನ್ನಿಲ್ಲವಾಗಿಸಲಾಗುತ್ತಿದ್ದರೆ, ಇರುವ ಅತ್ಯಲ್ಪ ಮೀಸಲಾತಿಯನ್ನು ಉಳ್ಳವರಿಗೂ ಕೊಟ್ಟು ಅದರ ಆಶಯವನ್ನು ಮಣ್ಣು ಪಾಲು ಮಾಡಲಾಗುತ್ತಿದೆ. ಇದರ ಹಿಂದೆ ಮನುವಾದಿಗಳ ಕುತಂತ್ರವಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ದಲಿತ ಸಂಘಟನೆಗಳು ಅಂಬೇಡ್ಕರ್ ಮತ್ತು ಜಗಜೀವನ್ ರಾಂ ಅವರ ಹೆಸರಿನಲ್ಲಿ ಭಿಕ್ಷೆ ಎತ್ತುತ್ತಾ, ಕೀಳು ರಾಜಕಾರಣ ಮಾಡುವುದನ್ನು ಬಿಡಬೇಕಿದೆ. ಭಿನ್ನಾಭಿಪ್ರಾಯಗಳನ್ನು ಮೀರಿ ಸಮಾಜ ಕಟ್ಟಬೇಕಿದೆ’ ಎಂದು ಸಲಹೆ ನೀಡಿದರು.

ಸಾಮಾಜಿಕ ಕಾರ್ಯಕರ್ತ ತಮ್ಮಣ್ಣ ಮಾದಾರ ಮಾತನಾಡಿ, ‘ಹಸಿರು ಕ್ರಾಂತಿಯ ಹರಿಕಾರ ಎಂದು ಕರೆಯಲಾಗುವ ಜಗಜೀವನ್‌ ರಾಂ ಅವರಿಗೆ ನಾಲ್ಕು ಬಾರಿ ಪ್ರಧಾನಿಯಾಗುವ ಅವಕಾಶ ತಪ್ಪಿಸಲಾಯಿತು. ಹಾಗಾಗಿ, ಅವರು ಆಧುನಿಕ ಮಹಾಭಾರತದ ಕರ್ಣನಾಗಿಯೇ ಚರಿತ್ರೆಯಲ್ಲಿ ಉಳಿದಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

ಅಂತರ್ಜಾತಿ ವಿವಾಹವಾದ ಮೂರು ಜೋಡಿಗೆ ಪ್ರೋತ್ಸಾಹಧನದ ನಿಶ್ಚಿತ ಠೇವಣಿಯ ಪ್ರಮಾಣಪತ್ರ ನೀಡಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪರಿಶಿಷ್ಟ ಸಮುದಾಯ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರನ್ನು ಸನ್ಮಾನಿಸಲಾಯಿತು.

ತಹಶೀಲ್ದಾರ್ ಶಶಿಧರ ಮಾಡ್ಯಾಳ ತಹಶೀಲ್ದಾರ್ ಪ್ರಕಾಶ ನಾಶಿ, ಸಂತೋಷ ಹಿರೇಮಠ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ ಕಂದಕೂರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ನಂದಾ ಹಣಬರಟ್ಟಿ, ಗಂಗಾಧರ ಕೆರೂರ, ಸುರೇಶ ಖಾನಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.