ADVERTISEMENT

ಗಮನ ಸೆಳೆದ ‘ಬಂಬೂ’ ಬಾಟಲ್‌

ಬಿಹಾರದ ಮಣಿಪುರಿ ಬಂಬೂ ಆರ್ಕಿಟೆಕ್ಚರ್ ತಂಡದಿಂದ ನಿರ್ಮಾಣ

ಗೌರಮ್ಮ ಕಟ್ಟಿಮನಿ
Published 16 ಜನವರಿ 2023, 4:51 IST
Last Updated 16 ಜನವರಿ 2023, 4:51 IST
ಬಿಹಾರದ ಮಣಿಪುರಿ ಬಂಬೂ ಆರ್ಕಿಟೆಕ್ಟರ್‌ ತಂಡದವರು ಬಂಬೂವಿನಿಂದ ತಯಾರಿಸಿದ ಬಾಟಲ್‌ಗಳು
ಬಿಹಾರದ ಮಣಿಪುರಿ ಬಂಬೂ ಆರ್ಕಿಟೆಕ್ಟರ್‌ ತಂಡದವರು ಬಂಬೂವಿನಿಂದ ತಯಾರಿಸಿದ ಬಾಟಲ್‌ಗಳು   

ಧಾರವಾಡ: ಬಿದಿರಿನಿಂದ (ಬಂಬೂ) ಬಾಟಲಿ ತಯಾರಿಸಬಹುದಾ? ಅದರಲ್ಲಿ ನೀರು ಹಾಕಬಹುದಾ? ಅಂತ ಕುತೂಹಲದಿಂದ ಪ್ರಶ್ನಿಸುತ್ತಿದ್ದ ಸಾರ್ವಜನಿಕರಿಗೆ, ಹೌದು... ಇದು ಹೆಚ್ಚು ದಿನ ಬಾಳಿಕೆ ಬರುತ್ತದೆ. ಜೊತೆಗೆ, ನೋಡುವುದಕ್ಕೂ ಆಕರ್ಷಕವಾಗಿದೆ ಎಂದು ಕೈಗೆ ಬಿದಿರಿನ ಬಾಟಲಿ ಕೊಟ್ಟ ಯುವಕ.

ಯುವಜನೋತ್ಸವದ ಅಂಗವಾಗಿ ಧಾರವಾಡದ ಕೆಸಿಡಿ ಮೈದಾನದಲ್ಲಿ ನಡೆದ ‘ಯುವಕೃತಿ’ ಮೇಳದಲ್ಲಿ ಬಿಹಾರದ ಮಣಿಪುರಿ ಬಂಬೂ ಆರ್ಕಿಟೆಕ್ಚರ್ (ಎಂಬಿಎ) ಪ್ರತಿನಿಧಿಗಳು ಮಾರಾಟ ಮಾಡುತ್ತಿದ್ದ ಬಿದಿರಿನಿಂದ ತಯಾರಿಸಿದ ಗೃಹೋಪಯೋಗಿ ಹಾಗೂ ಆಲಂಕಾರಿಕ ವಸ್ತುಗಳು ನೋಡುಗರ ಗಮನ ಸೆಳೆದವು.

ವಿವಿಧ ವಸ್ತುಗಳಿದ್ದರೂ ಜನರನ್ನು ಹೆಚ್ಚು ಸೆಳೆದದ್ದು ಬಿದಿರಿನಿಂದ ತಯಾರಿಸಿದ ಕುಡಿಯುವ ನೀರಿನ ಬಾಟಲಿ. ಮಕ್ಕಳು ಇದು ಬೇಕೆ ಬೇಕು ಎಂದು ಪಾಲಕರನ್ನು ದುಂಬಾಲು ಬೀಳುತ್ತಿದ್ದ ದೃಶ್ಯ ಕಂಡುಬಂತು.

ADVERTISEMENT

‘ಒಳಗಡೆ ಸ್ಟೀಲ್ ಅಳವಡಿಸಲಾಗಿದ್ದು, ಫಿಲ್ಟರ್ ಹಾಕಲಾಗಿದೆ. ಇದು ಪರಿಸರ ಸ್ನೇಹಿಯಾಗಿದ್ದು, ಎಲ್ಲಾ ಕಾಲಕ್ಕೂ ಬಳಸಲು ಉಪಯುಕ್ತವಾಗಿದೆ’ ಎಂದು ಎಂಬಿಎ ಪ್ರತಿನಿಧಿ ಸತ್ಯಂ ಸುಂದರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಂದು ಬಾಟಲ್ ತಯಾರಿಸಲು ಗರಿಷ್ಠ 5 ಗಂಟೆ ಬೇಕಾಗುತ್ತದೆ. ದೇಶದ ಆಯ್ದ ಕೆಲವು ರಾಜ್ಯಗಳಲ್ಲಿ ವರ್ಷದ ಹಿಂದೆಯಷ್ಟೆ ತಯಾರಿಸಲಾಗುತ್ತಿದ್ದು, ಆನ್‍ಲೈನ್‍ಲ್ಲೂ ಬೇಡಿಕೆ ಹೆಚ್ಚಿದೆ. 500 ಎಂಎಲ್ ಹಾಗೂ 1000 ಎಂಎಲ್ ಸಾಮರ್ಥ್ಯದ ಬಾಟಲಿಗಳಿಗೆ ₹350 ರಿಂದ ₹800 ವರೆಗೆ ದರ ನಿಗದಿಪಡಿಸಲಾಗಿದೆ. ಬಾಟಲಿಗಳ ಮೇಲೆ ಆಕರ್ಷಕ ಚಿತ್ರ ಬಿಡಿಸಿರುವುದರಿಂದ, ದರ ತುಸು ಹೆಚ್ಚು’ ಎಂದು ಹೇಳಿದರು.

ಬಿದಿರಿನಿಂದ ತಯಾರಿಸಿದ ವಿವಿಧ ಗಾತ್ರದ ಪರ್ಸ್‍ಗಳು ಹೆಂಗಳೆಯರ ಮನಸೂರೆಗೊಂಡವು. ₹100ರಿಂದ ₹350ರವರೆಗೆ ಲಭ್ಯವಿದ್ದು, ಮಹಿಳೆಯರು ಖರೀದಿಯಲ್ಲಿ ತೊಡಗಿದ್ದರು. ಇನ್ನು ಫ್ರೇಮ್‌ ರೂಪಿಸಿ, ಅದರಲ್ಲಿ ಕೆತ್ತಿದ ಕಲಾಕೃತಿಗಳು ಹಾಗೂ ಬೆಡ್ ಲ್ಯಾಂಪ್, ಫ್ರೂಟ್ಸ್ ಟ್ರೆ, ಬಾಚಣಿಕೆ, ಟೂತ್ ಬ್ರಶ್, ಚಮಚ, ಕಪ್ ಸೇರಿದಂತೆ ಆಲಂಕಾರಿಕ ವಸ್ತುಗಳು ಗಮನ ಸೆಳೆದವು.

ಆಕರ್ಷಿಸಿದ ಕಾಶ್ಮೀರಿ ಪರ್ಫ್ಯೂಮ್

ಕೈಯಲ್ಲಿಡಿದರೆ ಸಾಕು ಘಮ್ಮೆಂದು ಮೂಗಿಗೆ ರಾಚುವ ಕಾಶ್ಮೀರಿ ಪರ್ಫ್ಯೂಮ್‌ ಕಾಲೇಜು ಯುವಕರು ಹಾಗೂ ಪುರುಷರನ್ನು ಆಕರ್ಷಿಸಿತು. ದರ ತುಸು ಹೆಚ್ಚಿದರೂ ಸಹ ಜನ ಖರೀದಿಯಲ್ಲಿ ತೊಡಗಿದ್ದರು.

ಕೇವಲ 6 ಎಂ.ಎಲ್‍.ಗೆ ಮುನ್ನೂರು ರೂಪಾಯಿಯೇ ಎಂದು ಬೆರಗಾದವರಿಗೆ, ‘ಗರಿಷ್ಠ ಮೂರ್ನಾಲ್ಕು ತಿಂಗಳವರೆಗೆ ಇದನ್ನು ಬಳಸಬಹುದು. ಸ್ವಲ್ಪವೇ ಬಳಸಿದರೂ ಸಾಕು ಇಡೀ ದಿನ ಸುವಾಸನೆ ಬೀರುತ್ತದೆ’ ಎಂದು ಕಾಶ್ಮೀರದ ನೆಹರೂ ಯುವ ಕೇಂದ್ರದ ಮಾರಾಟ ಪ್ರತಿನಿಧಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.