ADVERTISEMENT

ಬೆಂಗಳೂರು ಚಲೋ ಮೇ17ಕ್ಕೆ

ಸರ್ಕಾರಿ ನೌಕರರೆಂದು ಪರಿಗಣಿಸಲು ಆಶಾ ಕಾರ್ಯಕರ್ತೆಯರ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಮೇ 2022, 15:35 IST
Last Updated 9 ಮೇ 2022, 15:35 IST

ಹುಬ್ಬಳ್ಳಿ: ‘ಆಶಾಕಾರ್ಯಕರ್ತೆಯರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಿ, ವೇತನ ಸೇರಿದಂತೆ ಎಲ್ಲ ಸೌಲಭ್ಯ ನೀಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಮೇ17ಕ್ಕೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಎಐಯುಟಿಯುಸಿ ಸಂಯೋಜಿತ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಆಶಾ ಕಾರ್ಯಕರ್ತೆಯರು ಧರಣೆ ನಡೆಸಲಿದ್ದಾರೆ’ ಎಂದು ಎಐಯುಟಿಯುಸಿ ರಾಜ್ಯ ಸಮಿತಿ ಸದಸ್ಯ ಗಂಗಾಧರ ಬಡಿಗೇರ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೊರೊನಾ ಸೋಂಕು ತಡೆಯುವಲ್ಲಿ ಆಶಾ ಕಾರ್ಯಕರ್ತೆಯರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಆದರೆ, ಸರ್ಕಾರ ಇವರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ. ಆರ್‌ಸಿಎಚ್‌ ಪೋರ್ಟಲ್‌ ಡೇಟಾ ಎಂಟ್ರಿ ಸಮಸ್ಯೆ ಬಗೆಹರಿಸಬೇಕು. ಬಿಡಿಬಿಡಿಯಾಗಿ ನೀಡತ್ತಿರುವ ರಾಜ್ಯ ಸರ್ಕಾರದ ಗೌರವಧನ, ನಿಗದಿತ ಚಟುವಟಿಕೆಗಳಿಗೆ ನೀಡುವ ನಿಶ್ಚಿತ ಗೌರವಧನ ಹಾಗೂ ಆಶಾ ನಿಧಿಯ ಮೂಲಕ ಪಡೆಯುವ ವಿವಿಧ ಚಟುವಟಿಕೆಗಳ ಪ್ರೋತ್ಸಾಹಧನವನ್ನು ಒಂದು ಮಾಡಿ ಪ್ರತಿ ತಿಂಗಳು 10ರೊಳಗೆ ನೀಡಬೇಕು’ ಎಂದು ಆಗ್ರಹಿಸಿದರು.

‘ಈ‌ಗಾಗಲೇ ನಿಗದಿ ಮಾಡಿರುವ ಕೆಲಸಗಳನ್ನು ಹೊರತುಪಡಿಸಿ, ಹೆಚ್ಚುವರಿ ಕೆಲಸಗಳನ್ನು ನೀಡಬಾರದು. ಆಶಾ ಸುಗಮಕಾರರನ್ನು ಆಶಾ ಸೇವೆಯಿಂದ ಬೇರ್ಪಡಿಸಿ, ಅವರ ಹುದ್ದೆಗೆ ತಕ್ಕಂತೆ ಮಾಸಿಕ ಗೌರವಧನ ಮತ್ತು ಪ್ರಯಾಣ ಭತ್ಯೆ ನಿಗದಿ ಮಾಡಬೇಕು. ಕೋವಿಡ್‌ ವಿಶೇಷ ಭತ್ಯೆಯನ್ನು ಮುಂದುವರಿಸಬೇಕು ’ ಎಂದು ಒತ್ತಾಯಿಸಿದರು.

ADVERTISEMENT

‘ಕೋವಿಡ್ ಮುಂಜಾಗ್ರತಾ ಡೋಸ್‌ ಅನ್ನು ತೆಗೆದುಕೊಳ್ಳುವಂತೆ ಜನರನ್ನು ಮನವೊಲಿಸಲು ಹಾಗೂ ಆಯುಷ್ಮಾನ್‌ ಕಾರ್ಡ್‌ ಮಾಡಿಸಲು ಟಾರ್ಗೆಟ್‌ ನೀಡಲಾಗುತ್ತಿದೆ. ಒತ್ತಡ ಹಾಕಿ ಕೆಲಸ ಮಾಡುವ ಪ್ರವೃತ್ತಿಯನ್ನು ಕೈಬಿಡಬೇಕು’ ಎಂದರು.

ಭಾರತಿ ಶೆಟ್ಟರ್‌, ಭುವನಾ ಬಳ್ಳಾರಿ, ಶಿವಲೀಲಾ ನಿಂಬಕ್ಕನವರ, ನಾಗವೇಣಿ ಪಾನಗಲ್, ಮಂಜುಳಾ ಬಡಿಗೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.