ಹುಬ್ಬಳ್ಳಿ: ವಿಜಯಪುರದ ಚಡಚಣ ಎಸ್‌ಬಿಐ ಬ್ಯಾಂಕ್‌ನಲ್ಲಿ ಕೆಲದಿನಗಳ ಹಿಂದೆ ನಡೆದ 20 ಕೆ.ಜಿ. ಚಿನ್ನಾಭರಣ ದರೋಡೆ ಪ್ರಕರಣದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸರು, ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಿಗೆ ಭೇಟಿ ನೀಡಿ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸುತ್ತಿದ್ದಾರೆ.
ಪಿಎಸ್‌ಐ ನೇತೃತ್ವದಲ್ಲಿ ಒಂದೊಂದು ಠಾಣೆಯಿಂದ ಎರಡು–ಮೂರು ತಂಡಗಳನ್ನು ರಚಿಸಿ, ಬ್ಯಾಂಕ್‌ಗಳ ಅಧಿಕಾರಿ, ಸಿಬ್ಬಂದಿ ಜೊತೆ ಸಭೆ ನಡೆಸಿ, ಜಾಗೃತಿ ಮೂಡಿಸಲಾಗುತ್ತಿದೆ. ಈ ತಂಡವು ಬ್ಯಾಂಕ್‌ಗಳ ಹಣಕಾಸಿನ ವಹಿವಾಟುಗಳ ಮಾಹಿತಿ ಸಂಗ್ರಹಿಸುವ ಜೊತೆಗೆ, ಕೈಗೊಂಡಿರುವ ಸುರಕ್ಷತಾ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಚರ್ಚಿಸುತ್ತಿವೆ. ಅಗತ್ಯವಿದ್ದರೆ, ಸಲಹೆ ಸೂಚನೆಗಳನ್ನು ನೀಡಿ ತುರ್ತಾಗಿ ಕಾರ್ಯರೂಪಕ್ಕೆ ತರುವಂತೆ ಸೂಚಿಸುತ್ತಿದೆ.
ಬ್ಯಾಂಕ್ ಹಾಗೂ ಹಣಕಾಸು ಶಾಖೆಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ಮತ್ತು ಅವುಗಳ ಸುಸ್ಥಿತಿ, ತುರ್ತು ಸಂದರ್ಭದಲ್ಲಿ ಎಚ್ಚರಿಕೆ ಸಂದೇಶ ನೀಡುವ ಕರೆಗಂಟೆ, ಭದ್ರತಾ ಸಿಬ್ಬಂದಿ ಸಂಖ್ಯೆ, ಅವರು ಬಳಸುವ ಶಸ್ತ್ರಾಸ್ತ್ರ ಮತ್ತು ಪರವಾನಗಿ, ತರಬೇತಿ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.
ಈ ವೇಳೆ ಕೆಲವು ಕಡೆ ಆರ್‌ಬಿಐ ನಿಯಮ ಉಲ್ಲಂಘಿಸಿರುವುದು ಕಂಡು ಬಂದಿದೆ. ಕೆಲವು ಬ್ಯಾಂಕ್‌ಗಳಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಅಗತ್ಯಕ್ಕೆ ತಕ್ಕಷ್ಟು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಂಡಿಲ್ಲ. ಭದ್ರತಾ ಸಿಬ್ಬಂದಿ ಇದ್ದರೂ, ಅವರಿಗೆ ಶಸ್ತ್ರಾಸ್ತ್ರ ಬಳಸುವ ತರಬೇತಿಯಿಲ್ಲ. ತುರ್ತು ಸಂದರ್ಭದಲ್ಲಿ ಯಾವ ಕ್ರಮ ಕೈಗೊಳ್ಳಬೇಕು ಎನ್ನುವ ಸಾಮಾನ್ಯ ಜ್ಞಾನವೂ ಅವರಲ್ಲಿ ಇಲ್ಲವಾಗಿದೆ ಎನ್ನುವ ಸಂಗತಿಯನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸರು ಹೇಳುತ್ತಾರೆ.
ಇವುಗಳ ನಡುವೆಯೇ, ಅವಳಿನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಕಳವು, ದರೋಡೆ, ಡಕಾಯಿತಿ ಪ್ರಕರಣಗಳ ವಿವರಗಳನ್ನು ಸಂಗ್ರಹಿಸಿರುವ ಪೊಲೀಸ್ ಕಮಿಷನರ್, ಆರೋಪಿಗಳ ಚಲನವನಲದ ಬಗ್ಗೆ ನಿಗಾ ಇಡುವಂತೆ ಇನ್‌ಸ್ಪೆಕ್ಟರ್‌ಗಳಿಗೆ ಸೂಚಿಸಿದ್ದಾರೆ. ಅವರು ಬಳಸುವ ಸಾಮಾಜಿಕ ಜಾಲತಾಣದ ಮೇಲೂ ಕಣ್ಣಿಟ್ಟು, ಮೊಬೈಲ್ ನಂಬರ್‌ಗಳನ್ನು ಪರಿಶೀಲಿಸಲಾಗುತ್ತಿದೆ. ಕೆಲವರು ರೌಡಿ ಪಟ್ಟಿಯಲ್ಲಿದ್ದು, ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಲ್ಲಿ ನಡೆಯುವ ಅಪರಾಧ ಪ್ರಕರಣದಲ್ಲಿ ಅವರು ಭಾಗಿಯಾಗುತ್ತಿದ್ದಾರೆಯೇ ಎನ್ನುವ ಕುರಿತು ಸಹ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
‘ಜಿಲ್ಲೆಯಲ್ಲಿ ಬಂದೂಕು, ಪಿಸ್ತೂಲ್ ತೋರಿಸಿ ಹಣ ದರೋಡೆ ಮಾಡಿರುವ ಪ್ರಕರಣಗಳು ನಡೆದಿವೆ. ಕೆಲ ತಿಂಗಳ ಹಿಂದೆ ನವನಗರದ ಎಪಿಎಂಸಿ ಆವರಣದಲ್ಲಿರುವ ಕೆನರಾ ಬ್ಯಾಂಕ್‌ನ ಶೆಟರ್ಸ್ ಮುರಿದು ಕಳುವಿಗೆ ಯತ್ನಿಸಲಾಗಿತ್ತು. ಭದ್ರತಾ ಲೋಪವಾದಾಗ ಪೊಲೀಸರನ್ನು ದೂರುವುದು ಸಾಮಾನ್ಯ. ಬ್ಯಾಂಕ್‌ಗಳು ಸೂಕ್ತ ಭದ್ರತೆ ಮಾಡಿಕೊಂಡರೆ ಸಮಸ್ಯೆ ಉದ್ಭವಿಸುವುದಿಲ್ಲ. ಈ ನಿಟ್ಟಿನಲ್ಲಿ ಬ್ಯಾಂಕ್‌ಗಳಿಗೆ ತೆರಳಿ ಅಲ್ಲಿಯ ಭದ್ರತಾ ಸ್ಥಿತಿಗಳನ್ನು ಪರಿಶೀಲಿಸಿ, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚಿಸಲಾಗುತ್ತದೆ’ ಎಂದು ಡಿಸಿಪಿ ಮಹಾನಿಂಗ ನಂದಗಾವಿ ತಿಳಿಸಿದರು.
ಮುಂಜಾಗ್ರತಾ ಕ್ರಮವಾಗಿ ನಮ್ಮ ಸಿಬ್ಬಂದಿ ಬ್ಯಾಂಕ್‌ಗಳಿಗೆ ತೆರಳಿ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆಮಹಾನಿಂಗ ನಂದಗಾವಿ ಡಿಸಿಪಿ
ಸಾವಿರಾರು ಕೋಟಿ ವಹಿವಾಟು!
ಹುಬ್ಬಳ್ಳಿ–ಧಾರವಾಡ ಮಹಾನಗರ ಸೇರಿ ಧಾರವಾಡ ಜಿಲ್ಲೆಯಲ್ಲಿ 12 ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ 381 ಖಾಸಗಿ ಬ್ಯಾಂಕ್‌ಗಳು ಗ್ರಾಮೀಣ ಬ್ಯಾಂಕ್‌ಗಳು ವಿವಿಧೋದ್ಧೇಶ ಸಹಕಾರಿ ಬ್ಯಾಂಕ್‌ಗಳು ಮೈಕ್ರೋ ಫೈನಾನ್ಸ್‌ಗಳು ಕಾರ್ಯನಿರ್ವಹಿಸುತ್ತಿವೆ. ಭಾರತೀಯ ಸ್ಟೇಟ್ ಬ್ಯಾಂಕ್ ಒಂದು ವರ್ಷಕ್ಕೆ ₹2000 ಕೋಟಿಗೂ ಹೆಚ್ಚು ವ್ಯವಹಾರ ನಡೆಸುತ್ತದೆ. ಧಾರವಾಡ ಜಿಲ್ಲೆಯಲ್ಲಿ ಪ್ರತಿವರ್ಷ ಎಲ್ಲ ಬ್ಯಾಂಕ್‌ಗಳಿಂದ ಅಂದಾಜು ₹60000 ಕೋಟಿಗೂ ಹೆಚ್ಚು ವ್ಯವಹಾರ ನಡೆಯುತ್ತವೆ. ಕೆಲವು ಪ್ರಮುಖ ಬ್ಯಾಂಕ್‌ಗಳ ಚೆಸ್ಟ್ ಕರೆನ್ಸಿ ಶಾಖೆಗಳು ನಗರದಲ್ಲಿದ್ದು ವಿವಿಧ ಶಾಖೆಗಳಿಗೆ ಹಾಗೂ ಎಟಿಎಂ ಕೇಂದ್ರಗಳಿಗೆ ಹಣ ರವಾನೆಯಾಗುತ್ತದೆ. 505 ಎಟಿಎಂ ಕೇಂದ್ರಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.