ADVERTISEMENT

ನಾನೇನೂ ಜ್ಯೋತಿಷಿ ಅಲ್ಲ, ಕಾಕತಾಳೀಯವೆಂಬಂತೆ ಹೇಳಿದ್ದು ನಿಜವಾಗುತ್ತದೆ: ಯತ್ನಾಳ್

‘2023ಕ್ಕೆ ಹೊಸ ಶಕ್ತಿಯೊಂದಿಗೆ ಮತ್ತೆ ಬಿಜೆಪಿ ಅಧಿಕಾರಕ್ಕೆ’

​ಪ್ರಜಾವಾಣಿ ವಾರ್ತೆ
Published 10 ಜನವರಿ 2022, 19:44 IST
Last Updated 10 ಜನವರಿ 2022, 19:44 IST
ಶಾಸಕ ಬಸವನಗೌಡ ಪಾಟೀಲ ಯತ್ನಾಳ
ಶಾಸಕ ಬಸವನಗೌಡ ಪಾಟೀಲ ಯತ್ನಾಳ   

ಧಾರವಾಡ: ‘ನಾನೇನೂ ಜ್ಯೋತಿಷಿ ಅಲ್ಲ. ಕಾಕತಾಳೀಯ ಎಂಬಂತೆ ನಾನು ಹೇಳಿದ್ದು ನಿಜವಾಗುತ್ತದೆ. 2023ಕ್ಕೆ ಬಿಜೆಪಿ ಹೊಸ ಶಕ್ತಿಯೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ’ ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ ಭವಿಷ್ಯ ನುಡಿದರು.

ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ‘ಸದ್ಯ ಪಂಚರಾಜ್ಯ ಚುನಾವಣೆ ನಡೆದಿದೆ. ಚುನಾವಣೆಯಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆಗಬಹುದು. ಆದರೆ ಒಟ್ಟಾರೆ ಒಳ್ಳೆಯ ದಿನಗಳು ಬರಲಿವೆ. ನಾನಂತೂ ಯಾವುದೇ ಅಪೇಕ್ಷಿಸುವುದಿಲ್ಲ‘ ಎಂದರು.

ಮುಖ್ಯಮಂತ್ರಿ ಸ್ಥಾನ ಕುರಿತು ಸ್ವಾಮೀಜಿಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿಯಲ್ಲಿ ನನ್ನಷ್ಟು ಅರ್ಹತೆ ಹಾಗೂ ಯೋಗ್ಯತೆ ಯಾರಿಗಿದೆ? ಸಚಿವ ಸಂಪುಟದಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದಕ್ಕೆ ವಾಜಪೇಯಿ ಅವರ ಹಸ್ತಾಕ್ಷರದಲ್ಲಿ ಮೆಚ್ಚುಗೆ ಪತ್ರ ಪಡೆದ ವ್ಯಕ್ತಿ ನಾನು. ದುರ್ದೈವ ಅಂದರೆ ರಾಜಕಾರಣದಲ್ಲಿ ನೇರವಾಗಿ ಮಾತನಾಡಬಾರದು. ಇಲ್ಲಿ ಚಮಚಾಗಿರಿ ಮಾಡಬೇಕು. ನನಗೆ ಅದು ಹಿಡಿಸದ ಕಾರಣ ನಾನು ಹಿಂದುಳಿದಿದ್ದೇನೆ’ ಖಾರವಾಗಿ ಪ್ರತಿಕ್ರಿಯಿಸಿದರು.

ADVERTISEMENT

‘ನಾನು ಅತಿವೃಷ್ಟಿ, ಸಾಮಾಜಿಕ ನ್ಯಾಯದ ಕುರಿತು ಗುಡುಗಿದ್ದೇನೆಯೇ ಹೊರತು, ಮುಖ್ಯಮಂತ್ರಿ ಅಥವಾ ಮಂತ್ರಿ ಮಾಡಿ ಎಂದು ಗುಡುಗಿಲ್ಲ. 2023ರ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಹೈಕಮಾಂಡ್ ಏನೇ ನಿರ್ಣಯ ಕೈಗೊಂಡರೂ ನಾವು ಅದಕ್ಕೆ ಬದ್ಧ‘ ಎಂದು ಹೇಳಿದರು.

‘ಬೆಳಗಾವಿ ಅಧಿವೇಶನವನ್ನು ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ಹಾಳು ಮಾಡಿದೆ. ಸಿದ್ದರಾಮಯ್ಯ ಅವರು ಎಂಟೆಂಟು ತಾಸು ಮಾತನಾಡುತ್ತಾರೆ. ಅವರ ಶಾಸಕರಿಗೂ ಅವಕಾಶ ಕೊಡುವುದಿಲ್ಲ. ಇದು ದೊಡ್ಡ ದುರಂತ. ಅದೇ ಟಿಪ್ಪು ಸುಲ್ತಾನ್ ವರ್ಣನೆ ಮಾಡುತ್ತಾರೆ. ಟಿಪ್ಪು ವರ್ಣನೆಯಲ್ಲೇ ಕಾಂಗ್ರೆಸ್ ಹಾಳಾಗುತ್ತಿದೆ. ಇದೀಗ ಪಾದಯಾತ್ರೆಯಲ್ಲೂ ಇವರ ಬಣ್ಣ ಬಯಲಾಗುತ್ತಿದೆ‘ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.