ADVERTISEMENT

ವಿಧಾನ ಪರಿಷತ್ ಚುನಾವಣೆ: ಪ್ರದೀಪ್ ಶೆಟ್ಟರ್ ಪರ ಬೊಮ್ಮಾಯಿ ಪ್ರಚಾರ

ಧಾರವಾಡ, ಹಾವೇರಿ, ಗದಗ ಜಿಲ್ಲೆಗಳ ಬಿಜೆಪಿ ಪ್ರಮುಖರ ಜೊತೆ ಬೊಮ್ಮಾಯಿ ಸಭೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 14:43 IST
Last Updated 1 ಡಿಸೆಂಬರ್ 2021, 14:43 IST
ಹುಬ್ಬಳ್ಳಿಯಲ್ಲಿ ಬುಧವಾರ ನಡೆದ ಬಿಜೆಪಿ ಪ್ರಮುಖರ ಸಭೆಯಲ್ಲಿ ಪಕ್ಷದ ‌ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ ಕುಮಾರ, ಶಾಸಕ ಜಗದೀಶ ಶೆಟ್ಟರ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಭ್ಯರ್ಥಿ ಪ್ರದೀಪ ಶೆಟ್ಟರ್ ಪಾಲ್ಗೊಂಡಿದ್ದರು
ಹುಬ್ಬಳ್ಳಿಯಲ್ಲಿ ಬುಧವಾರ ನಡೆದ ಬಿಜೆಪಿ ಪ್ರಮುಖರ ಸಭೆಯಲ್ಲಿ ಪಕ್ಷದ ‌ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ ಕುಮಾರ, ಶಾಸಕ ಜಗದೀಶ ಶೆಟ್ಟರ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಭ್ಯರ್ಥಿ ಪ್ರದೀಪ ಶೆಟ್ಟರ್ ಪಾಲ್ಗೊಂಡಿದ್ದರು   

ಹುಬ್ಬಳ್ಳಿ: ನನ್ನ ಕೈ ಬಲಪಡಿಸಲು ವಿಧಾನಪರಿಷತ್‌ ಚುನಾವಣೆಯಲ್ಲಿ ಪ್ರದೀಪ ಶೆಟ್ಟರ್‌ ಅವರನ್ನು ಗೆಲ್ಲಿಸಲು ನೀವೆಲ್ಲರೂ ಶ್ರಮಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಬುಧವಾರ ಬೆಳಿಗ್ಗೆ ನಡೆದ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ಶಾಸಕರ, ಮಾಜಿ ಶಾಸಕರ, ವಿಧಾನ ಪರಿಷತ್‌ ಸದಸ್ಯರ ಮತ್ತು ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು. ಮಧ್ಯಾಹ್ನ ಹಾವೇರಿ ಜಿಲ್ಲೆಯ ಪ್ರಮುಖರ ಜೊತೆಗೂ ಪ್ರತ್ಯೇಕವಾಗಿ ಸಭೆ ನಡೆಸಿದರು.

‘ಇನ್ನೊಬ್ಬ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆದಿದ್ದರೆ ಗೆಲುವು ಸುಲಭವಾಗುತ್ತಿತ್ತು. ನನ್ನ ಕ್ಷೇತ್ರ ಶಿಗ್ಗಾವಿ ವಿಧಾನಸಭಾ ವ್ಯಾಪ್ತಿಯಲ್ಲಿ ನಮ್ಮ ಅಭ್ಯರ್ಥಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮೊದಲ ಪ್ರಾಶಸ್ತ್ಯದ ಮತಗಳು ಬರುವಂತೆ ನೋಡಿಕೊಳ್ಳಬೇಕು. ಇದೇ ನೀವು ನನಗೆ ನೀಡುವ ಗೌರವ’ ಎಂದರು.

ADVERTISEMENT

‘ನಮ್ಮ ಕಾರ್ಯಕರ್ತರು ವಿವಿಧ ಸಂಘ, ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಅನೇಕರ ಜೊತೆ ನಿಕಟ ಸಂಪರ್ಕದಲ್ಲಿದ್ದಾರೆ. ನಿಮ್ಮ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಮ್ಮ ಪಕ್ಷದ ಬೆಂಬಲಿತ ಸದಸ್ಯರ ಮತಗಳನ್ನು ಮೊದಲು ಗಟ್ಟಿ ಮಾಡಿಕೊಳ್ಳಬೇಕು. ಉಳಿದವರ ಮನವೊಲಿಸಬೇಕು’ ಎಂದರು.

‘ಮುಖ್ಯಮಂತ್ರಿಯಾಗಿ ಪ್ರಚಾರಕ್ಕೆ ಹೆಚ್ಚು ಸಮಯ ಕೊಡಲು ಸಾಧ್ಯವಾಗುತ್ತಿಲ್ಲ. ಆದರೂ, ನನ್ನ ಮನಸ್ಸು ಈ ಕ್ಷೇತ್ರದತ್ತಲೇ ಇದೆ. ಹಾವೇರಿ ಜಿಲ್ಲೆಯ ಪ್ರತಿಯೊಬ್ಬರ ಜೊತೆಗೂ ನಾನು ಭಾವನಾತ್ಮಕ ಸಂಬಂಧ ಹೊಂದಿದ್ದೇನೆ. ನಾವೆಲ್ಲರೂ ಅನೇಕ ಬಾರಿ ಜಗಳವಾಡಿದ್ದೇವೆ, ಮತ್ತೆ ಒಂದಾಗಿದ್ದೇವೆ. ಹಾಗೆಯೇ ಎಲ್ಲ ವಿಚಾರಗಳನ್ನು ಬದಿಗಿಟ್ಟು ಈಗ ಒಟ್ಟಿಗೆ ಸಾಗೋಣ. ರಾಜ್ಯದಲ್ಲಿ ಕನಿಷ್ಠ 15 ಸ್ಥಾನಗಳನ್ನು ಗೆಲ್ಲಲು ಕಂಕಣಬದ್ಧರಾಗೋಣ’ ಎಂದರು.

ಸಚಿವರಾದ ಶಂಕರಪಾಟೀಲ ಮುನೇನಕೊಪ್ಪ, ಬಿ.ಸಿ. ಪಾಟೀಲ, ಸಿ.ಸಿ. ಪಾಟೀಲ, ಶಾಸಕರಾದ ಅಮೃತ ದೇಸಾಯಿ, ಸಿ.ಎಂ. ನಿಂಬಣ್ಣವರ, ಬಿಜೆಪಿ ಧಾರವಾಡ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಬಸವರಾಜ ಕುಂದಗೋಳಮಠ, ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ, ಗದಗ ಜಿಲ್ಲಾ ಘಟಕದ ಅಧ್ಯಕ್ಷ ಮೋಹನ ಮಾಳಶೆಟ್ಟಿ, ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ ಕುಮಾರ, ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ವಿಭಾಗ ಪ್ರಭಾರಿ ಲಿಂಗರಾಜ ಪಾಟೀಲ, ರಾಜಕುಮಾರ ಬಸವಾ, ದತ್ತಮೂರ್ತಿ ಕುಲಕರ್ಣಿ ಪಾಲ್ಗೊಂಡಿದ್ದರು.

ಬಿಜೆಪಿ–ಕಾಂಗ್ರೆಸ್‌ ನಡುವೆ ಮಾತ್ರ ಸ್ಪರ್ಧೆ: ಶೆಟ್ಟರ್‌

ಹುಬ್ಬಳ್ಳಿ: ವಿಧಾನಪರಿಷತ್‌ ಚುನಾವಣೆಯಲ್ಲಿ ನೇರ ಸ್ಪರ್ಧೆ ಇರುವುದು ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಹೊರತು; ಬೇರೆ ಯಾರ ಜೊತೆಗೂ ಅಲ್ಲ ಎಂದು ಶಾಸಕ ಜಗದೀಶ ಶೆಟ್ಟರ್‌ ಹೇಳಿದರು.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ‘ಮಲ್ಲಿಕಾರ್ಜುನ ಹಾವೇರಿ ಬಿಜೆಪಿ ಬಂಡಾಯ ಅಭ್ಯರ್ಥಿ ಅಲ್ಲ, ಪಕ್ಷೇತರ ಅಭ್ಯರ್ಥಿಯಷ್ಟೇ. ಅವರ ಸ್ಪರ್ಧೆ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಮ್ಮ ಅಭ್ಯರ್ಥಿ ಪ್ರದೀಪ ಶೆಟ್ಟರ್ ಎಲ್ಲ ಜಿಲ್ಲೆಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಹೆಚ್ಚು ಪಡೆದು ಗೆಲುವು ಸಾಧಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಾತಿ ಲೆಕ್ಕಾಚಾರ ಮುಖ್ಯವಲ್ಲ: ಪ್ರದೀಪ

ಹುಬ್ಬಳ್ಳಿ: ‘ಪರಿಷತ್‌ ಚುನಾವಣೆಯಲ್ಲಿ ಜಾತಿ ಲೆಕ್ಕಾಚಾರದ ಪ್ರಶ್ನೆಯೇ ಬರುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳೇ ನನ್ನ ಗೆಲುವಿಗೆ ಕಾರಣವಾಗಲಿವೆ’ ಎಂದು ಬಿಜೆಪಿ ಅಭ್ಯರ್ಥಿ ಪ್ರದೀಪ ಶೆಟ್ಟರ್‌ ವಿಶ್ವಾಸ ವ್ಯಕ್ತಪಡಿಸಿದರು.

‘ನನಗೆ ಎಲ್ಲ ಜಾತಿಯವರ ಬೆಂಬಲವೂ ಇದೆ. ನಮ್ಮ ಪಕ್ಷಕ್ಕೆ ಕಾರ್ಯಕರ್ತರ ದೊಡ್ಡ ಪಡೆಯೇ ಇದೆ. ಎಲ್ಲರೂ ಬೂತ್‌ ಮಟ್ಟದಿಂದ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದರು.

ಹಿಂದಿನ ಅವಧಿಯಲ್ಲಿ ಹಾವೇರಿ ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡಿದ ಆರೋಪ ಕೇಳಿ ಬರುತ್ತಿದೆಯಲ್ಲ ಎನ್ನುವ ಪ್ರಶ್ನೆಗೆ, ‘ನನಗೆ ಸಿಗುವ ಒಟ್ಟು ಅನುದಾನದಲ್ಲಿ ಶೇ 50ರಷ್ಟನ್ನು ಹಾವೇರಿಗೆ ನೀಡಿದ್ದೇನೆ. ಅಲ್ಲಿಗೆ ಪ್ರಚಾರಕ್ಕೆ ಹೋದಾಗ ಉತ್ತಮ ಸ್ಪಂದನೆ ಸಿಕ್ಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.