ADVERTISEMENT

ಹಣದುರುಪಯೋಗ ಆಗದಂತೆ ಎಚ್ಚರ ವಹಿಸಿ

ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 15:23 IST
Last Updated 19 ಡಿಸೆಂಬರ್ 2019, 15:23 IST
ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಗುರುವಾರ ಗಾಮನಗಟ್ಟಿಯಲ್ಲಿ ಕಾಮಗಾರಿ ಪರಿಶೀಲಿಸಿದರು. ಜಿಲ್ಲಾಧಿಕಾರಿ ದೀಪಾ ಚೋಳನ್‌ ಇದ್ದಾರೆ
ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಗುರುವಾರ ಗಾಮನಗಟ್ಟಿಯಲ್ಲಿ ಕಾಮಗಾರಿ ಪರಿಶೀಲಿಸಿದರು. ಜಿಲ್ಲಾಧಿಕಾರಿ ದೀಪಾ ಚೋಳನ್‌ ಇದ್ದಾರೆ   

ಹುಬ್ಬಳ್ಳಿ: ನೆರೆ ಪರಿಹಾರ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಸಾಕಷ್ಟು ಹಣ ನೀಡಿದೆ. ಇದು ದುರುಪಯೋಗ ಆಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಗರದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಮಾತನಾಡಿದ ಅವರು ‘ನೆರೆಯಿಂದ ಸೂರು ಕಳೆದುಕೊಂಡವರಿಗೆ ರಾಜ್ಯ ಸರ್ಕಾರ ₹5 ಲಕ್ಷ ಪರಿಹಾರ ನಿಡಿದೆ. ಮೊದಲ ಕಂತಿನ ಹಣ ಪಡೆದವರು ಮನೆ ನಿರ್ಮಾಣ ಕಾರ್ಯ ಆರಂಭಿಸಿದ್ದಾರೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಇದಕ್ಕಾಗಿ ನೋಡೆಲ್‌ ಅಧಿಕಾರಿಗಳನ್ನು ನೇಮಿಸಿ ಸ್ಥಳ ಪರಿಶೀಲನೆ ಮಾಡಿಸಬೇಕು’ ಎಂದು ಸೂಚಿಸಿದರು.

‘ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ಯ ಎಂಜಿನಿಯರಿಂಗ್‌ ಮತ್ತು ಪಾಲಿಕೆ ವತಿಯಿಂದ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಎಲ್ಲಿಯೂ ಒಂದೇ ಕಾಮಗಾರಿಗೆ ಎರಡು ಕಡೆ ಅನುದಾನ ಪಡೆಯುವಂತಾಗಬಾರದು. ಈ ನಿಟ್ಟಿನಲ್ಲಿ ಅಧಿಕಾರಗಳು ಹೆಚ್ಚು ಎಚ್ಚರದಿಂದ ಇರಬೇಕು. ಅಂಗನವಾಡಿ, ಶಾಲೆ, ರಸ್ತೆ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಬೇಕು’ ಎಂದು ತಿಳಿಸಿದರು.

ADVERTISEMENT

‘ನೆರೆ ಪರಿಹಾರ ಕಾಮಗಾರಿಗಳ ಬಗ್ಗೆ ಮುಖ್ಯಮಂತ್ರಿಗಳು ಅಧಿಕಾರಿಗಳ ಜೊತೆ ಸಭೆಗಳನ್ನು ನಡೆಸುತ್ತಿದ್ದಾರೆ. ಜಿಲ್ಲೆಯ ಕಾಮಗಾರಿ ಪ್ರಗತಿಯ ಸರಿಯಾದ ಅಂಕಿಅಂಶ ಮಾಹಿತಿ ನೀಡಬೇಕು’ ಎಂದರು.

ಇದಕ್ಕೂ ಮೊದಲು ಅವರು ಅಳ್ನಾವರ, ಮುಗದ, ಕೆಲಗೇರಿ, ನವಲೂರು, ಗಾಮನಗಟ್ಟಿ, ಅಮರಗೋಳ, ತಾಜನಗರ ಸೇರಿದಂತೆ ಇತರೆ ಪ್ರದೇಶಗಳಿಗೆ ಭೇಟಿ ನೀಡಿ ಅಂಗನವಾಡಿ ಹಾಗೂ ಮನೆ ಪುನರ್‌ ನಿರ್ಮಾಣ ಕಾರ್ಯ ಚಟುವಟಿಕೆಗಳನ್ನು ವೀಕ್ಷಿಸಿದರು.

ಸಭೆಯಲ್ಲಿ ಉಪ ವಿಭಾಗಾಧಿಕಾರಿ ಮಹಮದ್ ಜುಬೇರ್, ಪಾಲಿಕೆ ಆಯುಕ್ತ ಸುರೇಶ ಇಟ್ನಾಳ, ಲೋಕೋಪಯೋಗಿ ಇಲಾಖೆ ಕಾರ್ಯನಿವಾಹಕ ಎಂಜಿನಿಯರ್‌ ವಿರೂಪಾಕ್ಷಪ್ಪ ಯಮಕನಮರಡಿ, ಹುಬ್ಬಳ್ಳಿ ತಹಶೀಲ್ದಾರ್‌ ಶಶಿಧರ ಮಾಡ್ಯಾಳ ಸೇರಿದಂತೆ ಅನೇಕ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.