ADVERTISEMENT

ಬೆಳಗಾವಿ ಸ್ಪೋರ್ಟ್ಸ್ ಕ್ಲಬ್‌ಗೆ ಜಯ

ಕೆಎಸ್‌ಸಿಎ ಮೊದಲ ಡಿವಿಷನ್‌ ಕ್ರಿಕೆಟ್‌: ವಿಜಯ ಅಬ್ಬರದ ಶತಕ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2019, 15:09 IST
Last Updated 30 ನವೆಂಬರ್ 2019, 15:09 IST
ವಿಜಯ ಕುಮಾರ ಪಾಟೀಲ
ವಿಜಯ ಕುಮಾರ ಪಾಟೀಲ   

ಹುಬ್ಬಳ್ಳಿ: ವಿಜಯ ಕುಮಾರ ಪಾಟೀಲ ಅವರ ಅಮೋಘ ಶತಕದ ಬಲದಿಂದ ಬೆಳಗಾವಿ ಸ್ಪೋರ್ಟ್ಸ್‌ ಕ್ಲಬ್‌ ತಂಡ, ಮೊದಲ ಡಿವಿಷನ್‌ ಕ್ರಿಕೆಟ್‌ ಟೂರ್ನಿಯ ಶನಿವಾರದ ಪಂದ್ಯದಲ್ಲಿ ಒಂದು ವಿಕೆಟ್‌ನಿಂದ ಭರ್ಜರಿ ಗೆಲುವು ಸಾಧಿಸಿತು.

ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಧಾರವಾಡದ ಎಸ್‌ಡಿಎಂ ಅಕಾಡೆಮಿ ‘ಎ‘ ತಂಡ ಅಜಯ ಪಾಟೀಲ (101) ಮತ್ತು ಪರೀಕ್ಷಿತ್‌ ಒಕ್ಕುಂದ (83) ಅವರ ಉತ್ತಮ ಬ್ಯಾಟಿಂಗ್‌ ನೆರವಿನಿಂದ 50 ಓವರ್‌ಗಳಲ್ಲಿ ಆರು ವಿಕೆಟ್‌ ನಷ್ಟಕ್ಕೆ 290 ರನ್ ಗಳಿಸಿತು.

ಈ ಗುರಿಯ ಎದುರು ದಿಟ್ಟತನದಿಂದ ಹೋರಾಡಿದ ಬೆಳಗಾವಿ 44.5 ಓವರ್‌ಗಳಲ್ಲಿ ಗುರಿ ತಲುಪಿತು. ಕೊನೆಯಲ್ಲಿ ಅಬ್ಬರದ ಬ್ಯಾಟಿಂಗ್‌ ಮಾಡಿದ ವಿಜಯ ಕುಮಾರ 64 ಎಸೆತಗಳಲ್ಲಿ 116 ರನ್‌ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಕ್ಷಯ ಕಟಾಂಬ್ಲೆ (72) ಕೂಡ ನೆರವಾದರು.

ADVERTISEMENT

ಇನ್ನೊಂದು ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಬೆಳಗಾವಿಯ ಯುನಿಯನ್‌ ಜಿಮ್ಖಾನಾ 39.5 ಓವರ್‌ಗಳಲ್ಲಿ 173 ರನ್ ಗಳಿಸಿತು. ಎದುರಾಳಿ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ ’ಎ‘ ತಂಡ 19.3 ಓವರ್‌ಗಳಲ್ಲಿ ಗುರಿ ತಲುಪಿ ಏಳು ವಿಕೆಟ್‌ಗಳ ಗೆಲುವು ಸಾಧಿಸಿತು.

ಬಿಡಿಕೆ ತಂಡದ ಅನಿರುದ್ಧ ಜೋಶಿ 100 ಹಾಗೂ ವೆಂಕಟೇಶ ನಾಗಪುರ 56 ರನ್‌ ಗಳಿಸಿ ಬ್ಯಾಟಿಂಗ್‌ನಲ್ಲಿ ಮಿಂಚಿದರೆ, ಕೃಷ್ಣ ಬಗಾಡಿ ಐದು ವಿಕೆಟ್‌ ಉರುಳಿಸಿ ಎದುರಾಳಿ ತಂಡವನ್ನು ಬೇಗನೆ ಕಟ್ಟಿಹಾಕಿದರು.

ಸಿಸಿಕೆ ಕ್ಲಬ್‌ಗೆ ಸುಲಭ ಗೆಲುವು:

16 ವರ್ಷದ ಒಳಗಿನವರ ಅಂತರ ಕ್ಲಬ್‌ ಕ್ರಿಕೆಟ್‌ ಟೂರ್ನಿಯ ಶನಿವಾರದ ಪಂದ್ಯದಲ್ಲಿ ಧಾರವಾಡದ ಸಿಸಿಕೆ ’ಎ‘ ತಂಡ ಹುಬ್ಬಳ್ಳಿಯ ಅಸ್ರೆ ಫೌಂಡೇಷನ್‌ ಎದುರು ವಿಕೆಟ್‌ಗಳ ಗೆಲುವು ಪಡೆಯಿತು.

ನಗರದ ರೈಲ್ವೆ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿದ ಅಸ್ರೆ 30 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 95 ರನ್‌ ಗಳಿಸಿತು. ಸಿಸಿಕೆ ತಂಡ 11 ಓವರ್‌ಗಳಲ್ಲಿ ಒಂದು ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು. ಈ ತಂಡದ ರಾಜೇಂದ್ರ ಡಂಗನವರ (ಅಜೇಯ 57) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದೇ ತಂಡದ ಪ್ರಣೀತ್‌ ನಾಲ್ಕು ವಿಕೆಟ್‌ ಕಬಳಿಸಿದರು.

ದಿನದ ಇನ್ನೊಂದು ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ ’ಎ‘ ತಂಡ 30 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 149 ರನ್‌ ಗಳಿಸಿತ್ತು. ಎದುರಾಳಿ ಧಾರವಾಡದ ವಿಲಾಸ ಬೇಂದ್ರೆ ಅಕಾಡೆಮಿ 27.5 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು.‌ ಮ್ಯಾಥ್ಯೂ ನಿಲೂಗಲ್‌ (ಅಜೇಯ 86) ತಂಡದ ಗೆಲುವಿಗೆ ನೆರವಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.