ADVERTISEMENT

ವೈದ್ಯ ಸತ್ತೂರಿಗೆ ‘ಅತ್ಯುತ್ತಮ ಸ್ಪೀಕರ್‌‘ ಗೌರವ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2019, 13:24 IST
Last Updated 30 ನವೆಂಬರ್ 2019, 13:24 IST
ನೇಪಾಳದಲ್ಲಿ ನಡೆದ ವೈದ್ಯರ ಸಮ್ಮೇಳನದಲ್ಲಿ ಪ್ರಶಸ್ತಿ ಸ್ವೀಕರಿಸಿದ ಹುಬ್ಬಳ್ಳಿಯ ವೈದ್ಯ ಜಿ.ಬಿ. ಸತ್ತೂರ
ನೇಪಾಳದಲ್ಲಿ ನಡೆದ ವೈದ್ಯರ ಸಮ್ಮೇಳನದಲ್ಲಿ ಪ್ರಶಸ್ತಿ ಸ್ವೀಕರಿಸಿದ ಹುಬ್ಬಳ್ಳಿಯ ವೈದ್ಯ ಜಿ.ಬಿ. ಸತ್ತೂರ   

ಹುಬ್ಬಳ್ಳಿ: ನಗರದ ವೈದ್ಯ ಜಿ.ಬಿ. ಸತ್ತೂರ ಅವರು ಇತ್ತೀಚಿಗೆ ಕಠ್ಮಂಡುವಿನಲ್ಲಿ ನಡೆದ ಹೃದಯ ರಕ್ತನಾಳದ ಕಾಯಿಲೆಗಳ ನಿರ್ವಹಣೆ ಕುರಿತ ಅಂತರರಾಷ್ಟ್ರೀಯ ವೈದ್ಯರ ಸಮ್ಮೇಳನದಲ್ಲಿ ‘ಅತ್ಯುತ್ತಮ ಸ್ಪೀಕರ್‌‘ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅಮೆರಿಕದ ಕೊಲಾರ್ಡೊದ ಎಮಿರ್ಟಸ್‌ ವಿಶ್ವವಿದ್ಯಾಲಯದ ಹೃದಯ-ಎದೆಗೂಡಿನ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಪ್ರೊ. ಫ್ರೆಡ್ರಿಕ್‌ ಗ್ರೋವರ್‌ ಪ್ರಶಸ್ತಿ ಪ್ರದಾನ ಮಾಡಿದರು.

ಅಪಧಮನಿ ಕಾಠಿಣ್ಯದ ಹೃದಯ ಕಾಯಿಲೆ ತಡೆಗಟ್ಟುವಲ್ಲಿ ಜೀವನಶೈಲಿ ನಿರ್ವಹಣೆಯ ಪಾತ್ರ ಮತ್ತು ಆಗ್ನೇಯ ಏಷ್ಯಾದಲ್ಲಿ ಲಿಪಿಡ್ ಹರಡುವಿಕೆ ಹಾಗೂ ನಿರ್ವಹಣೆ ವಿಷಯದ ಕುರಿತು ಸತ್ತೂರ ಅವರು ಉಪನ್ಯಾಸ ನೀಡಿದರು.

ADVERTISEMENT

’ಹೃದ್ರೋಗ ಸಮಸ್ಯೆಯನ್ನು ತಡೆಗಟ್ಟಲು ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು. ದೇಹದ ಕೊಬ್ಬು ಕರಗಿಸಬೇಕು, ಆಹಾರ ಸೇವನೆಯಲ್ಲಿ ಎಚ್ಚರಿಕೆ ವಹಿಸಬೇಕು. ಯೋಗ ಮಾಡುವುದರಿಂದಲೂ ಹೃದ್ರೋಗ ತಡೆಗಟ್ಟಬಹುದು‘ ಎಂದು ಸತ್ತೂರ ಸಲಹೆ ನೀಡಿದರು.

ಸಮಾವೇಶದಲ್ಲಿ 65 ಅಂತರರಾಷ್ಟ್ರೀಯ ಮತ್ತು 55 ನೇಪಾಳದ ವೈದ್ಯರು ಭಾಗಿಯಾಗಿದ್ದರು. ಭಾರತ, ಅಮೆರಿಕ, ಇಂಗ್ಲೆಂಡ್‌, ಸಿಂಗಪುರ, ತೈವಾನ್‌, ಶ್ರೀಲಂಕಾ, ಬಾಂಗ್ಲಾದೇಶ, ರಷ್ಯಾ, ದಕ್ಷಿಣ ಕೊರಿಯಾ, ಹಾಂಗ್‌ಕಾಂಗ್‌, ಮಲೇಷ್ಯಾ, ಅಬುದಾಬಿ ಮತ್ತು ಥಾಯ್ಲೆಂಡ್‌ಗಳಿಂದ ಬಂದಿದ್ದ ವಿಷಯ ಪರಿಣಿತ ವೈದ್ಯರು ಹೃದ್ರೋಗ ಹಾಗೂ ಹೃದಯ ಸ್ಥಂಭನಕ್ಕೆ ಕುರಿತು ವೈದ್ಯಕೀಯ ಲೋಕದಲ್ಲಿ ಆಗುತ್ತಿರುವ ಪ್ರಗತಿಯ ಬಗ್ಗೆ ಮಾಹಿತಿ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.