ಹುಬ್ಬಳ್ಳಿ: ‘ಬಿಜೆಪಿಯವರಿಗೆ ಅಭಿವೃದ್ಧಿ ಎಂಬುದೇ ಗೊತ್ತಿಲ್ಲ. ಸುಳ್ಳನ್ನೇ ನೂರು ಸಲ ಹೇಳಿ ಸತ್ಯವೆಂದು ಬಿಂಬಿಸುವ ಜಾಯಮಾನ ಅವರದ್ದು. ನನ್ನ ಕ್ಷೇತ್ರದಲ್ಲಾಗಿರುವ ಅಭಿವೃದ್ಧಿ ಕಾರ್ಯಗಳಿಗೆ, ಬಿಜೆಪಿಯವರ ಪ್ರಮಾಣಪತ್ರ ಬೇಕಿಲ್ಲ’ ಎಂದು ಕಾಂಗ್ರೆಸ್ ಶಾಸಕ ಪ್ರಸಾದ ಅಬ್ಬಯ್ಯ ವಾಗ್ದಾಳಿ ನಡೆಸಿದರು.
ಪೂರ್ವ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಾಗಿಲ್ಲ ಎಂದು ಆರೋಪಿಸಿ ಕ್ಷೇತ್ರದ ಬಿಜೆಪಿ ಮುಖಂಡರು ನಗರದಲ್ಲಿ ನಡೆಸಿದ ಪ್ರತಿಭಟನೆ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದ ಅವರು, ‘ವೀರಭದ್ರಪ್ಪ ಹಾಲಹರವಿ ಅವರು ಬಿಜೆಪಿಯಿಂದ ಶಾಸಕರಾಗಿದ್ದಾಗ, ಯಾವುದೇ ಕೆಲಸ ಮಾಡದೆ ನಿದ್ರೆ ಮಾಡಿ ಮನೆಗೆ ಹೋದರು. ಈಗ ಆಧಾರರಹಿತ ಆರೋಪ ಮಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.
‘ಎರಡು ಸಲ ಶಾಸಕನಾಗಿರುವ ನಾನು, ಕಾಂಗ್ರೆಸ್ ಮತ್ತು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದಿದ್ದೇನೆ. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಕೋವಿಡ್ ನೆಪದಲ್ಲಿ ಕ್ಷೇತ್ರಕ್ಕೆ ಅನುದಾನ ಕೊಡದೆ, ತಮಗೆ ಬೇಕಾದವರಿಗೆ ಮಾತ್ರ ಕೊಟ್ಟಿತು. ಹಲವು ಕೆಲಸಗಳಿಗೆ ತಡೆಯೊಡ್ಡಿತು. ಅನುದಾನ ತಡೆ ಹಿಡಿಯಿತು. ಕ್ಷೇತ್ರದ ಅಭಿವೃದ್ಧಿಯ ಕಾಳಜಿ ಇದ್ದವರು ಈ ಬಗ್ಗೆ ಯಾಕೆ ದನಿ ಎತ್ತಲಿಲ್ಲ’ ಎಂದು ಪ್ರಶ್ನಿಸಿದರು.
‘ಸೋನಿಯಾಗಾಂಧಿ ನಗರ, ಎಸ್.ಎಂ. ಕೃಷ್ಣಾ ನಗರ, ಮೇದಾರ ಓಣಿಯಲ್ಲಿ ಆಸ್ಪತ್ರೆ ಕಟ್ಟಿಸಿದ್ದೇನೆ. ಉಳಿದ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ. 4 ಆಂಬುಲೆನ್ಸ್ ಕೊಟ್ಟಿದ್ದೇನೆ. ಹಳೇ ಹುಬ್ಬಳ್ಳಿಯ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಅಗತ್ಯವಿದ್ದ ₹4.5 ಕೋಟಿ ಅನುದಾನವನ್ನು ಸರ್ಕಾರ ಕೊಡಲಿಲ್ಲ. ಇದೀಗ, ಪಾಲಿಕೆ ಅನುದಾನದಿಂದ ಕೆಲಸ ಮಾಡಲಾಗುತ್ತಿದೆ’ ಎಂದರು.
‘ಕ್ಷೇತ್ರದಲ್ಲಿ ಆಸ್ಪತ್ರೆ ಕಟ್ಟಿಸಿಲ್ಲ ಎನ್ನುವ ಡಾ. ಕ್ರಾಂತಿಕಿರಣ ಅವರ ಹಿನ್ನೆಲೆ ಬೇರೆಯೇ ಇದೆ. ನನಗೂ ಆತ್ಮೀಯರಾಗಿದ್ದ ಅವರು ಗೌಡ ಸಮುದಾಯಕ್ಕೆ ಸೇರಿದವನು ಎಂದು ಹೇಳಿಕೊಂಡಿದ್ದರು. ಕ್ಷೇತ್ರಕ್ಸೆ ಮೀಸಲು ಘೋಷಣೆಯಾದ ಬಳಿಕ, ನಾನೂ ಎಸ್ಸಿ ಚಲವಾದಿ ಎಂದು ಹೇಳಿಕೊಂಡು, ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.
‘ಪಾಲಿಕೆ ಚುನಾವಣೆಯಲ್ಲಿ ಎಐಎಂಐಎಂ ಪಕ್ಷದಿಂದ ಕಾಂಗ್ರೆಸ್‌ಗೆ ಸ್ವಲ್ಪ ಹೊಡೆತ ಬಿದ್ದಿದ್ದು ನಿಜ. ಈಗ ಆ ಪಕ್ಷದಿಂದ ಅನುಭವಿಸಿರುವುದು ಸಾಕಾಗಿದೆ. ನಾವು ನಿಮಗೇ ಬೆಂಬಲ ನೀಡುತ್ತೇವೆ ಎಂದು ಮುಸ್ಲಿಂ ಸಮುದಾಯದವರು ಹೇಳುತ್ತಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ತಮ್ಮ ಅವಧಿಯ ಅಭಿವೃದ್ಧಿಯ ಪಟ್ಟಿ ಕೊಡಲಿ’
‘ಕ್ಷೇತ್ರದ ಒಂದು ಸಮುದಾಯದ ವಿರುದ್ಧ ಇದ್ದೇನೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿರುವ ಹಾಲಹರವಿ, ಬಾಬು ಜಗಜೀವನ ರಾಮ್ ಭವನ ನಿರ್ಮಾಣ ವಿಳಂಬದ ಬಗ್ಗೆ ಹೇಳುತ್ತಿದ್ದಾರೆ. ₹9 ಕೋಟಿ ವೆಚ್ಚದ ಭವನ ನಿರ್ಮಾಣ ಕೆಲಸ ಬಹುತೇಕ ಪೂರ್ಣಗೊಂಡಿದೆ. ಆರಂಭದಲ್ಲಿ ಆಡಳಿತಾತ್ಮಕ ಅನುಮೋದನೆ ಇಲ್ಲದಿದ್ದರಿಂದ ₹3.5 ಕೋಟಿ ಅನುದಾನ ಬಿಡುಗಡೆಯನ್ನು ಬಿಜೆಪಿ ಸರ್ಕಾರ ತಡೆ ಹಿಡಿದಿದೆ. ಸಚಿವರು, ಸಭೆಗಳಲ್ಲಿ ಗಲಾಟೆ ಮಾಡಿದ ಬಳಿಕ, 2022ರಲ್ಲಿ ಆಡಳಿತಾತ್ಮಕ ಅನುಮೋದನೆ ಕೊಟ್ಟರು. ಭವನ ಸದ್ಯದಲ್ಲೇ ಪೂರ್ಣಗೊಳ್ಳಲಿದೆ. ಕ್ಷೇತ್ರದಲ್ಲಿ ಒಟ್ಟು 2,200 ಮನೆಗಳ ನಿರ್ಮಾಣವಾಗುತ್ತಿದ್ದು, ಇದರಲ್ಲಿ 600 ಮನೆಗಳು ಹಸ್ತಾಂತರಕ್ಕೆ ಸಿದ್ಧವಾಗಿವೆ. ನನ್ನ ಕೆಲಸವನ್ನು ಅದೇ ಸಮುದಾಯ ಮೆಚ್ಚಿಕೊಂಡಿದೆ. ಹಾಲಹರವಿ ಅವರು ತಮ್ಮ ಅವಧಿಯ ಅಭಿವೃದ್ಧಿ ಕೆಲಸಗಳ ಪಟ್ಟಿ ಕೊಡಲಿ’ ಎಂದು ಅಬ್ಬಯ್ಯ ಸವಾಲು ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.