ADVERTISEMENT

ಅಲ್ಪಸಂಖ್ಯಾತರ ವೋಟರ್ ಐಡಿ ಖರೀದಿಸಲು ಬಿಜೆಪಿ ಹುನ್ನಾರ

ಜಿಲ್ಲಾ ಮಟ್ಟದ ಮಹಿಳಾ ಕಾಂಗ್ರೆಸ್ ಸಮಾವೇಶದಲ್ಲಿ ವಿನಯ ಕುಲಕರ್ಣಿ ಗಂಭೀರ ಆರೋಪ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 17:03 IST
Last Updated 10 ಏಪ್ರಿಲ್ 2019, 17:03 IST
ಧಾರವಾಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಂಡ ಕಾಂಗ್ರೆಸ್ ಹಿರಿಯ ನಾಯಕಿ ಮಾರ್ಗರೇಟ್ ಆಳ್ವ ಹಾಗೂ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಪರಸ್ಪರ ಮಾತುಕತೆಯಲ್ಲಿ ತೊಡಗಿದ್ದ ದೃಶ್ಯ– ಪ್ರಜಾವಾಣಿ ಚಿತ್ರ
ಧಾರವಾಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಂಡ ಕಾಂಗ್ರೆಸ್ ಹಿರಿಯ ನಾಯಕಿ ಮಾರ್ಗರೇಟ್ ಆಳ್ವ ಹಾಗೂ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಪರಸ್ಪರ ಮಾತುಕತೆಯಲ್ಲಿ ತೊಡಗಿದ್ದ ದೃಶ್ಯ– ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಅಲ್ಪಸಂಖ್ಯಾತರ ವೋಟರ್ ಐಡಿ ಖರೀದಿಸಲು ಬಿಜೆಪಿ ಹುನ್ನಾರ ನಡೆಸಿದೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಗಂಭೀರ ಆರೋಪ ಮಾಡಿದರು.

ನಗರದಲ್ಲಿ ಬುಧವಾರ ನಡೆದ ಧಾರವಾಡ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಸಮಾವೇಶದಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ಮತಗಳ ಮೇಲೆ ಬಿಜೆಪಿಯವರು ಕಣ್ಣು ಹಾಕಿದ್ದಾರೆ. ₹ 500 ನೀಟಿ ವೋಟರ್ ಐಡಿ ಖರೀದಿಸಿ ಚುನಾವಣೆ ಮುಗಿದ ನಂತರ ಮರಳಿಸಲು ಸಂಚು ಮಾಡಿದ್ದಾರೆ. ಚುನಾವಣೆಯಲ್ಲಿ ಜಯಗಳಿಸಲು ಈ ರೀತಿ ವಾಮವಾರ್ಗ ಹಿಡಿದಿದ್ದಾರೆ. ಜನರು ಹಾಗೂ ಕಾರ್ಯಕರ್ತರು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು’ ಎಂದರು.

‘ಬಸವಣ್ಣನವರು ಮೊದಲು ಮಹಿಳಾ ಸಮಾನತೆಯನ್ನು ಸಾರಿದರು. ಆ ನಂತರ ಸಂವಿಧಾನದ ಮೂಲಕ ಅಂಬೇಡ್ಕರ್ ಮಹಿಳೆಯರಿಗೆ ಸಮಾನತೆ ನೀಡಿದರು. ಆ ಸಂವಿಧಾನವನ್ನು ಜಾರಿ ಮಾಡಿದ ಕಾಂಗ್ರೆಸ್ ಮಹಿಳಾ ಸಮಾನತೆ ನೀಡಿತು. ಪಕ್ಷದ ಕಾರ್ಯಕರ್ತರು ಬೂತ್‌ ಮಟ್ಟದಲ್ಲಿ ಕೆಲಸ ಮಾಡಬೇಕು. ಪ್ರತಿಯೊಬ್ಬರು ಹತ್ತು ಮನೆಗಳ ಜವಾಬ್ದಾರಿ ವಹಿಸಿಕೊಂಡು, ಆ ಎಲ್ಲ ಮನೆಯವರ ಮತಗಳು ಕಾಂಗ್ರೆಸ್‌ಗೆ ಹಾಕಿಸಬೇಕು ಎಂದು ಅವರು ಮನವಿ ಮಾಡಿದರು.

ADVERTISEMENT

ಮೋದಿ ಆಡಳಿತಕ್ಕೆ ಬರುವ ಮೊದಲು ದೇಶದ ಸಾಲದ ಪ್ರಮಾಣ ₹49 ಲಕ್ಷ ಕೋಟಿ ಇತ್ತು, ಆದರೆ ಐದೇ ವರ್ಷದಲ್ಲಿ ಸಾಲದ ಪ್ರಮಾಣ 80 ಲಕ್ಷ ಕೋಟಿಗೆ ಏರಿಕೆಯಾಗಿದೆ. ಉದ್ಯಮಿಗಳ ಸಾವಿರಾರು ಕೋಟಿ ರೂಪಾಯಿಯನ್ನು ಮೋದಿ ಮನ್ನಾ ಮಾಡಿದ್ದಾರೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ದೂರಿದರು.

ಬಿಜೆಪಿಯವರು ವೋಟ್ ಕೇಳಲು ಬಂದಾಗ ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ₹ 443 ಇದ್ದ ಸಿಲಿಂಡರ್ ಬೆಲೆ ಈಗ ₹ 930 ಆಗಲು ಕಾರಣ ಏನು ಎಂದು ಮಹಿಳೆಯರು ಪ್ರಶ್ನಿಸಬೇಕು ಎಂದು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ ಹೇಳಿದರು.

ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ತಾರಾದೇವಿ ವಾಲಿ, ಮುಖಂಡರಾದ ವೀರಣ್ಣ ಮತ್ತೀಕಟ್ಟಿ, ಎನ್‌.ಎಚ್‌. ಕೋನರಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.