ADVERTISEMENT

ಸಂಸದ ಸುರೇಶ್ ವಿರುದ್ಧ ಬಿಜೆಪಿ ಪ್ರತಿಭಟನೆ

ಕಾಂಗ್ರೆಸ್‌ನ ಗೂಂಡಾ ವರ್ತನೆಗೆ ತಕ್ಕ ಪಾಠ ಕಲಿಸುವ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 8:35 IST
Last Updated 4 ಜನವರಿ 2022, 8:35 IST
ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಂಗಳವಾರ ಮಹಾನಗರ ಬಿಜೆಪಿ ಘಟಕದಿಂದ ಸಂಸದ ಡಿ.ಕೆ. ಸುರೇಶ್ ವಿರುದ್ಧ ಪ್ರತಿಭಟನೆ ನಡೆಯಿತು
ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಂಗಳವಾರ ಮಹಾನಗರ ಬಿಜೆಪಿ ಘಟಕದಿಂದ ಸಂಸದ ಡಿ.ಕೆ. ಸುರೇಶ್ ವಿರುದ್ಧ ಪ್ರತಿಭಟನೆ ನಡೆಯಿತು   

ಹುಬ್ಬಳ್ಳಿ: ರಾಮನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಅವರು, ಸಚಿವ ಸಿ.ಎನ್. ಅಶ್ವತ್ಥ ನಾರಾಯಣ ಅವರ ಭಾಷಣಕ್ಕೆ ಅಡ್ಡಿಪಡಿಸಿ ಗೂಂಡಾ ವರ್ತನೆ ತೋರಿದ್ದಾರೆ ಎಂದು ಆರೋಪಿಸಿ, ಮಹಾನಗರ ಬಿಜೆಪಿ ಘಟಕದಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.

ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಜಮಾಯಿಸಿದ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಸಂಸದ ಸುರೇಶ್ ಹಾಗೂ ಅವರ ಸಹೋದರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಘೋಷಣೆ ಕೂಗಿದರು. ಇಬ್ಬರ ಭಾವಚಿತ್ರಗಳನ್ನು ತುಳಿದು, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾತನಾಡಿ, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲೇ ಸುರೇಶ್ ಅವರು ಸಚಿವ ಅಶ್ವತ್ಥ ನಾರಾಯಣ ಅವರ ಭಾಷಣಕ್ಕೆ ಅಡ್ಡಿಪಡಿಸಿರುವುದು, ಕಾಂಗ್ರೆಸ್‌ನ ಗೂಂಡಾ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ’ ಎಂದು ಟೀಕಿಸಿದರು.

ADVERTISEMENT

‘ಸಂವಿಧಾನ ಶಿಲ್ಫಿ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣದ ಕಾರ್ಯಕ್ರಮದಲ್ಲಿ ಸುರೇಶ್ ಈ ರೀತಿ ನಡೆದುಕೊಂಡಿರುವುದು ಮಹಾನ್ ವ್ಯಕ್ತಿಗಳಿಗೆ ಮಾಡಿದ ಅವಮಾನವಾಗಿದೆ. ಕಾರ್ಯಕ್ರಮವನ್ನು ಹಾಳುಗೆಡಿಸುವ ಉದ್ದೇಶದಿಂದಲೇ ಇಂತಹ ವರ್ತನೆಯನ್ನು ತೋರಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿರುವ ಕಾಂಗ್ರೆಸ್, ರಾಜ್ಯದಲ್ಲಿ ಗಲಭೆಗಳನ್ನು ಸೃಷ್ಟಿಸಲು ಯತ್ನಿಸುತ್ತಿದೆ. ಅದಕ್ಕಾಗಿ, ಪಕ್ಷದ ನಾಯಕರು ಗೂಂಡಾ ಪ್ರವೃತ್ತಿ ತೋರುತ್ತಿದ್ದಾರೆ. ಇಂತಹ ವರ್ತನೆಗಳನ್ನು ಬಿಜೆಪಿ ಸಹಿಸುವುದಿಲ್ಲ. ಬದಲಿಗೆ ತಕ್ಕ ಪಾಠ ಕಲಿಸಲಿದೆ’ ಎಂದು ಎಚ್ಚರಿಕೆ ನೀಡಿದರು.

ಧಾರವಾಡ ವಿಭಾಗ ಪ್ರಭಾರಿ ಹಾಗೂ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ದತ್ತಮೂರ್ತಿ ಕುಲಕರ್ಣಿ, ತಿಪ್ಪಣ್ಣ ಮಜ್ಜಗಿ, ಜಿಲ್ಲಾ ವಕ್ತಾರ ರವಿ ನಾಯಕ, ಚಂದ್ರಶೇಖರ ಗೋಕಾಕ್, ರಂಗಾ ಬದ್ದಿ, ಸಿದ್ದು ಮೊಗಲಿಶೆಟ್ಟರ, ಬಸವರಾಜ ಅಮ್ಮಿನಬಾವಿ, ವಿರುಪಾಕ್ಷ ಗೋಪಾಲ ಬದ್ದಿ, ಜಗದೀಶ ಬುಳ್ಳಾನವರ, ಶಿವಾನಂದ ಮುತ್ತಣ್ಣವರ, ಅವಿನಾಶ ಹರಿವಾಣ, ಸುಭಾಷ ಅಂಕಲಕೋಟಿ, ಅಶೋಕ ವಾಲ್ಮೀಕಿ, ಪ್ರಶಾಂತ ಹಾವಣಗಿ, ರಾಜು ಕಾಳೆ, ಹನುಮಂತಪ್ಪ ದೊಡ್ಡಮನಿ, ಕೃಷ್ಣಾ ಗಂಡಗಾಳೇಕರ, ಲಕ್ಷ್ಮೀಕಾಂತ ಘೋಡಕೆ, ರಾಜು ಕೋರ್ಯಾನಮಠ, ಅನೂಪ ಬಿಜವಾಡ, ಉಮೇಶ ದುಶಿ, ಮುರಗೇಶ ಹೊರಡಿ, ಸೀಮಾ ಲದ್ವಾ, ವಿಜಯಲಕ್ಷ್ಮಿ ತಿಮ್ಮೊಲಿ, ಉಮಾ ಮುಕುಂದ, ಅಕ್ಕಮಹಾದೇವಿ ಹೆಗಡೆ, ಸಂಗೀತಾ ಇಜಾರದ, ಸವಿತಾ ಚವ್ಹಾಣ, ತಾರಾಮತಿ ವಾಶಪ್ಪನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.