ADVERTISEMENT

ಬಿಜೆಪಿ ‘ಜನಾಕ್ರೋಶ ರ‍್ಯಾಲಿ’ ಏಪ್ರಿಲ್ 16ರಂದು ಹಾಗೂ ಹುಬ್ಬಳ್ಳಿಗೆ: ಪಿ. ರಾಜೀವ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 13:56 IST
Last Updated 10 ಏಪ್ರಿಲ್ 2025, 13:56 IST
<div class="paragraphs"><p>ಪಿ. ರಾಜೀವ</p></div>

ಪಿ. ರಾಜೀವ

   

ಹುಬ್ಬಳ್ಳಿ: ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಭೇಟಿ ನೀಡಿ 100 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಪಕ್ಷದ ವತಿಯಿಂದ ಆಯೋಜಿಸಿರುವ ‘ಭೀಮ ಹೆಜ್ಜೆ–100ರ ಸಂಭ್ರಮ’ ರಥಯಾತ್ರೆಯು ಇದೇ ತಿಂಗಳ 13ರಂದು ಹಾಗೂ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ‘ಜನಾಕ್ರೋಶ ರ‍್ಯಾಲಿ’ ಇದೇ ತಿಂಗಳ 16ರಂದು ಹಾಗೂ ಹುಬ್ಬಳ್ಳಿಗೆ ಪ್ರವೇಶಿಸಲಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ ಹೇಳಿದರು.

ಇಲ್ಲಿನ ಅರವಿಂದ ನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎರಡೂ ರ‍್ಯಾಲಿಗಳಿಗೆ ಸಾವಿರಾರು ಜನರು ಪಾಲ್ಗೊಳ್ಳಲಿದ್ದಾರೆ. ರಾಜ್ಯ ಮಟ್ಟದ ನಾಯಕರು ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

ADVERTISEMENT

ಬೆಳಗಾವಿಯಲ್ಲಿ ಮಹಾತ್ಮಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್‌ ಅಧಿವೇಶನ ನಡೆದು 100 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸರ್ಕಾರ ಎರಡು ದಿನ ಅದ್ದೂರಿ ಕಾರ್ಯಕ್ರಮ ಆಯೋಜಿಸಿತ್ತು. ಅದೇ ರೀತಿ, ಅಂಬೇಡ್ಕರ್‌ ಅವರು ನಿಪ್ಪಾಣಿಗೆ ಭೇಟಿ ನೀಡಿದ್ದನ್ನು ಸ್ಮರಣೀಯವಾಗಿಸಲು ಸರ್ಕಾರಿ ಕಾರ್ಯಕ್ರಮವಾಗಿ ಅದ್ದೂರಿಯಾಗಿ ಆಚರಿಸಬೇಕೆಂದು ಪಕ್ಷದ ನಾಯಕಿ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಒತ್ತಾಯಿಸಿದ್ದರು. ಆದರೆ ರಾಜ್ಯದ ಕಾಂಗ್ರೆಸ್‌ ಸರ್ಕಾರ ಕಡೆಗಣಿಸಿತು. ಅದಕ್ಕಾಗಿ ಬಿಜೆಪಿ ವತಿಯಿಂದ ‘ಭೀಮ ಹೆಜ್ಜೆ– 100ರ ಸಂಭ್ರಮ’ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

‘ಈ ರಥಯಾತ್ರೆಗೆ ಬೆಂಗಳೂರಿನಲ್ಲಿ ಏ.11ರಂದು ಚಾಲನೆ ನೀಡಲಾಗುವುದು. ನಂತರ ವಿವಿಧ ಜಿಲ್ಲೆಗಳ ಮೂಲಕ ಏ.13ರಂದು ಹುಬ್ಬಳ್ಳಿಗೆ ಆಗಮಿಸಲಿದೆ. ನಂತರ ಏ.15ರಂದು ನಿಪ್ಪಾಣಿಯಲ್ಲಿ ಕೊನೆಗೊಳ್ಳಲಿದೆ. ಸಮಾರೋಪ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೇರಿದಂತೆ ವಿವಿಧ ನಾಯಕರು ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

ಜನಾಕ್ರೋಶ ರ‍್ಯಾಲಿ:

ಅಧಿಕಾರಕ್ಕೆ ಬಂದು ಕೇವಲ 2 ವರ್ಷಗಳಲ್ಲಿಯೇ ರಾಜ್ಯದ  ಕಾಂಗ್ರೆಸ್ ಸರ್ಕಾರ ದಲಿತರು, ರೈತರು ಹಾಗೂ ಜನಸಾಮಾನ್ಯರ ಆಕ್ರೋಶಕ್ಕೆ ಗುರಿಯಾಗಿದೆ. ಕಾಂಗ್ರೆಸ್‌ ಸರ್ಕಾರದ ದುರಾಡಳಿತ ಹಾಗೂ ಬೆಲೆ ಏರಿಕೆ ಖಂಡಿಸಿ ರಾಜ್ಯದಾದ್ಯಂತ ಜನಾಕ್ರೋಶ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಗಣತಿ ವಿಷಯವನ್ನು  ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಮೇಲೆ ಭ್ರಷ್ಟಾಚಾರ ಆರೋಪ ಬಂದಾಗ ಜಾತಿ ಗಣತಿಯ ವಿಷಯವನ್ನು ಮುನ್ನೆಲೆಗೆ ತರುತ್ತಿದ್ದಾರೆ. ಏಳು ವರ್ಷ ಮುಖ್ಯಮಂತ್ರಿಯಾಗಿದ್ದರೂ ಇದುವರೆಗೆ ಏಕೆ ಜಾತಿ ಗಣತಿ ವರದಿ ಬಿಡುಗಡೆ ಮಾಡಿಲ್ಲ ಎಂದು ಅವರು ಪ್ರಶ್ನಿಸಿದರು.

‘ವೈಜ್ಞಾನಿಕ ಹಾಗೂ ವಸ್ತುನಿಷ್ಠ ಜಾತಿ ಗಣತಿ ಪರವಾಗಿ ಬಿಜೆಪಿ ಇದೆ. ನಾವು ಜಾತಿ ಗಣತಿ ವಿರೋಧಿ ಅಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ಈ ಹೋರಾಟಗಳು, ರ‍್ಯಾಲಿಗಳು ಬಿಜೆಪಿ ಪಕ್ಷದ ಸಂಘಟನೆ ವತಿಯಿಂದ ಮಾಡಲಾಗುತ್ತಿದೆ. ಇದಕ್ಕೂ ಜೆಡಿಎಸ್‌ ಮೈತ್ರಿಗೂ ಸಂಬಂಧವಿಲ್ಲ. ಅವರು ಇದರಲ್ಲಿ ಪಾಲ್ಗೊಳ್ಳಲ್ಲ. ಎನ್‌ಡಿಎ ಮೈತ್ರಿಕೂಟ ವಿಷಯ ಬಂದಾಗ ನಾವು ಮಿತ್ರಪಕ್ಷಗಳು, ಇದರ ಹೊರತಾಗಿ ಪಕ್ಷದ ಸಂಘಟನೆಯಲ್ಲಿ ನಾವು ಸ್ವತಂತ್ರರು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.