ಹುಬ್ಬಳ್ಳಿ: ಒಬ್ಬ ವ್ಯಕ್ತಿ ಒಂದು ಸಲ ರಕ್ತದಾನ ಮಾಡಿದರೆ, ಮೂರು ಜೀವಗಳನ್ನು ಉಳಿಸಬಹುದು ಎಂಬ ಮಾತಿದೆ. ಆದರೆ, ತಿಳಿವಳಿಕೆ ಕೊರತೆ ಮತ್ತು ಅಪನಂಬಿಕೆ ಕಾರಣ ಹಲವರು ರಕ್ತದಾನ ಮಾಡಲು ಹಿಂಜರಿಯುತ್ತಾರೆ. ಇದರ ಪರಿಣಾಮ ಅಗತ್ಯ ಇರುವವರಿಗೆ ನಿರೀಕ್ಷಿತ ಪ್ರಮಾಣದಷ್ಟು ರಕ್ತ ಲಭ್ಯವಾಗುತ್ತಿಲ್ಲ.
ಅಪಘಾತ, ಕಿಡ್ನಿ ವೈಫಲ್ಯ, ಕ್ಯಾನ್ಸರ್ ರೋಗಿಗಳಿಗೆ, ಗರ್ಭಿಣಿಯರಿಗೆ, ಥಲೆಸ್ಸಿಮಿಯಾ ಬಾಧಿತರು, ತುರ್ತು ಸಂದರ್ಭಗಳಲ್ಲಿ ರಕ್ತದ ಅಗತ್ಯವಿರುತ್ತದೆ. ಇದಕ್ಕೆ ಪೂರಕವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಶಾಲಾ–ಕಾಲೇಜುಗಳಲ್ಲಿ ರಕ್ತದಾನದ ಮಹತ್ವ ತಿಳಿಸುವ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 778 ರಕ್ತದಾನ ಶಿಬಿರಗಳ ಮೂಲಕ 18,784 ಯುನಿಟ್ ರಕ್ತ ಸಂಗ್ರಹಿಸಲಾಗಿದೆ.
‘ಜಿಲ್ಲಾಸ್ಪತ್ರೆ ಹಾಗೂ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಕೆಎಂಸಿ–ಆರ್‌ಐ) ರೋಗಿಗಳ ಪ್ರಮಾಣ ಹೆಚ್ಚಾಗಿರುವುದರಿಂದ ರಕ್ತದ ಬೇಡಿಕೆ ಹೆಚ್ಚಿರುತ್ತದೆ. ಜಿಲ್ಲೆಯ ಪ್ರಮುಖ 12 ರಕ್ತಕೇಂದ್ರಗಳ ಸಹಯೋಗದೊಂದಿಗೆ ರಕ್ತ ಪೂರೈಸಲಾಗುತ್ತಿದೆ. ಆಸಕ್ತರು ಬೇರೆ ಬೇರೆ ಸಂದರ್ಭಗಳಲ್ಲಿ ರಕ್ತದಾನ ಶಿಬಿರ ಆಯೋಜಿಸಿದ್ದರೆ, ಇಲಾಖೆಯಿಂದ ವಾಹನ ಒಯ್ದು, ರಕ್ತ ಸಂಗ್ರಹಿಸಲಾಗುತ್ತದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಸ್.ಎಂ.ಹೊನಕೇರಿ ತಿಳಿಸಿದರು.
‘2023ರಲ್ಲಿ ಕಿಮ್ಸ್‌ನಲ್ಲಿ 18,942 ಯುನಿಟ್ ರಕ್ತ ಸಂಗ್ರಹಿಸಲಾಗಿದ್ದು, 16,961 ಯುನಿಟ್ ಪೂರೈಸಲಾಗಿತ್ತು. 2024ರಲ್ಲಿ 25,218 ಯುನಿಟ್ ರಕ್ತ ಸಂಗ್ರಹಿಸಲಾಗಿದ್ದು, 23,903 ಯುನಿಟ್ ರಕ್ತ ಪೂರೈಕೆ ಮಾಡಲಾಗಿತ್ತು.2025ರಲ್ಲಿ ಇಲ್ಲಿಯವರೆಗೆ 9,799 ಯುನಿಟ್ ರಕ್ತ ಸಂಗ್ರಹವಾಗಿದ್ದು, 11,794 ಯುನಿಟ್ ರಕ್ತ ಪೂರೈಸಲಾಗಿದೆ’ ಎಂದು ಕೆಎಂಸಿ–ಆರ್‌ಐ ರಕ್ತಕೇಂದ್ರದ ಮುಖ್ಯಸ್ಥೆ ಡಾ.ಸುನಿತಾ ವೆರ್ಣೆಕರ್ ತಿಳಿಸಿದರು.
ಹುಬ್ಬಳ್ಳಿಯ ಸುಚಿತ್ ಅಂಗಡಿ ‘ಸಂವೃಕ್ಷ’ ಹಾಗೂ ‘ರೆವಲ್ಯೂಷನ್ ಮೈಂಡ್ಸ್’ ನಾಯಕ ವಿನಾಯಕ ಜೋಗಾರಶೆಟ್ಟರ್ ‘ಮೈ ಸಿಟಿ, ಮೈ ಡ್ಯೂಟಿ’ ಎಂಬ ವಾಟ್ಸ್‌ಆ್ಯಪ್ ಗುಂಪು ರಚಿಸಿಕೊಂಡು, ರಕ್ತದಾನಿಗಳ ಬಗ್ಗೆ ಮಾಹಿತಿ ನೀಡುತ್ತಾರೆ. ರಕ್ತದ ಅಗತ್ಯ ಇದ್ದಲ್ಲಿ ಹಾಗೂ ರಕ್ತದಾನ ಮಾಡುವವರು ವಿನಾಯಕ (87623 76497), ಸುಚಿತ್(94494 47488), ಸಂಜೀವ್(98805 62605) ಅವರನ್ನು ಸಂಪರ್ಕಿಸಬಹುದು.
ಜಿಲ್ಲೆಯಲ್ಲಿ 25309 ಯುನಿಟ್ ರಕ್ತ ಸಂಗ್ರಹ ಗುರಿ ನೀಡಲಾಗಿತ್ತು. ಈಗಾಗಲೇ 45583 ಯುನಿಟ್ ರಕ್ತಸಂಗ್ರಹ ಮಾಡಲಾಗಿದೆ.ಡಾ.ಎಸ್.ಎಂ.ಹೊನಕೇರಿ, ಜಿಲ್ಲಾ ಆರೋಗ್ಯ ಅಧಿಕಾರಿ
ಇತ್ತೀಚಿನ ದಿನಗಳಲ್ಲಿ ಜಂಕ್‌ಫುಡ್ ಸೇವನೆಯಿಂದ ಯುವಜನರಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾಗುತ್ತಿದೆ. ಉತ್ತಮ ಆರೋಗ್ಯಪದ್ಧತಿ ರೂಢಿಸಿಕೊಂಡಲ್ಲಿ ಆರೋಗ್ಯವಂತರಾಗಿ ರಕ್ತದಾನ ಮಾಡಬಹುದು.ಡಾ.ಕವಿತಾ ಏವೂರ, ಸಹ ಪ್ರಾಧ್ಯಾಪಕಿ ಕಿಮ್ಸ್ ಪ್ಯಾಥಾಲಜಿ ವಿಭಾಗ
ರಾಷ್ಟ್ರೋತ್ಥಾನ ಕೇಂದ್ರದಲ್ಲಿ ಶನಿವಾರ ‘ರಕ್ತಬೂತ್ ಸೇವಾ’ ಆರಂಭಿಸಲಾಗುತ್ತಿದೆ. ಈ ಮೂಲಕ ಅಗತ್ಯ ಇರುವವರಿಗೆ 80 ನಿಮಿಷದಲ್ಲಿ ರಕ್ತ ನೀಡಲಾಗುವುದು.ದತ್ತಮೂರ್ತಿ ಕುಲಕರ್ಣಿ, ರಾಷ್ಟ್ರೋತ್ಥಾನ ಕೇಂದ್ರದ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.