ಉಣಕಲ್ ಕೆರೆ
ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆ ಅಡಿ ಅಭಿವೃದ್ಧಿಗೊಂಡಿರುವ ನಗರದ ಉಣಕಲ್ ಕೆರೆಯಲ್ಲಿ ನಾಲ್ಕು ವರ್ಷಗಳ ನಂತರ ಬೋಟಿಂಗ್‌ಗೆ ಮತ್ತೆ ಚಾಲನೆ ಸಿಗಲಿದ್ದು, ಧಾರವಾಡದ ಓಂ ವಾಟರ್ ಸ್ಪೋರ್ಟ್ಸ್ ಮತ್ತು ಅಡ್ವೆಂಚರ್ ಸಂಸ್ಥೆಗೆ ಟೆಂಡರ್ ನೀಡಲಾಗಿದೆ.
200 ಎಕರೆಗೂ ಹೆಚ್ಚು ವಿಸ್ತೀರ್ಣ ಇರುವ ಕೆರೆಯಲ್ಲಿ ಸೆ.28ರಂದು ಬೋಟಿಂಗ್‌ಗೆ ಚಾಲನೆ ನೀಡಲಾಗುತ್ತದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಮೇಯರ್ ಜ್ಯೋತಿ ಪಾಟೀಲ, ಮಹಾನಗರ ಪಾಲಿಕೆ ಸದಸ್ಯರು ಪಾಲ್ಗೊಳ್ಳಲಿದ್ದಾರೆ.
ಕೆರೆಯಲ್ಲಿ ಜಲಕಳೆ ಹೆಚ್ಚಾಗಿದ್ದರಿಂದ ಈ ಹಿಂದೆ ಬೋಟಿಂಗ್ ಸ್ಥಗಿತಗೊಳಿಸಲಾಗಿತ್ತು. ಈಗ ಮತ್ತೆ ಬೋಟಿಂಗ್ ಆರಂಭಿಸಲಾಗಿದ್ದು, ಸಾರ್ವಜನಿಕರು ಕೆರೆಯ ಸೌಂದರ್ಯ ಸವಿಯಬಹುದಾಗಿದೆ.
‘30 ಜನ ಸಂಚರಿಸುವ ದೊಡ್ಡ ಬೋಟ್, 10 ಜನರು ಸಂಚರಿಸುವ ಸ್ಪೀಡ್ ಬೋಟ್, ಜೆಟ್ ಸ್ಕೀ, ಕಯಾಕಿಂಗ್, ಪೆಡಲ್ ಬೋಟ್ ಇರಲಿವೆ. ನಿರ್ವಹಣೆ ಮತ್ತು ಸುರಕ್ಷತೆಗೆ ಮೂವರು ಲೈಫ್‌ಗಾರ್ಡ್‌ಗಳು ಕಾರ್ಯನಿರ್ವಹಿಸಲಿದ್ದಾರೆ. ಒಂದು ವರ್ಷದ ಅವಧಿಗೆ ಟೆಂಡರ್ ಪಡೆಯಲಾಗಿದೆ’ ಎಂದು ಸಂಸ್ಥೆಯ ಎಂದು ರಾಜು ಖಿಲಾರಿ ತಿಳಿಸಿದರು.
‘ಮೂರ್ನಾಲ್ಕು ವರ್ಷಗಳಿಂದ ಕೆರೆಯಲ್ಲಿ ಬೋಟಿಂಗ್ ಸ್ಥಗಿತವಾಗಿತ್ತು. ಜಲಕಳೆ ತೆಗೆದು ಸ್ವಚ್ಛಗೊಳಿಸಿ, ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಗೆ ವಾರ್ಷಿಕ ₹5 ಲಕ್ಷ ನೀಡುವ ಒಪ್ಪಂದದ ಮೇಲೆ ಟೆಂಡರ್ ನೀಡಲಾಗಿದೆ’ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.