ADVERTISEMENT

ಬ್ರಾಹ್ಮಣ ಸಮಾಜದ ರಕ್ತದಾನ ಶಿಬಿರ

​ಪ್ರಜಾವಾಣಿ ವಾರ್ತೆ
Published 2 ಜುಲೈ 2020, 14:19 IST
Last Updated 2 ಜುಲೈ 2020, 14:19 IST

ಹುಬ್ಬಳ್ಳಿ: ಕೊರೊನಾ ಮತ್ತು ಲಾಕ್‌ಡೌನ್‌ ಕಾರಣದಿಂದ ಜಿಲ್ಲೆಯಲ್ಲಿ ರಕ್ತದ ಅಭಾವ ತೀವ್ರವಾಗಿರುವ ಹಿನ್ನೆಲೆಯಲ್ಲಿ ಶಾ ದಾಮ್ಜಿ ಜಾಧವಜಿ ಛೆಡ್ಡಾ ಸ್ಮಾರಕ ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರದ ವತಿಯಿಂದ ಜುಲೈ 4ರಂದು ಬೆಳಿಗ್ಗೆ 8 ಗಂಟೆಯಿಂದ ಭವಾನಿನಗರ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬ್ರಾಹ್ಮಣ ಸಮುದಾಯದ ವತಿಯಿಂದ ರಕ್ತದಾನ ಶಿಬಿರ ನಡೆಯಲಿದೆ.

ಕೇಂದ್ರದ ಟ್ರಸ್ಟಿ ದತ್ತಮೂರ್ತಿ ಕುಲಕರ್ಣಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ತುರ್ತು ಸಂದರ್ಭಗಳಲ್ಲಿ ರಕ್ತ ಪಡೆಯಲು ಬರುವವರಿಂದ ರಕ್ತ ಪಡೆಯದೇ ದಾನ ಮಾಡುವ ಕೇಂದ್ರ ನಮ್ಮದಾಗಿದೆ. ಆದ್ದರಿಂದ ಬೇಡಿಕೆಯೂ ಹೆಚ್ಚು. ಈಗಾಗಲೇ ಜೈನ್‌, ಗುಜರಾತಿ, ಆರ್ಯವೈಶ್ಯ ಮತ್ತು ಲಿಂಗಾಯತ ಸಮಾಜಗಳ ಜನರಿಗೆ ರಕ್ತದಾನ ಶಿಬಿರ ಮಾಡಲಾಗಿದೆ. ಮುಂದೆಯೂ ಎಲ್ಲ ಸಮಾಜಗಳಿಂದ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುವುದು’ ಎಂದು ವಿವರಿಸಿದರು.

ಅಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಸರಳ ಕಾರ್ಯಕ್ರಮದಲ್ಲಿ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಲಾಗುತ್ತದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ಬ್ರಾಹ್ಮಣ ಸಮಾಜದ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.

ADVERTISEMENT

ಲಾಕ್‌ಡೌನ್‌ ಅವಧಿಯಲ್ಲಿ ನಮ್ಮ ಕೇಂದ್ರದಿಂದಲೇ ವಾಹನಗಳನ್ನು ಕಳಿಸಿ ಜನರಿಂದ ರಕ್ತ ಪಡೆದು ರೋಗಿಗಳಿಗೆ ವಿತರಿಸಲಾಗಿದೆ. ಈ ಅವಧಿಯಲ್ಲಿ 1,800 ಯೂನಿಟ್‌ ರಕ್ತ ಶೇಖರಣೆ ಮಾಡಲಾಗಿದ್ದು, ಪ್ಲಾಸ್ಮಾ, ಪ್ಯಾಕ್ಡ್‌ಸೆಲ್ಸ್‌ ಮತ್ತು ಪ್ಲೇಟ್‌ ಲೆಟ್ಸ್‌ ಎಂದು ವಿಭಜಿಸಿ ಅಂದಾಜು 4,000 ರೋಗಿಗಳಿಗೆ ಕೊಡಲಾಗಿದೆ ಎಂದು ವಿವರಿಸಿದರು.

ಮುಂದಿನ ದಿನಗಳಲ್ಲಿಯೂ ರಕ್ತದ ಅಭಾವ ತೀವ್ರವಾಗಲಿದ್ದು, ಈಗಿನಿಂದಲೇ ಹೆಚ್ಚು ಜನ ರಕ್ತದಾನ ಮಾಡಲು ಮುಂದಾದರೆ ಅಗತ್ಯ ಇರುವವರಿಗೆ ನೀಡಲು ಸಾಧ್ಯವಾಗುತ್ತದೆ. 10ರಿಂದ 15 ಜನ ಒಟ್ಟಿಗೆ ರಕ್ತದಾನಕ್ಕೆ ಆಸಕ್ತಿ ತೋರಿಸಿದರೆ ಅವರಿಗೆ ಸಂಸ್ಥೆಯಿಂದಲೇ ವಾಹನ ವ್ಯವಸ್ಥೆ ಮಾಡಲಾಗುವುದು ಎಂದು ವಿವರಿಸಿದರು.

ರಕ್ತದಾನ ಕೇಂದ್ರದ ವೈದ್ಯ ಎಸ್‌.ಎಸ್‌. ಸಂಗೊಳ್ಳಿ ಹಾಗೂ ಕಿರಣ ಗಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.