ADVERTISEMENT

ಹುಬ್ಬಳ್ಳಿ ಧಾರವಾಡದಲ್ಲಿ BRTS ಅವ್ಯವಸ್ಥೆ: ಪಾಲಿಕೆ ಸದಸ್ಯರ ತೀವ್ರ ಆಕ್ರೋಶ

ಹು–ಧಾ ಮಹಾನಗರ ಪಾಲಿಕೆ ಸಾಮಾನ್ಯ ಸಭೆ; ಬಿಆರ್‌ಟಿಎಸ್ ಎಂಡಿ ಕ್ಷಮೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 6:14 IST
Last Updated 26 ಆಗಸ್ಟ್ 2025, 6:14 IST
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಚರ್ಚೆ ನಡೆಸಿದರು
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಚರ್ಚೆ ನಡೆಸಿದರು   

ಹುಬ್ಬಳ್ಳಿ: ಬಿಆರ್‌ಟಿಎಸ್‌ ಮಾರ್ಗದ ಅವ್ಯವಸ್ಥೆ, ಚಿಗರಿ ಬಸ್‌ಗಳ ಕಾರ್ಯಾಚರಣೆಯಲ್ಲಿ ಸಮಸ್ಯೆ ಕುರಿತು ಇಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ಆಕ್ರೋಶ ವ್ಯಕ್ತವಾಯಿತು.

ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಶಿವು ಹಿರೇಮಠ, ‘ಚಿಗರಿ ಬಸ್‌ಗಳು ಮಾರ್ಗಮಧ್ಯೆ ಕೆಟ್ಟು ನಿಲ್ಲುತ್ತಿವೆ. ಬೆಂಕಿ ಕಾಣಿಸಿಕೊಳ್ಳುತ್ತಿದೆ. ಮಾರ್ಗದಲ್ಲಿ ರಾಡ್‌ಗಳು ಕಿತ್ತು ಬಂದಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು 

‘ಬಿಆರ್‌ಟಿಎಸ್‌ ವ್ಯವಸ್ಥಾಪಕ ನಿರ್ದೇಶಕರು (ಎಂ.ಡಿ) ಸಭೆಗೆ ಹಾಜರಾಗದೆ ಮೇಯರ್, ಸದನಕ್ಕೆ ಅಗೌರವ ತೋರಿದ್ದಾರೆ’ ಎಂದು ಸದಸ್ಯರು ಆಕ್ರೋಶ ಹೊರಹಾಕಿದರು. ‘ಜಿಲ್ಲಾಧಿಕಾರಿ ಸಭೆಯಲ್ಲಿ ಪಾಲ್ಗೊಂಡ ಕಾರಣ, ಎಂ.ಡಿ ಇಲ್ಲಿ ಬಂದಿಲ್ಲ’ ಎಂದು ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದರು.

ADVERTISEMENT

‘ಹಳೇ ಹುಬ್ಬಳ್ಳಿ ಭಾಗದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಪಾಲಿಕೆಯವರು ಕ್ರಮ ಕೈಗೊಳ್ಳುತ್ತಿಲ್ಲ. 2023–24ರಲ್ಲಿ 5,595 ಬೀದಿ ನಾಯಿಗಳನ್ನು ಹಿಡಿದು ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ (ಎಬಿಸಿ) ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.  ಪ್ರತಿ ದಿನ 15 ನಾಯಿಗಳಿಗೆ ಎಬಿಸಿ ಮಾಡಿದರೂ ಸಮಸ್ಯೆ ಏಕೆ ಬಗೆಹರಿದಿಲ್ಲ’ ಎಂದು ಎಐಎಂಐಎಂ ಸದಸ್ಯ ನಜೀರ್‌ ಅಹ್ಮದ್ ಹೊನ್ಯಾಳ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ ಶ್ರೀಧರ ದಂಡಪ್ಪನವರ, ‘ಎಬಿಸಿಗಾಗಿ 2022ರಲ್ಲಿ ಟೆಂಡರ್ ಕರೆಯಲಾಗಿತ್ತು. ಸದ್ಯ ಒಂದು ತಂಡ ಮಾತ್ರ ಕಾರ್ಯನಿರ್ವಹಿಸುತ್ತಿದೆ. ತಂಡಗಳನ್ನು ಹೆಚ್ಚಿಸಿ, ಇನ್ನು ಮುಂದೆ ವರ್ಷಕ್ಕೆ 10ರಿಂದ 12 ಸಾವಿರ ನಾಯಿಗಳನ್ನು ಹಿಡಿದು ಎಬಿಸಿ ಮಾಡಲಾಗುವುದು’ ಎಂದರು.

‘ಕಿರು ಅಕ್ಕ ಕೆಫೆ’ ಆರಂಭಿಸಲು ಹುಬ್ಬಳ್ಳಿಯ ಜೆ.ಸಿ ನಗರದ ಟೌನ್‌ಹಾಲ್‌ ಆವರಣದಲ್ಲಿ ಜಾಗ ನೀಡುವುದಕ್ಕೆ  ಬಿಜೆಪಿಯ ವೀರಣ್ಣ ಸವಡಿ, ಈರೇಶ ಅಂಚಟಗೇರಿ ಆಕ್ಷೇಪಿಸಿದರು. ‘ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಇರುವ ಟೌನ್‌ಹಾಲ್‌ ಅಭಿವೃದ್ಧಿಪಡಿಸಬೇಕು. ಅಲ್ಲಿ ಅಕ್ಕ ಕೆಫೆಗೆ ಜಾಗ ನೀಡಬಾರದು. ಅದರ ನಿರ್ವಹಣೆಗೆ ಪಾಲಿಕೆಯಿಂದ ಯಾವುದೇ ಅನುದಾನ ನೀಡಬಾರದು’ ಎಂದರು. ‘ಟೌನ್‌ಹಾಲ್‌ ಬದಲು ಬೇರೆ ಕಡೆ ಸೂಕ್ತ ಜಾಗ ಒದಗಿಸಬೇಕು’ ಎಂದು ಮೇಯರ್ ಜ್ಯೋತಿ ಪಾಟೀಲ ಹೇಳಿದರು.

‘ಹಳೇ ಹುಬ್ಬಳ್ಳಿ ಆಸ್ಪತ್ರೆಯನ್ನು ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆ ಜಂಟಿಯಾಗಿ ನಿರ್ವಹಿಸಬೇಕು. ಆರೋಗ್ಯ ಸುರಕ್ಷಾ ಸಮಿತಿಯಲ್ಲಿ ಮೇಯರ್ ಅವರನ್ನು ಸದಸ್ಯರನ್ನಾಗಿ ಸೇರಿಸಬೇಕು ಎಂದು ಮೇಯರ್ ಆದೇಶಿಸಿದರು.

‘ಅಮ್ಮಿನಬಾವಿಯಿಂದ ಧಾರವಾಡಕ್ಕೆ ಬರುವ 24X7 ಕುಡಿಯುವ ನೀರಿನ ಕಾಮಗಾರಿಯ ಪೈಪ್‌ಲೈನ್ ಅಳವಡಿಕೆ ಕಾರ್ಯ ಅಪೂರ್ಣವಾಗಿದೆ’ ಎಂದು ಸದಸ್ಯ ಚಂದ್ರಶೇಖರ ಮನಗುಂಡಿ ಆರೋಪಿಸಿದರು.

ಇದಕ್ಕೆ ಉತ್ತರಿಸಿದ ಕೆಯುಐಡಿಎಫ್‌ಸಿ ಕಾರ್ಯನಿರ್ವಾಹಕ ಎಂಜಿನಿಯರ್‌, ‘ಪರಿಹಾರ ಹಣ ಬಿಡುಗಡೆ ಆಗದ ಕಾರಣ ಕಾಮಗಾರಿ ವಿಳಂಬವಾಗಿತ್ತು. ಈಗ ಹಣ ಮಂಜೂರಾಗಿದ್ದು, 10 ದಿನದಲ್ಲಿ ಕಾಮಗಾರಿ ಪೂರ್ಣ ಆಗಲಿದೆ’ ಎಂದರು. ಪಾಲಿಕೆ ಹೇಳಿದ ರೀತಿ ಎಲ್‌ ಆ್ಯಂಡ್‌ ಟಿ, ಕೆಯುಐಡಿಎಫ್‌ಸಿ ಕಾಮಗಾರಿ ನಿರ್ವಹಿಸಬೇಕು. ಕಾಮಗಾರಿ ಕುರಿತು ವಾರ್ಡ್‌ಗೆ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದು ಮೇಯರ್ ಹೇಳಿದರು.

---

ಬಿಆರ್‌ಟಿಎಸ್‌ ಸಂಸ್ಥೆಗೆ ಪಾಲಿಕೆಯಿಂದ ಸೆಸ್‌ ನೀಡುವುದು ನಿಲ್ಲಿಸಬೇಕು. ಸಂಸ್ಥೆಯ ಎಂ.ಡಿ ಸಭೆಗೆ ಬಂದು ಕ್ಷಮೆ ಕೇಳಬೇಕು. ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ರಾಜ್ಯಪಾಲರಿಗೆ ಪತ್ರ ಬರೆಯಬೇಕು

-ಜ್ಯೋತಿ ಪಾಟೀಲ ಮೇಯರ್

ಕಸ ಸಂಗ್ರಹಿಸುವ ಟ್ರ್ಯಾಕ್ಟರ್‌ಗಳಲ್ಲಿಯೇ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಬಾರದು. ಇದರಿಂದ ಜನರ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತದೆ

-ಕವಿತಾ ಕಬ್ಬೇರ ಸದಸ್ಯೆ

ಸಾರ್ವಜನಿಕ ಶೌಚಾಲಯಗಳ ಕೊರತೆಯಿಂದ ಸಮಸ್ಯೆ ಆಗುತ್ತಿದೆ. ಸಾರ್ವಜನಿಕ ಶೌಚಾಲಯ ಕಟ್ಟಡವನ್ನು ನೆಲಸಮ ಮಾಡಿ ಬೇರೆ ಉದ್ದೇಶಕ್ಕೆ ಬಳಸುವ ಮುನ್ನ ಜನರಿಂದ ಆಕ್ಷೇಪಣೆ ಆಹ್ವಾನಿಸಬೇಕು

-ತಿಪ್ಪಣ್ಣ ಮಜ್ಜಗಿ ಸದಸ್ಯ

ಪಾಲಿಕೆ ಸಭಾಭವನ; ಕಾಮಗಾರಿ ಆರಂಭಿಸಲು ಸೂಚನೆ

‘ಪಾಲಿಕೆ ಆವರಣದಲ್ಲಿ ಸಭಾಭವನ ನಿರ್ಮಾಣ ಕಾಮಗಾರಿಗೆ ₹5 ಕೋಟಿ ಬಿಡುಗಡೆಯಾಗಿತ್ತು. ಕಾಮಗಾರಿ ಏಕೆ ಆರಂಭಿಸಿಲ್ಲ’ ಎಂದು ವೀರಣ್ಣ ಸವಡಿ ಪ್ರಶ್ನಿಸಿದರು. ವಿರೋಧ ಪಕ್ಷದ ನಾಯಕ ಇಮ್ರಾನ್ ಯಲಿಗಾರ ‘ಕಾಮಗಾರಿಗಾಗಿ ತೋಡಲಾದ ತಗ್ಗಿನಲ್ಲಿ ನೀರು ಸಂಗ್ರಹವಾಗಿದೆ. ಅದರಲ್ಲಿ ಬಿದ್ದು ಸತ್ತರೆ ಯಾರು ಹೊಣೆ’ ಎಂದು ಪ್ರಶ್ನಿಸಿದರು. ‘ಅಕ್ಕಪಕ್ಕ ಪಾರಂಪರಿಕ ಕಟ್ಟಡಗಳು ಇರುವ ಕಾರಣ ಕಟ್ಟಡದ ವಿನ್ಯಾಸ ಬದಲಿಸಬೇಕಿದೆ. ಹೀಗಾಗಿ ಕಾಮಗಾರಿ ವಿಳಂಬವಾಗಿದೆ’ ಎಂದು ಆಯುಕ್ತ ರುದ್ರೇಶ ಘಾಳಿ ಹೇಳಿದರು. ‘ಸಾಮಾನ್ಯ ಆಡಳಿತ ಕಚೇರಿಯ ಕಟ್ಟಡ ಸೇರಿ ಅಗತ್ಯ ಇರುವ ಕಟ್ಟಡ ತೆರವು ಮಾಡಿ ಸಭಾಭವನ ಕಾಮಗಾರಿ ಆರಂಭಿಸಬೇಕು; ಎಂದ ಜ್ಯೋತಿ ಪಾಟೀಲ ಸೂಚಿಸಿದರು.

ಪಾರ್ಕಿಂಗ್ ಶುಲ್ಕ ಪರ ವಿರೋಧ

‘ಪಾರ್ಕಿಂಗ್ ಶುಲ್ಕ ಸಂಗ್ರಹಿಸಲು ಟೆಂಡರ್ ಪಡೆದವರು ಜನರಿಗೆ ಕಿರುಕುಳ ನೀಡುತ್ತಾರೆ. ನಗರದಲ್ಲಿ ಯಾವ ರಸ್ತೆಯೂ ಸರಿ ಇಲ್ಲ. ಸೌಲಭ್ಯ ನೀಡದಿರುವಾಗ ಪಾರ್ಕಿಂಗ್ ಶುಲ್ಕ ಯಾಕೆ ಸಂಗ್ರಹಿಸಬೇಕು? ಈ ಟೆಂಡರ್ ರದ್ದುಪಡಿಸಬೇಕು’ ಎಂದು ಶಿವು ಮೆಣಸಿನಕಾಯಿ ಹೇಳಿದರು. ಕಾಂಗ್ರೆಸ್‌ನ ಶಂಭುಗೌಡ ಸಾಲಮನಿ ಸುವರ್ಣಾ ಕಲ್ಲಕುಂಟ್ಲ ಕೂಡ ಧ್ವನಿಗೂಡಿಸಿದರು. ‘ಅಂಗಡಿಕಾರರ ವಾಹನ ನಿಲುಗಡೆಗೆ ಉಚಿತ ಪಾಸ್ ನೀಡಬೇಕು. ಟೆಂಡರ್‌ ಪಡೆದವರು ಜನರ ಜೊತೆ ಅಗೌರವದಿಂದ ನಡೆದುಕೊಂಡರೆ ಕ್ರಮ ಕೈಗೊಳ್ಳಬೇಕು. ಪಾದಚಾರಿ ಮಾರ್ಗ ಒತ್ತುವರಿಯಾಗಿದ್ದರೆ ಪರಿಶೀಲಿಸಿ ತೆರವು ಮಾಡಬೇಕು’ ಎಂದು ‌ಮೇಯರ್ ಜ್ಯೋತಿ ಪಾಟೀಲ ಹೇಳಿದರು.

ಪಾಲಿಕೆ ಸದಸ್ಯರ ಗೌರವಧನ ಹೆಚ್ಚಳ; ಠರಾವು

ಮೇಯರ್‌ ಗೌರವಧನವನ್ನು ₹25 ಸಾವಿರ ಉಪಮೇಯರ್‌ಗೆ ₹20 ಸಾವಿರ ಮತ್ತು ಪಾಲಿಕೆ ಸದಸ್ಯರ ಗೌರವಧನವನ್ನು ₹15 ಸಾವಿರಕ್ಕೆ ಹೆಚ್ಚಿಸಿ ಠರಾವು ಪಾಸು ಮಾಡಲಾಯಿತು. ‘2021ರಿಂದ ಗೌರವಧನ ಹೆಚ್ಚಳವಾಗಿಲ್ಲ. ಈ ಬಗ್ಗೆ ಠರಾವು ಪಾಸು ಮಾಡಿ ಸರ್ಕಾರಕ್ಕೆ ಕಳಿಸಿದರೂ ಯಾವುದೇ ನಿರ್ಣಯವಾಗಿಲ್ಲ. ಹೀಗಾಗಿ ಅದನ್ನು ನೇರವಾಗಿ ಅನುಷ್ಠಾನಗೊಳಿಸಬೇಕು’ ಎಂದು ಈರೇಶ ಅಂಚಟಗೇರಿ ಹೇಳಿದರು. ‘ಸದಸ್ಯರ ಗೌರವಧನ ಹೆಚ್ಚಳದ ಜತೆಗೆ ಸಾಮಾನ್ಯ ಸಭೆ ಭತ್ಯೆ ಹೆಚ್ಚಿಸಬೇಕು’ ಎಂದು ಶಿವು ಹಿರೇಮಠ ಒತ್ತಾಯಿಸಿದರು.

ಅಭಿವೃದ್ಧಿಯಲ್ಲಿ ರಾಜಕೀಯ; ಆಕ್ರೋಶ

ಧಾರವಾಡ ವಿಧಾನಸಭಾ ಕ್ಷೇತ್ರಕ್ಕೆ ಮಂಜೂರಾದ ₹10 ಕೋಟಿ ಅನುದಾನದ ಕ್ರಿಯಾ ಯೋಜನೆಗೆ ಮಂಜೂರಾತಿ ನೀಡುವ ಕುರಿತು ಮುಂದಿನ ಸಭೆಯಲ್ಲಿ  ಮಂಡಿಸಬೇಕು ಎಂದು ಜ್ಯೋತಿ ಪಾಟೀಲ ಸೂಚಿಸಿದರು. ‘ಈ ವಿಷಯ ಕುರಿತು ಕಳೆದ ಸಾಮಾನ್ಯ ಸಭೆಯ ವಿಷಯ ಪಟ್ಟಿಯಲ್ಲಿ ಚರ್ಚೆಗೆ ತೆಗೆದುಕೊಳ್ಳಲಿಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕ ವಿನಯ ಕುಲಕರ್ಣಿ ಅವರು  ರಾಜ್ಯ ಸರ್ಕಾರದಿಂದ ಅನುದಾನ ತಂದಿದ್ದಾರೆ. ಆದರೆ ಸಭೆಯಲ್ಲಿ ಅವಳಿನಗರದ ಅಭಿವೃದ್ದಿಯ ವಿಷಯ ಚರ್ಚೆ ಮಾಡದೆ ಬಿ.ಜೆ.ಪಿ ಸದಸ್ಯರು ರಾಜಕೀಯ  ಮಾಡುತ್ತಿದ್ದಾರೆ. ಪಾಲಿಕೆಯಲ್ಲಿ 20 ವರ್ಷಗಳಿಂದ ಅಧಿಕಾರದಲ್ಲಿದ್ದರೂ ರಸ್ತೆಗಳ ಅಭಿವೃದ್ದಿಯಾಗಿಲ್ಲ’ ಎಂದು ಪಾಲಿಕೆಯ ವಿರೋಧ  ಪಕ್ಷದ ನಾಯಕ  ಇಮ್ರಾನ್  ಯಲಿಗಾರ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.