ADVERTISEMENT

ಬಿಆರ್‌ಟಿಎಸ್ ಮಾರ್ಗ: ಲಘು ವಾಹನ ಸಂಚಾರಕ್ಕೆ ಮನವಿ

ಹೊಸೂರು ಕ್ರಾಸ್‌ ಬಿಆರ್‌ಟಿಎಸ್ ನಿಲ್ದಾಣದಿಂದ ಧಾರವಾಡದವರೆಗೆ ಚಿಗರಿ ಬಸ್‌ನಲ್ಲಿ ಸಂಚರಿಸಿದ ಸಚಿವ ಸಂತೋಷ ಲಾಡ್

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 7:28 IST
Last Updated 7 ಸೆಪ್ಟೆಂಬರ್ 2025, 7:28 IST
ಹುಬ್ಬಳ್ಳಿಯ ಹೊಸೂರು ಕ್ರಾಸ್‌ ಬಿಆರ್‌ಟಿಎಸ್‌ ನಿಲ್ದಾಣದ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಅವರು ಬಿಆರ್‌ಟಿಎಸ್‌,  ಎನ್‌ಡಬ್ಲ್ಯೂಕೆಆರ್‌ಟಿಸಿ ಹಾಗೂ ಸಂಚಾರ ಪೊಲೀಸ್‌ ಅಧಿಕಾರಿಗಳಿಂದ ಮಾಹಿತಿ ಪಡೆದರು. ಹು–ಧಾ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಧಾರವಾಡ ಧ್ವನಿ ಸಂಘಟನೆಯವರು ಹಾಜರಿದ್ದರು
ಹುಬ್ಬಳ್ಳಿಯ ಹೊಸೂರು ಕ್ರಾಸ್‌ ಬಿಆರ್‌ಟಿಎಸ್‌ ನಿಲ್ದಾಣದ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಅವರು ಬಿಆರ್‌ಟಿಎಸ್‌,  ಎನ್‌ಡಬ್ಲ್ಯೂಕೆಆರ್‌ಟಿಸಿ ಹಾಗೂ ಸಂಚಾರ ಪೊಲೀಸ್‌ ಅಧಿಕಾರಿಗಳಿಂದ ಮಾಹಿತಿ ಪಡೆದರು. ಹು–ಧಾ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಧಾರವಾಡ ಧ್ವನಿ ಸಂಘಟನೆಯವರು ಹಾಜರಿದ್ದರು   

ಹುಬ್ಬಳ್ಳಿ: ‘ಹೊಸೂರು ಕ್ರಾಸ್‌ ಬಿಆರ್‌ಟಿಎಸ್‌ ನಿಲ್ದಾಣದಿಂದ ಪ್ರೆಸಿಡೆಂಟ್‌ ಹೋಟೆಲ್‌ ತನಕ ಹಾಗೂ ನವಲೂರುನಿಂದ ಧಾರವಾಡದ ಜ್ಯುಬಿಲಿ ವೃತ್ತದವರೆಗೆ ಬಿಆರ್‌ಟಿಎಸ್‌ ಮಾರ್ಗದಲ್ಲಿ ಸಾರ್ವಜನಿಕರ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಬೇಕು’ ಎಂದು ಧಾರವಾಡ ಧ್ವನಿ ಸಂಘಟನೆಯವರು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರಿಗೆ ಮನವಿ ಮಾಡಿದರು.

ಶನಿವಾರ ಸಚಿವರು ಹೊಸೂರು ಕ್ರಾಸ್‌ ಬಿಆರ್‌ಟಿಎಸ್ ನಿಲ್ದಾಣದಿಂದ ಧಾರವಾಡದವರೆಗೆ ಚಿಗರಿ ಬಸ್‌ನಲ್ಲಿ ಸಂಚಾರ ನಡೆಸಿ, ಬಿಆರ್‌ಟಿಎಸ್‌ ಕೆಲ ನಿಲ್ದಾಣಗಳನ್ನು ಖುದ್ದು ಪರಿಶೀಲಿಸಿ, ಚಿಗರಿ ಬಸ್‌ ಸೇವೆ ಹಾಗೂ ಸಮಸ್ಯೆ ಕುರಿತು ಅಧಿಕಾರಿಗಳು ಹಾಗೂ ಸಂಘಟನೆಯವರಿಂದ ಮಾಹಿತಿ ಪಡೆದರು.

‘ಬಿಆರ್‌ಟಿಎಸ್‌ ಮಾರ್ಗದಲ್ಲಿ ಚಿಗರಿ ಬಸ್‌ಗಳ ಸಂಚಾರ ವಿರಳವಿರುತ್ತದೆ. ಈ ಮಾರ್ಗದ ಪ್ರಮುಖ ಆಯ್ದ ನಿಲ್ದಾಣಗಳ ಮಧ್ಯ ದ್ವಿಚಕ್ರ ವಾಹನ, ಕಾರು ಸೇರಿದಂತೆ ಸಾರ್ವಜನಿಕರ ಇತರೆ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಬೇಕು. ಇದರಿಂದ ತುರ್ತು ಕಾರ್ಯಗಳಿಗೆ ಹೋಗುವವರಿಗೆ ಅನುಕೂಲವಾಗುತ್ತದೆ‘ ಎಂದು ಧಾರವಾಡ ಧ್ವನಿ ಸಂಘಟನೆಯ ಈಶ್ವರ ಶಿವಳ್ಳಿ ಮನವಿ ಮಾಡಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತ್ವರಿತವಾಗಿ ಸೇವೆ ಕಲ್ಪಿಸುವ ಉದ್ದೇಶದಿಂದ ಬಿಆರ್‌ಟಿಎಸ್‌ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಚಿಗರಿ ಬಸ್‌ ಸಂಚಾರ ಮಾರ್ಗದಲ್ಲಿ ಸಾರ್ವಜನಿಕರ ಲಘು ವಾಹನಗಳ ಸಂಚಾರಕ್ಕೆ (ಮಿಕ್ಸ್‌ ಟ್ರಾಫಿಕ್‌) ಅವಕಾಶ ನೀಡಲು ಬರುವುದಿಲ್ಲ. ಇದರಲ್ಲಿಯೇ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲು ಏನೆಲ್ಲಾ ಸಾಧ್ಯತೆಯಿದೆ ಎಂಬುದನ್ನು ಪರಿಶೀಲಿಸಿ, ಸರ್ವೆ ಮಾಡಲಾಗುತ್ತಿದೆ’ ಎಂದರು.

‘ರಾಯಾಪುರ ಬಳಿಯ ಗಾರ್ಮೆಂಟ್ಸ್‌, ಕೈಗಾರಿಕೆಗಳಿಗೆ ನಿತ್ಯ ನೂರಾರು ಕಾರ್ಮಿಕರು ಸಂಚರಿಸುತ್ತಿದ್ದಾರೆ. ಗಾರ್ಮೆಂಟ್ಸ್‌ ಬಳಿ ಸಿಗ್ನಲ್‌ ಅಳವಡಿಸಬೇಕು. ಮೇಲ್ಸೇತುವೆ ನಿರ್ಮಿಸಬೇಕು’ ಎಂದು ಮನವಿ ಮಾಡಿದರು.

‘ತಾಂತ್ರಿಕ ದೋಷಗಳಿದಾಗಿ ಆಗಾಗ ಚಿಗರಿ ಬಸ್‌ಗಳು ಸಂಚಾರ ಮಾರ್ಗ ಮಧ್ಯದಲ್ಲಿಯೇ ಕೆಟ್ಟು ನಿಲ್ಲುತ್ತವೆ. ಇದರಿಂದಾಗಿ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಬಸ್‌ಗಳ ನಿರ್ವಹಣೆ, ದುರಸ್ತಿಗೆ ಆದ್ಯತೆ ನೀಡಬೇಕು‘ ಎಂದು ಕೋರಿದರು. 

‘ಚಿಗರಿ ಬಸ್‌ಗಳ ನಿರ್ವಹಣೆ ಸಮಸ್ಯೆ ಕುರಿತು ಮಾಹಿತಿಯಿದೆ. ಬಿಆರ್‌ಟಿಸಿ ಹಾಗೂ ಎನ್‌ಡಬ್ಲ್ಯೂಕೆಆರ್‌ಟಿಸಿ ಅಧಿಕಾರಿಗಳಿಗೆ ಬಸ್‌ಗಳ ವ್ಯವಸ್ಥಿತ ನಿರ್ವಹಣೆ, ದುರಸ್ತಿಗೆ ಸೂಚಿಸಲಾಗಿದೆ. ಹೊಸ ಬಸ್‌ಗಳ ಖರೀದಿಸುವ ಪ್ರಯತ್ನಯೂ ನಡೆದಿದೆ‘ ಎಂದು ಸಚಿವರು ಹೇಳಿದರು.

ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ, ಬಿಆರ್‌ಟಿಎಸ್‌ ವ್ಯವಸ್ಥಾಪಕ ನಿರ್ದೇಶಕಿ ಸಾವಿತ್ರಿ ಕಡಿ, ಹು–ಧಾ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಹಾಗೂ ಬಿಆರ್‌ಟಿಎಸ್‌ ಅಧಿಕಾರಿಗಳು ಇದ್ದರು. 

ಹುಬ್ಬಳ್ಳಿಯ ಕರ್ನಾಟಕ ದಲಿತ ವಿಮೋಚನಾ ಸಮಿತಿ (ಹುಬ್ಬಳ್ಳಿ– ಶಹರ)ಯವರು ಸಚಿವ ಸಂತೋಷ ಲಾಡ್‌ ಅವರಿಗೆ ಮನವಿ ಸಲ್ಲಿಸಿದರು

‘ಚಿಗರಿ ಬಸ್‌ಗೆ ವೇಗ ಮಿತಿ ನಿಗದಿಗೊಳಿಸಿ’

‘ಬಿಆರ್‌ಟಿಎಸ್‌ ಮಾರ್ಗದಲ್ಲಿನ ಶಾಲೆ ಕಾಲೇಜು ಸೇರಿದಂತೆ ಜನದ‌ಟ್ಟಣೆ ಪ್ರದೇಶದ ಬಳಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲಕ್ಕಾಗಿ ಮೇಲ್ಸೇತುವೆ ನಿರ್ಮಾಣ ಮಾಡಬೇಕು‘ ಎಂದು ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಸಚಿವ ಸಂತೋಷ ಲಾಡ್‌ ಅವರಿಗೆ ಮನವಿ ಸಲ್ಲಿಸಿದರು.

‘ಚಿಗರಿ ಬಸ್‌ಗಳಿಗೆ ವೇಗ ಮಿತಿ ನಿಗದಿಗೊಳಿಸಬೇಕು. ಬಿವಿಬಿ ಬಿಆರ್‌ಟಿಎಸ್‌ ನಿಲ್ದಾಣದಲ್ಲಿ 100ನೇ ಸಂಖ್ಯೆಯ ಚಿಗರಿ ಬಸ್‌ ನಿಲ್ಲಿಸಲು ಸೂಚಿಸಬೇಕು’ ಎಂದು ಒತ್ತಾಯಿಸಿದರು.

ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ದರ್ಶನ ಹೆಗಡೆ ಪ್ರಮುಖ್‌ ವಿಕ್ರಂ ಗಲಾಂಡೆ ಅನ್ಮೋಲ್ ಕಲಬುರ್ಗಿ ಮನೋಜ್‌ ಲೋಕೇಶ್‌ ಇದ್ದರು.   

ಮೇಲ್ಸೇತುವೆಗೆ ಲಿಫ್ಟ್‌ ಅಳವಡಿಸಲು ಮನವಿ

‘ಹುಬ್ಬಳ್ಳಿ ಶಹರ ಮಹಿಳಾ ವಿದ್ಯಾಪೀಠ ಬಳಿಯ ಬಿಆರ್‌ಟಿಎಸ್‌ ಬಸ್‌ ನಿಲ್ದಾಣದ ಬಳಿ ನಿರ್ಮಿಸಿರುವ ಮೇಲ್ಸೇತುವೆ ಅವೈಜ್ಞಾನಿಕವಾಗಿದ್ದು ಹಿರಿಯರು ಮಹಿಳೆಯರು ಅಂಗವಿಕಲರು ಹಾಗೂ ಮಕ್ಕಳು ಓಡಾಡಲು ತೊಂದರೆಯಾಗುತ್ತಿದ್ದು ಅದಕ್ಕೆ ಲಿಫ್ಟ್‌ ಅಳವಡಿಸಬೇಕು‘ ಎಂದು ಆಗ್ರಹಿಸಿ ಕರ್ನಾಟಕ ದಲಿತ ವಿಮೋಚನಾ ಸಮಿತಿ (ಹುಬ್ಬಳ್ಳಿ– ಶಹರ)ಯವರು ಸಚಿವ ಲಾಡ್‌ ಅವರಿಗೆ ಮನವಿ ಸಲ್ಲಿಸಿದರು.

‘ಹೊಸೂರು ಕ್ರಾಸ್‌ ಬಿಆರ್‌ಟಿಎಸ್‌ ನಿಲ್ದಾಣದ ಬಳಿ ನಿತ್ಯ ಜನದಟ್ಟಣೆ ಇರುತ್ತದೆ. ಆಗಾಗ ಅಪಘಾತಗಳೂ ಸಂಭವಿಸುತ್ತಿರುತ್ತವೆ. ಇಲ್ಲಿನ ಮೇಲ್ಸೇತುವೆಯು ಜನರಿಗೆ ಅನುಕೂಲಕರವಾಗಿಲ್ಲ. ವೃದ್ಧರು ಅಂಗವಿಕಲರು ಹಾಗೂ ಮಹಿಳೆಯರಿಗೆ ಹತ್ತಲು ಕಷ್ಟವಾಗುತ್ತಿದೆ. ಹೀಗಾಗಿ ಮೇಲ್ಸೇತುವೆಗೆ ಲಿಫ್ಟ್‌ ಅಳವಡಿಸಬೇಕು‘ ಎಂದು ಮನವಿ ಮಾಡಿದರು.

ಸಮಿತಿಯ ಪ್ರಮುಖರಾದ ಶ್ರೀಧರ್ ಕಂದಗಲ್ ಗುರುನಾಥ ಕ್ವಾಟಿ ರಾಜು ವಾಘಮೋಡೆ ಮಹಮ್ಮದ್‌ ಬಂಡೆ ಆಕಾಶ ಮಲಗಾವಿ ಉಮೇಶ ರೊಟ್ಟಿಗವಾಡ ಉಮೇಶ ಆರ್. ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.