ADVERTISEMENT

ಜೋಶಿ ಅವರನ್ನ ಬದಲಾಯಿಸಲ್ಲ; ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 14:45 IST
Last Updated 27 ಮಾರ್ಚ್ 2024, 14:45 IST
ಬಿ.ಎಸ್.ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ   

ಹುಬ್ಬಳ್ಳಿ: ‘ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಪ್ರಲ್ಹಾದ ಜೋಶಿ ಅವರನ್ನು ಯಾವುದೇ ಕಾರಣಕ್ಕೂ ಬದಲಾಯಿಸಲ್ಲ. ಜೋಶಿ ಅವರ ಬಗ್ಗೆ ದಿಂಗಾಲೇಶ್ವರ ಸ್ವಾಮೀಜಿ ಅವರಿಗಾಗಿರುವ ತಪ್ಪು ಗ್ರಹಿಕೆಯನ್ನು ಹೋಗಲಾಡಿಸಲಾಗುವುದು’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜೋಶಿ ಅವರು ಎಸ್‌.ಸಿ, ಎಸ್‌.ಟಿ, ಹಿಂದುಳಿದ ವರ್ಗ, ವೀರಶೈವ ಲಿಂಗಾಯತ, ಬ್ರಾಹ್ಮಣ ಎನ್ನುವ ಭೇದಭಾವ ಎನ್ನದೆ ಎಲ್ಲರನ್ನೂ ಒಗ್ಗಟ್ಟಾಗಿ ತೆಗೆದುಕೊಂಡು ಹೋಗುತ್ತಾರೆ. ಈ ಸಲವೂ ಅವರು ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ’ ಎಂದು ತಿಳಿಸಿದರು. 

ಪ್ರಲ್ಹಾದ ಜೋಶಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ದಿಂಗಾಲೇಶ್ವರ ಸ್ವಾಮೀಜಿ ಅವರ ಜೊತೆ ದೂರವಾಣಿ ಮೂಲಕ ಮಾತನಾಡುವೆ. ಅವರಿಗಾಗಿರುವ ತಪ್ಪು ಗ್ರಹಿಕೆಯನ್ನು ಹೋಗಲಾಡಿಸುವೆ. ಮಠಾಧೀಶರು ಎಲ್ಲ ಕಾಲಕ್ಕೂ ನಮ್ಮ ಜೊತೆ ಇದ್ದಾರೆ’ ಎಂದರು.

ADVERTISEMENT

‘ಧಾರವಾಡ ಲೋಕಸಭಾ ಕ್ಷೇತ್ರದಿಂದ ಪ್ರಲ್ಹಾದ ಜೋಶಿ, ಬೆಳಗಾವಿಯಿಂದ ಜಗದೀಶ ಶೆಟ್ಟರ್‌ ಹಾಗೂ ಹಾವೇರಿಯಿಂದ ಬಸವರಾಜ ಬೊಮ್ಮಾಯಿ ಅವರು ನೂರಕ್ಕೆ ನೂರರಷ್ಟು ಗೆದ್ದೆಗೆಲ್ಲುತ್ತಾರೆ’ ಎಂದು ಹೇಳಿದರು.

‘ದಾವಣಗೆರೆ, ಬೆಳಗಾವಿಯಲ್ಲಿ ಪಕ್ಷದ ಅಭ್ಯರ್ಥಿ ಬಗ್ಗೆ ಎದ್ದಿದ್ದ ಅಸಮಾಧಾನವನ್ನು ಸರಿಪಡಿಸಿರುವೆ. ಅದೇ ರೀತಿ ಇಲ್ಲಿ ಆಗಿರುವ ಅಸಮಾಧಾನವನ್ನೂ ಸರಿಪಡಿಸುವೆ. ಎಲ್ಲರೂ ಒಗ್ಗಟ್ಟಾಗಿ ಹೋಗುತ್ತೇವೆ. ಬಿಜೆಪಿ– ಜೆಡಿಎಸ್‌ ಮೈತ್ರಿ ರಾಜ್ಯದ ಎಲ್ಲ 28 ಲೋಕಸಭಾ ಕ್ಷೇತ್ರಗಳನ್ನೂ ಗೆಲ್ಲಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ.ಆರ್‌. ಪಾಟೀಲ, ಮುಖಂಡರಾದ ಎನ್‌.ರವಿಕುಮಾರ್‌, ತಿಪ್ಪಣ್ಣ ಮಜ್ಜಗಿ, ಲಿಂಗರಾಜ ಅಂಗಡಿ, ಶಂಕರ ಪಾಟೀಲ ಮುನೇನಕೊ‍ಪ್ಪ, ಅಶೋಕ ಕಾಟವೆ, ಮೇಯರ್‌ ವೀಣಾ ಬರದ್ವಾಡ, ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.