ADVERTISEMENT

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಬಿ.ಎಸ್‌.ಯಡಿಯೂರಪ್ಪ, ಸಿದ್ದರಾಮಯ್ಯ ಕುಶಲೋಪರಿ

ಮುಖಾಮುಖಿಯಾದ ಮಾಜಿ ಮುಖ್ಯಮಂತ್ರಿಗಳು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2019, 17:59 IST
Last Updated 25 ಫೆಬ್ರುವರಿ 2019, 17:59 IST
‌ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸೋಮವಾರ ಬೆಳಿಗ್ಗೆ ರಾಜ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಪರಸ್ಪರ ಕೈಕುಲುಕುವ ಮೂಲಕ ಕುಶಲೋಪರಿ ವಿಚಾರಿಸಿದರು
‌ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸೋಮವಾರ ಬೆಳಿಗ್ಗೆ ರಾಜ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಪರಸ್ಪರ ಕೈಕುಲುಕುವ ಮೂಲಕ ಕುಶಲೋಪರಿ ವಿಚಾರಿಸಿದರು   

‌ಹುಬ್ಬಳ್ಳಿ:ರಾಜ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಸೋಮವಾರ ಬೆಳಿಗ್ಗೆ ಬೆಂಗಳೂರಿನಿಂದ ಒಂದೇ ವಿಮಾನದಲ್ಲಿ ನಗರಕ್ಕೆ ಬಂದರು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಎದುರುಗೊಂಡ ಇಬ್ಬರೂ, ರಾಜಕೀಯ ವೈರತ್ವವನ್ನುಮರೆತು ಪರಸ್ಪರ ಕೈಕುಲುಕಿ ಕುಶಲೋಪರಿ ವಿಚಾರಿಸಿದರು. ಬಳಿಕ ಯಡಿಯೂರಪ್ಪ ಅವರು ಹಾವೇರಿಗೆ, ಸಿದ್ದರಾಮಯ್ಯ ಅವರು ಬೆಳಗಾವಿ ಜಿಲ್ಲೆಯ ನಂದಗಡಕ್ಕೆ ತೆರಳಿದರು.

ಯಡಿಯೂರಪ್ಪ, ನಾನು ಒಳ್ಳೆಯ ಗೆಳೆಯರು- ಸಿದ್ದರಾಮಯ್ಯ ಟ್ವೀಟ್‌

ADVERTISEMENT

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರನ್ನು ನಗರದಲ್ಲಿ ಸೋಮವಾರ ಭೇಟಿಯಾದ ಕ್ಷಣವನ್ನು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

‘ರಾಜಕೀಯ ಜೀವನದ ಹೊರತಾಗಿ ಯಡಿಯೂರಪ್ಪನವರು ಮತ್ತು ನಾನು ಒಳ್ಳೆಯ ಗೆಳೆಯರು. ಇಲ್ಲಿ ಅಧಿಕಾರ, ಅಂತಸ್ತು ಯಾವುದೂ ಶಾಶ್ವತವಲ್ಲ. ಕೊನೆಗೊಂದು ದಿನ ಗೆಲ್ಲುವುದು ನಮ್ಮ ನಡುವಿನ ಮಾನವೀಯ ಸಂಬಂಧಗಳು ಮಾತ್ರ. ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಆಕಸ್ಮಿಕವಾಗಿ ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ಅವರನ್ನು ಭೇಟಿಯಾದ ಕ್ಷಣ’ ಎಂದು ಬರೆದಿದ್ದು, ಯಡಿಯೂರಪ್ಪ ಅವರೊಂದಿಗಿನ ಚಿತ್ರವನ್ನು ಹಾಕಿಕೊಂಡಿದ್ದಾರೆ.

ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಭಾರೀ ಸಂಖ್ಯೆಯಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

‘ಸಿದ್ದರಾಮಯ್ಯನವರೇ ನೀವು ಈ ಗುಣವನ್ನು ಬೆಳೆಸಿಕೊಂಡರೆ ನಾವು ಕೂಡ ನಿಮ್ಮನ್ನು ಬೆಂಬಲಿಸುತ್ತೇವೆ, ಪ್ರೀತಿಸುತ್ತೇವೆ. ಇಷ್ಟು ದಿನ ನಿಮ್ಮನ್ನು ದುರಹಂಕಾರಿ ಅನ್ಕೊಂಡಿದ್ದೆ. ಆದರೆ, ಈ ಒಂದು ಟ್ವೀಟ್‌ನಿಂದ ನಾನು ನಿಮ್ಮನ್ನು ಫಾಲೋ ಮಾಡಿದೆ’ ಎಂದು ಸುಧೀರ ಹಿರೇಮಠ ಅವರು ಮರು ಟ್ವೀಟ್‌ ಮಾಡಿದ್ದಾರೆ.

‘ಮಾನವೀಯ ಗುಣ ಅಂದ್ರೆ ಇದೇ’ ಎಂದು ನಾಗರಾಜಮೂರ್ತಿಗೌಡ ಎಂಬುವವರು ಪ್ರತಿಕ್ರಿಯಿಸಿದ್ದರೆ, ‘ತುಂಬಾ ಒಳ್ಳೆಯ ಚಿತ್ರ. ರಾಜಕೀಯ ಮತ್ತು ಮಾನವೀಯತೆ ಎರಡೂ ಬೇರೆ, ಬೇರೆ. ಇದೇ ನಮ್ಮ ಪರಂಪರೆ’ ಎಂದು ಗೋವಿಂದ ಕೇಲ್ಕರ್‌ ಹೇಳಿದ್ದಾರೆ. ‘ಶತ್ರುವಿನಲ್ಲೂ ಮಿತ್ರತ್ವ ಕಾಣುವ ಏಕೈಕ ನಾಯಕ ನಮ್ಮ ಸಿದ್ದರಾಮಯ್ಯ’ ಎಂದು ಮಧುಪ್ರಿಯಾ, ‘ನಮ್ಮ ಸಿದ್ದರಾಮಯ್ಯ ಗುಂಡಿಗೆಯಲ್ಲಿ ಯಾವ ನಂಜೂ ಇಲ್ಲ’ ಎಂದು ದರ್ಶನ ಎಂಬುವವರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.