ADVERTISEMENT

ಕಟ್ಟಡ ದುರಂತ ನೆನೆದು ಅಶ್ರುತರ್ಪಣ

132 ತಾಸುಗಳ ರಕ್ಷಣಾ ಕಾರ್ಯ ಅಂತ್ಯ l 19 ಶವ ಪತ್ತೆ, 60 ಜನರ ರಕ್ಷಣೆ

ಇ.ಎಸ್.ಸುಧೀಂದ್ರ ಪ್ರಸಾದ್
Published 25 ಮಾರ್ಚ್ 2019, 20:30 IST
Last Updated 25 ಮಾರ್ಚ್ 2019, 20:30 IST
ಕಟ್ಟಡ ದುರಂತದಲ್ಲಿ ಕಳೆದುಕೊಂಡ ಅಮೂಲ್ಯ ಜೀವಗಳ ನೆನೆದು ಭಾವುಕರಾದ ಜಿಲ್ಲಾಧಿಕಾರಿ ದೀಪಾ ಚೋಳನ್‌‌ –ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ
ಕಟ್ಟಡ ದುರಂತದಲ್ಲಿ ಕಳೆದುಕೊಂಡ ಅಮೂಲ್ಯ ಜೀವಗಳ ನೆನೆದು ಭಾವುಕರಾದ ಜಿಲ್ಲಾಧಿಕಾರಿ ದೀಪಾ ಚೋಳನ್‌‌ –ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ   

ಧಾರವಾಡ: ಇಲ್ಲಿನ ಕುಸಿದ ಕಟ್ಟಡದ ಅವಶೇಷಗಳ ಅಡಿ ಸಿಲುಕಿದ್ದ 19ನೇ ಮೃತದೇಹವನ್ನು ಸೋಮವಾರ ನಸುಕಿನಲ್ಲಿ ಹೊರತೆಗೆಯುವ ಮೂಲಕ ರಕ್ಷಣಾ ತಂಡಗಳು ತಮ್ಮ ಸುದೀರ್ಘ ಕಾರ್ಯಾಚರಣೆಗೆ ತೆರೆ ಎಳೆದವು. ದುರ್ಘಟನೆ ನೆನೆದು ಜಿಲ್ಲಾಧಿಕಾರಿ ದೀಪಾ ಚೋಳನ್ ಭಾವುಕರಾದರೆ, ಆಗಸದಲ್ಲಿ ಕವಿದ ಮೋಡಗಳೂ ನಾಲ್ಕು ಹನಿ ಸುರಿಸಿ ಅಶ್ರುತರ್ಪಣ ಸಲ್ಲಿಸಿದವು.

ಇಲ್ಲಿನ ಕುಮಾರೇಶ್ವರನಗರದಲ್ಲಿ ಮಾರ್ಚ್‌19ರಂದು ಮಧ್ಯಾಹ್ನ 3.30ರ ಸುಮಾರಿಗೆ ಏಕಾಏಕಿ ಕುಸಿದ ಕಟ್ಟಡದ ಅವಶೇಷಗಳ ಅಡಿಯಲ್ಲಿ 70ಕ್ಕೂ ಹೆಚ್ಚು ಜನ ಸಿಲುಕಿದ್ದರು. ಈ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು.

ರಕ್ಷಣಾ ಕಾರ್ಯಾಚರಣೆಗೆ ಮುನ್ನವೇ ದುರಂತ ನಡೆದ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಆರು ಜನರನ್ನು ರಕ್ಷಿಸಿದರೆ; ರಾಜ್ಯ ಮತ್ತು ಕೇಂದ್ರ ವಿಪತ್ತು ನಿರ್ವಹಣಾ ತಂಡಗಳು, ಅಗ್ನಿಶಾಮಕ ಸಿಬ್ಬಂದಿ ಸತತ 132 ಗಂಟೆಗಳ ಕಾರ್ಯಾಚರಣೆ ನಡೆಸಿ 54 ಜನರನ್ನು ಸುರಕ್ಷಿತವಾಗಿ ಹೊರತೆಗೆಯುವಲ್ಲಿ ಸಫಲವಾದವು.

ADVERTISEMENT

ಹಿಂದೆಂದೂ ಕಂಡರಿಯದಂಥ ದೊಡ್ಡ ದುರಂತಕ್ಕೆ ಧಾರವಾಡ ಜನ ಸಾಕ್ಷಿಯಾದರು. ಘಟನೆಯಿಂದ ಗಾಬರಿಯಾಗದೆ, ಸಂಯಮದಿಂದ ರಕ್ಷಣಾ ಕಾರ್ಯಕ್ಕೆ ನೆರವಾದರು. ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡವರಿಗೆ ಊಟೋಪಚಾರದ ವ್ಯವಸ್ಥೆ ಮಾಡಿದರು. ಅವಶೇಷಗಳ ಅಡಿಯಲ್ಲಿ ಸಿಲುಕಿದವರನ್ನು ಜೀವಂತ ಹೊರತೆಗೆದಾಗ ಚಪ್ಪಾಳೆ ತಟ್ಟುವ ಮೂಲಕ ರಕ್ಷಣಾ ತಂಡದ ಸಿಬ್ಬಂದಿಯನ್ನು ಪ್ರೋತ್ಸಾಹಿಸಿದರು.

ಕಟ್ಟಡ ದುರಂತದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯ ಪೂರ್ಣಗೊಳಿಸಿದ
ನಂತರ ಕೇಂದ್ರ ವಿಪತ್ತು ನಿರ್ವಹಣಾ ತಂಡದ ಶ್ವಾನದಳವನ್ನು ರಾಜ್ಯ
ಅಗ್ನಿಶಾಮಕ ಮತ್ತು ತುರ್ತುಸೇವೆಗಳ ನಿರ್ದೇಶಕ ವರದರಾಜನ್‌ಅಭಿನಂದಿಸಿದರು

ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ದೀಪಾ ಚೋಳನ್‌, ‘ಕುಸಿದ ಕಟ್ಟಡದ ಶೇ 98ರಷ್ಟು ಅವಶೇಷಗಳನ್ನು ಹೊರಕ್ಕೆ ಸಾಗಿಸಲಾಗಿದೆ. ಇದಕ್ಕೆ ಆದ ವೆಚ್ಚವನ್ನು ಇನ್ನಷ್ಟೇ ಲೆಕ್ಕ ಮಾಡಬೇಕಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಇರುವ ಬಹುಮಹಡಿ ಕಟ್ಟಡಗಳ ಸಾಮರ್ಥ್ಯದ ವಸ್ತುಸ್ಥಿತಿ ಅಧ್ಯಯನ ನಡೆಸಲು ತಂಡ ರಚಿಸಿ ಕೂಡಲೇ ವರದಿ ತರಿಸಿಕೊಳ್ಳಲಾಗುವುದು’ ಎಂದರು.

ಅಗ್ನಿಶಾಮಕ ಮತ್ತು ತುರ್ತುಸೇವೆ ಇಲಾಖೆಯ ಡಿಐಜಿ ಡಾ. ಬಿ.ಆರ್.ರವಿಕಾಂತೇಗೌಡ ಮಾತನಾಡಿ, ‘ಒಟ್ಟು 300ಕ್ಕೂ ಹೆಚ್ಚು ಸಿಬ್ಬಂದಿ ಈ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಧೈರ್ಯ ಮತ್ತು ಚಾಕಚಕ್ಯತೆಯಿಂದ ಕೆಲಸ ನಿರ್ವಹಿಸಿ ಈ ಮಾನವನಿರ್ಮಿತ ದುರಂತದಲ್ಲಿ ಸಿಲುಕಿದ ಅಮೂಲ್ಯ ಜೀವಗಳನ್ನು ರಕ್ಷಿಸಿದ್ದಾರೆ. ಉಳಿದವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂಬ ಬೇಸರವೂ ನಮಗಿದೆ’ ಎಂದರು.

ಎನ್‌ಡಿಆರ್‌ಎಫ್‌ನ ಕಮಾಂಡೆಂಟ್‌ ಝಾಹಿದ್‌ ಖಾನ್ ಮಾತನಾಡಿ, ‘ಕಟ್ಟಡ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ದೊಡ್ಡದಿರುತ್ತದೆ. ಆದರೆ ನಮ್ಮ ಈವರೆಗಿನ ಕಾರ್ಯಾಚರಣೆಗಳಲ್ಲಿ ಧಾರವಾಡ ಕಟ್ಟಡ ದುರಂತದಲ್ಲಿ ಬದುಕುಳಿದವರ ಸಂಖ್ಯೆ ಹೆಚ್ಚು ಎನ್ನುವುದು ನಮಗೂ ಹೆಮ್ಮೆಯ ಸಂಗತಿ’ ಎಂದರು.

ನಂತರ ಎರಡೂ ತಂಡಗಳನ್ನು ಜಿಲ್ಲಾಡಳಿತದ ಪರವಾಗಿ ಅಭಿನಂದಿಸಲಾಯಿತು. ಕಾರ್ಯಾಚರಣೆ ವೇಳೆ ಅವಶೇಷಗಳ ಅಡಿಯಲ್ಲಿ ದೊರೆತ 750 ಗ್ರಾಂ ತೂಕದ ಬೆಳ್ಳಿ ಗಣಪತಿಯನ್ನು ಎನ್‌ಡಿಆರ್‌ಎಫ್‌ ತಂಡ ಜಿಲ್ಲಾಧಿಕಾರಿಗೆ ಹಸ್ತಾಂತರಿಸಿತು. ರಾಜ್ಯ ಮತ್ತು ಕೇಂದ್ರ ತಂಡಗಳಿಗೆ ಸಾರ್ವಜನಿಕರು ಹೂವು, ಪೇಢೆ ನೀಡಿ ಗೌರವಿಸಿದರು.

ಆಪತ್ಕಾಲದಲ್ಲಿ ನೆರವಾದ ರಕ್ಷಣಾ ಸಿಬ್ಬಂದಿ, ಅವಶೇಷ ತೆರವುಗೊಳಿಸಲು ಸಲಕರಣೆ ನೀಡಿದ ಕಂಪನಿಗಳು, ಗಾಯಾಳುಗಳ ತ್ವರಿತ ಚಿಕಿತ್ಸೆಗೆ ಸ್ಪಂದಿಸಿದ ಆರೋಗ್ಯ ಇಲಾಖೆ, ವೃತ್ತಿಪರತೆ ಮೆರೆದ ಮಾಧ್ಯಮಗಳಿಗೆ ಅಧಿಕಾರಿಗಳು ಧನ್ಯವಾದ ಅರ್ಪಿಸಿದರು.

***

ಅತ್ಯುತ್ತಮ ಸೇವೆ ಸಲ್ಲಿಸಿದವರಿಗೆ ಬಹುಮಾನ ನೀಡಲು ಸರ್ಕಾರ ಉತ್ಸುಕವಾಗಿದ್ದು, ವರದಿ ಕಳುಹಿಸುವಂತೆ ಸೂಚಿಸಿದೆ. ಶೀಘ್ರದಲ್ಲಿ ವರದಿ ಸಲ್ಲಿಸಲಾಗುವುದು

–ಡಾ. ಬಿ.ಆರ್.ರವಿಕಾಂತೇಗೌಡ, ಡಿಐಜಿ, ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವೆಗಳು

ಈ ಕಾರ್ಯಾಚರಣೆ ಮೂಲಕ ನಮಗೂ ಕಲಿಯಲು ಸಾಕಷ್ಟು ಸಂಗತಿಗಳು ಸಿಕ್ಕವು. ಹೀಗಾಗಿ, ರಾಜ್ಯ ತಂಡದೊಂದಿಗೆ ಜತೆಗೂಡಿ ಪ್ರಮಾಣಿತ ಕಾರ್ಯ ವಿಧಾನ ಸಿದ್ಧಪಡಿಸಲು ನಿರ್ಧರಿಸಲಾಗಿದೆ.

–ಝಾಹಿದ್‌ ಖಾನ್‌, ಕಮಾಂಡೆಂಟ್‌, ಕೇಂದ್ರ ವಿಪತ್ತು ನಿರ್ವಹಣಾ ತಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.