ADVERTISEMENT

ಅಂಗವಿಕಲರ ಬಸ್ ಪಾಸ್ ನವೀಕರಣಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2024, 16:14 IST
Last Updated 16 ಜನವರಿ 2024, 16:14 IST
ಹುಬ್ಬಳ್ಳಿಯ ಹೊಸೂರು ಬಸ್ ನಿಲ್ದಾಣದಲ್ಲಿ ಅಂಗವಿಕಲರೊಬ್ಬರಿಗೆ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ನವೀಕೃತ ಪಾಸ್ ವಿತರಿಸಿದರು
ಹುಬ್ಬಳ್ಳಿಯ ಹೊಸೂರು ಬಸ್ ನಿಲ್ದಾಣದಲ್ಲಿ ಅಂಗವಿಕಲರೊಬ್ಬರಿಗೆ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ನವೀಕೃತ ಪಾಸ್ ವಿತರಿಸಿದರು   

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದಿಂದ 2023ನೇ ಸಾಲಿನಲ್ಲಿ ವಿತರಿಸಲಾಗಿರುವ ಅಂಗವಿಕಲರ ಬಸ್ ಪಾಸ್‌ಗಳನ್ನು ಪ್ರಸಕ್ತ ಸಾಲಿಗೆ ನವೀಕರಿಸಿಕೊಳ್ಳುವಂತೆ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದರು.

ಹೊಸೂರು ಬಸ್ ನಿಲ್ದಾಣದಲ್ಲಿ ಫಲಾನುಭವಿಗಳಿಗೆ ನವೀಕೃತ ಪಾಸ್ ವಿತರಿಸಿ ಅವರು ಮಾತನಾಡಿದರು.

2023 ನೇ ಸಾಲಿನಲ್ಲಿ ವಿತರಿಸಲಾಗಿರುವ ಅಂಗವಿಕಲರ ರಿಯಾಯಿತಿ ಬಸ್ ಪಾಸ್‌ಗಳ ಮಾನ್ಯತಾ ಅವಧಿಯು ಡಿ. 31ಕ್ಕೆ ಮುಕ್ತಾಯವಾಗಿದ್ದು, ನವೀಕರಣಕ್ಕೆ ಫೆಬ್ರುವರಿ 29ರವರೆಗೆ ಅವಧಿ ವಿಸ್ತರಿಸಲಾಗಿದೆ. ಅಷ್ಟರೊಳಗೆ ಪಾಸುಗಳ ನವೀಕರಣ ಮಾಡಿಸಿಕೊಳ್ಳಬೇಕು. ಅರ್ಹರು https://sevasindhuservices.Karnataka.gov.in ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು. ಹುಬ್ಬಳ್ಳಿ ಗ್ರಾಮೀಣ ಹಾಗೂ ಕುಂದಗೋಳ ತಾಲ್ಲೂಕಿನ ಫಲಾನುಭವಿಗಳು HUBLI RURAL M3 ಎಂದು ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಿ ಹೊಸೂರು ಬಸ್ ನಿಲ್ದಾಣದಲ್ಲಿ ಪಾಸ್ ಪಡೆಯಬೇಕು. ನವಲಗುಂದ ಮತ್ತು ಅಣ್ಣಿಗೇರಿ ತಾಲ್ಲೂಕಿನವರು DEPOT MANAGER NAVALAGUND ಎಂದು ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಿ ನವಲಗುಂದ ಬಸ್ ನಿಲ್ದಾಣದಲ್ಲಿ ಹಾಗೂ ಕಲಘಟಗಿ ತಾಲ್ಲೂಕಿನ ಫಲಾನುಭವಿಗಳು DEPOT MANAGER KALGHATAGI ಎಂದು ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಿ ಕಲಘಟಗಿ ಬಸ್ ನಿಲ್ದಾಣದಲ್ಲಿ ಪಾಸ್ ಪಡೆಯಬೇಕು.

ADVERTISEMENT

ಹೊಸದಾಗಿ ಪಾಸ್ ಪಡೆಯಲು HUBLI RURAL DIVISION OFFICE ಎಂದು ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಿ ಸಿಬಿಟಿ 4ನೇ ಮಹಡಿಯಲ್ಲಿರುವ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ಕಚೇರಿಯಲ್ಲಿ ಪಾಸ್ ಪಡೆಯಬಹುದು. ಪಾಸ್‌ಗೆ ವಾರ್ಷಿಕ ಶುಲ್ಕ ₹ 660ನ್ನು ನಿಗದಿಪಡಿಸಲಾಗಿದೆ. ಡಿ.ಡಿ. ಮೂಲಕ ಅಥವಾ ನಗದು ಮೂಲಕ ಪಾವತಿಸಬಹುದು ಎಂದು ಅವರು ಮಾಹಿತಿ ನೀಡಿದರು.

ವಿಭಾಗಿಯ ಸಂಚಾರ ಅಧಿಕಾರಿ ಕೆ.ಎಲ್. ಗುಡೆಣ್ಣವರ್ ವಿಭಾಗೀಯಯ ತಾಂತ್ರಿಕ ಇಂಜಿನಿಯರ್ ಪ್ರವೀಣ್ ಈಡೂರ, ಅಧಿಕಾರಿಗಳಾದ ಸುನಿಲ್ ವಾಡೆಕರ, ಸದಾನಂದ ಒಡೆಯರ, ಸಂಚಾರ ಅಧೀಕ್ಷಕ ಐ.ಜಿ. ಮಾಗಾಮಿ, ನಿಲ್ದಾಣಾಧಿಕಾರಿ ಸುಭಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.