ADVERTISEMENT

ಸಿಎಎಯಿಂದ ಯಾವುದೇ ಭಾರತೀಯನಿಗೆ ತೊಂದರೆ ಇಲ್ಲ:ಎನ್.ರವಿಕುಮಾರ

ಸಿದ್ಧಾರೂಢರ ಮೇಲೆ ಆಣೆ ಮಾಡಿದ ಎನ್‌. ರವಿಕುಮಾರ

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 16:00 IST
Last Updated 22 ಜನವರಿ 2020, 16:00 IST

ಹುಬ್ಬಳ್ಳಿ: ಪೌರತ್ವ (ತಿದ್ದುಪಡಿ) ಕಾಯ್ದೆಯಿಂದ ಯಾವುದೇ ಭಾರತೀಯರಿಗೂ ತೊಂದರೆಯಾಗುವುದಿಲ್ಲ. ಇದು ಸತ್ಯ. ತೊಂದರೆಯಾಗುವುದಿಲ್ಲ ಎಂದು ಸಿದ್ಧಾರೂಢರ ಮೇಲೆ ಆಣೆ ಮಾಡುತ್ತೇನೆ. ಕಾಂಗ್ರೆಸ್‌ ಸುಳ್ಳು ಹೇಳುತ್ತಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ ಆರೋಪಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಎ ವಿರೋಧಿಸುತ್ತಿರುವುದು ಅತ್ಯಂತ ದುರ್ದೈವದ ಸಂಗತಿ. ಕಾಂಗ್ರೆಸ್‌ ನಾಯಕರಾದ ಸಿ.ಎಂ. ಇಬ್ರಾಹಿಂ, ಸಿದ್ದರಾಮಯ್ಯ, ಸೋನಿಯಾಗಾಂಧಿ ಪೌರತ್ವಕ್ಕೆ ಧಕ್ಕೆಯಾಗುತ್ತಿದೆಯಾ ಎಂದು ಪ್ರಶ್ನಿಸಿದರು.

ದಲಿತ ವಿರೋಧಿ ಕಾಯ್ದೆ ಎನ್ನುತ್ತಿದ್ದಾರೆ. ಆದರೆ, ವಲಸೆ ಬಂದವರಲ್ಲಿ ಶೇ 70 ರಷ್ಟು ಮಂದಿ ದಲಿತರಿದ್ದಾರೆ. ದೌರ್ಜನ್ಯಕ್ಕೆ ಒಳಗಾಗಿ ಬಂದವರಿಗೆ, ಕಷ್ಟದಲ್ಲಿದ್ದವರಿಗೆ ಪೌರತ್ವ ಕೊಡುವುದು ಅಮಾನವೀಯವೇ ಎಂದು ಕಾಂಗ್ರೆಸ್‌ ಮುಖಂಡರನ್ನು ಕೇಳಿದರು.

ADVERTISEMENT

ಕಾಂಗ್ರೆಸ್‌ನ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ತೃಣಮೂಲ ಕಾಂಗ್ರೆಸ್‌ ಮಮತಾ ಬ್ಯಾನರ್ಜಿ ಮತ್ತಿತರರು ಈ ಹಿಂದೆ ವಲಸೆ ಬಂದವರಿಗೆ ಪೌರತ್ವ ನೀಡಬೇಕು ಎಂದು ಹೇಳಿಕೆ ನೀಡಿದ್ದರು. ಇದು ಸಂಸತ್‌ ಕಲಾಪದಲ್ಲಿ ದಾಖಲಾಗಿದೆ. ಆದರೂ, ವಿನಾಕಾರಣ ಜನರನ್ನು ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಜಾಗೃತಿ ಅಂಗವಾಗಿ ಈಗಾಗಲೇ 22.56 ಲಕ್ಷ ಮನೆಗಳಿಗೆ ತಲುಪಿದ್ದೇವೆ. 12.71 ಲಕ್ಷ ಜನರು ಮಿಸ್‌ ಕಾಲ್‌ ಮಾಡಿದ್ದಾರೆ. 6.69 ಲಕ್ಷ ಜನ ಸಹಿ ಮಾಡಿದ್ದಾರೆ. 1.59 ಲಕ್ಷ ಜನರು ಪತ್ರ ಬರೆದಿದ್ದಾರೆ. ಕಾಂಗ್ರೆಸ್‌ ಅಪಪ್ರಚಾರವನ್ನು ತಡೆಯುವ ಶಕ್ತಿ ಬಿಜೆಪಿ ಕಾರ್ಯಕರ್ತರಿಗಿದೆ ಎಂದು ಹೇಳಿದರು.

ಮುಸ್ಲಿಮರ ಮತ ಬೇಕಿಲ್ಲ ಎಂಬ ಶಾಸಕ ರೇಣುಕಾಚಾರ್ಯರ ಹೇಳಿಕೆ ಬಗ್ಗೆ ಪಕ್ಷದ ವೇದಿಕೆಯಲ್ಲಿ ಅವರಿಗೆ ಸೂಚನೆ ನೀಡಿದ್ದೇವೆ. ಎಲ್ಲ ವರ್ಗದವರ ಮತಗಳೂ ಬೇಕು ಎಂದರು.

ಮಂಗಳೂರಿನಲ್ಲಿ ಪತ್ತೆಯಾಗಿದ್ದ ಬಾಂಬ್‌ಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿಗಳಾದ ಎಚ್‌.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಬೇಜವಾಬ್ದಾರಿ ಹೇಳಿಕೆ ನೀಡಬಾರದು. ಪೊಲೀಸರ ಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಬಾಂಬ್ ಸ್ಫೋಟಗೊಳ್ಳುವ ಮೊದಲೇ ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಿದ್ದಾರೆ. ಆರೋಪಿಯೂ ಶರಣಾಗಿದ್ದಾನೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು. ಯಾರೇ ಆಗಲಿ ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸಬಾರದು ಎಂದರು.

ಮುಖಂಡರಾದ ದತ್ತಮೂರ್ತಿ ಕುಲಕರ್ಣಿ, ಹನುಮಂತಪ್ಪ ದೊಡ್ಡಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.